ಹತ್ತಿ ಬೆಳೆ ನಷ್ಟಕ್ಕೆ ಚಟ್ನಳ್ಳಿ ರೈತ ಆತ್ಮಹತ್ಯೆ, ತಕ್ಷಣ ಪರಿಹಾರ ನೀಡಿ : ರಾಚನಗೌಡ ಮುದ್ನಾಳ ಆಗ್ರಹ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಮಳೆ ಕೊರತೆಯಿಂದ ಹತ್ತಿ ಬೆಳೆ ನಷ್ಟವಾದ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಚಟ್ನಳ್ಳಿ ಗ್ರಾಮದ ರೈತ ಮಲ್ಲಿಕಾರ್ಜುನ (38) ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.

8 ಎಕರೆ ಜಮೀನನ್ನು ಗುತ್ತಿಗೆ ಆಧಾರದ ಮೇಲೆ ಕೃಷಿ ಮಾಡುತ್ತಿದ್ದ ಮಲ್ಲಿಕಾರ್ಜುನ ಅವರು ಈ ಋತುವಿನಲ್ಲಿ ಹತ್ತಿ ಬೀಜವನ್ನು ಎರಡು ಬಾರಿ ಬಿತ್ತನೆ ಮಾಡಿದ್ದರು. ಮಳೆ ಬಾರದೇ ಬೆಳೆ ಒಣಗಿದ ಕಾರಣ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು.

 ಮೃತ ರೈತ ಮಲ್ಲಿಕಾರ್ಜುನ 

ಜು. 6ರಂದು ಬೆಳಿಗ್ಗೆ ಅವರು ಕ್ರಿಮಿನಾಶಕ ಸೇವಿಸಿ ಜಮೀನಿಗೆ ತೆರಳಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಕುಟುಂಬಸ್ಥರು ಕೂಡಲೇ ಯಾದಗಿರಿ ಯೀಮ್ಸ್ ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆ ಫಲಕಾರಿಯಾಗದೇ ಜು. 7ರಂದು ಆಸ್ಪತ್ರೆಯಲ್ಲಿ ಮೃತಪಟ್ಟರು.

ರೈತನ ಸಾವಿನಿಂದ ಕುಟುಂಬಸ್ಥರು ದುಃಖದಲ್ಲಿದ್ದಾರೆ. ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ತಕ್ಷಣ ಪರಿಹಾರಕ್ಕೆ ಆಗ್ರಹ

ಘಟನೆಗೆ ಸಂತಾಪ ವ್ಯಕ್ತಪಡಿಸಿರುವ ಬಿಜೆಪಿ ಹಿರಿಯ ಮುಖಂಡ ಹಾಗೂ ಕರ್ನಾಟಕ ರಾಜ್ಯ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ರಾಚನಗೌಡ ಮುದ್ನಾಳ, ಮೃತ ರೈತನ ಕುಟುಂಬಕ್ಕೆ ಸರ್ಕಾರದಿಂದ ತಕ್ಷಣ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

“ಮಳೆ ಕೊರತೆಯಿಂದ ಬೆಳೆ ನಷ್ಟವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೃತ ಮಲ್ಲಿಕಾರ್ಜುನ ಅವರ ಕುಟುಂಬಕ್ಕೆ ತಕ್ಷಣ 10 ಲಕ್ಷ ರೂ. ಪರಿಹಾರ, ಸಾಲ ಮನ್ನಾ ಮತ್ತು ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು” ಎಂದು ಅವರು ಹೇಳಿದರು.

ಬರಗಾಲ ಪೀಡಿತ ಪ್ರದೇಶಗಳಿಗೆ ಸೂಕ್ತ ಪರಿಹಾರ ಘೋಷಿಸಿ, ರೈತರ ಸಮಸ್ಯೆಗೆ ಸ್ಪಂದಿಸಬೇಕು. ಇಲ್ಲವಾದಲ್ಲಿ ರೈತರ ಪರವಾಗಿ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *

Suddi Belaku