ಪತ್ರಕರ್ತರ ಮಕ್ಕಳು ಸಮಾಜದ ಮುಖ್ಯವಾಹಿನಿಗೆ ಬರಲಿ: ಶಾಸಕ ತುನ್ನೂರು

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ: ಪತ್ರಕರ್ತರ ಮಕ್ಕಳು ಪ್ರತಿಭೆ ಮೂಲಕ ಸಮಾಜದಲ್ಲಿ ಮುಖ್ಯಾವಾಹಿನಿಗೆ ಬರಬೇಕು ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ಸಾಧಕ ಪತ್ರಕರ್ತರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಮಾಜ ಸುಧಾರಣೆಯಲ್ಲಿ ಮಾಧ್ಯಮಗಳ ಪಾತ್ರ ಬಹಳಷ್ಟು ದೊಡ್ಡದು ಇದೆ.‌ ತಮ್ಮ ಮಕ್ಕಳಿಗೆ ಹೆಚ್ಚಿನ ಶಿಕ್ಷಣ ಕಲ್ಪಿಸುವ ಜವಾಬ್ದಾರಿ ಬಹು ದೊಡ್ಡದು ಇದೆ ಎಂದರು.

ಪತ್ರಕರ್ತರು ತಮ್ಮ‌ ವೃತ್ತಿಯ ಜೊತೆಗೆ ಮಕ್ಕಳ ಭವಿಷ್ಯ ರೂಪಿಸಬೇಕು. ಅವರಲ್ಲಿರುವ ಪ್ರತಿಭೆಯನ್ನು ಹೊರ ತೆಗೆಯುವ ಕೆಲಸ ಮಾಡಬೇಕು ಎಂದರು.

ನಿತ್ಯ ಕೆಲಸ ಮಾಡುವ ಪತ್ರಕರ್ತರು ಕುಟುಂಬದ ಜೊತೆಗೆ ಹೆಚ್ಚಿಗೆ ಬೆರೆಯುವ ಅವಕಾಶ ಕೊಡುವುದಿಲ್ಲ. ಮಕ್ಕಳ ಮೇಲೆ ಸದಾ ನಿಗಾವಹಿಸುವ ಮೂಲಕ ಅವರ ಬೆನ್ನೆಲುಬಾಗಿ ನಿಲ್ಲಬೇಕು ಎಂದರು.

ವಿದ್ಯಾರ್ಥಿಗಳು ತಮ್ಮ‌ಕನಸು ಈಡೇರಿಸಿಕೊಳ್ಳಲು ಕಠಿಣವಾಗಿ ಅಧ್ಯಯನ ಮಾಡಬೇಕು. ಗುರಿ ಈಡೇರಿಸಿಕೊಳ್ಳಲು ಸತತವಾಗಿ ಅಧ್ಯಯನ ಮಾಡುವ ಮೂಲಕ ತಾವು ಕಂಡ ಕನಸು ನನಸು ಮಾಡಿಕೊಳ್ಳಬೇಕು ಎಂದರು.

ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶ್ರೀಧರ್ ಸಾಹುಕಾರ ಮಾತನಾಡಿ, ಪತ್ರಕರ್ತರ ಮಕ್ಕಳಲ್ಲಿ ಅಗಾಧವಾದ ಪ್ರತಿಭೆ ಇರುತ್ತದೆ. ಅವರು ತಮ್ಮ ಗುರಿ ಮುಟ್ಟಲು ಕಠಿಣವಾಗಿ ಪ್ರಯತ್ನ ಮಾಡಬೇಕು ಎಂದರು.

ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರು ನಿಮ್ಮ ಸೇವೆ ಸಮಾಜ ಎಂದಿಗೂ ಮರೆಯವುದಿಲ್ಲ. ನಿಮ್ಮ‌ಮಕ್ಕಳಿಗೂ ತಾವು ಉಜ್ವಲ ಭವಿಷ್ಯ ಕಲ್ಪಿಸಲು ಮುಂದಾಗುವುದು ಅಗತ್ಯವಿದೆ ಎಂದರು.

ವಿದ್ಯಾರ್ಥಿಗಳು ‌ಮೊಬೈಲ್ ಗೀಳಿಂದ ಹೊರಗೆ ಬರುವಂತಹ ನಿರ್ಧಾರ ಮಾಡಬೇಕು. ಅಂದಾಗಲೇ ಶೈಕ್ಷಣಿಕವಾಗಿ ಸಾಧನೆ ಮಾಡಲು ಸಾಧ್ಯವಾಗುತ್ತದೆ.‌ ಮೊಬೈಲ್ ಗೀಳಿ ಬಹಳ ಅಪಾಯಕಾರಿ ಎಂದರು.

ಸಂಘದ ಜಿಲ್ಲಾಧ್ಯಕ್ಷ‌‌ ಮಲ್ಲಪ್ಪ ಸಂಕೀನ್ ಮಾತನಾಡಿ, ಎಸ್ಸೆಸ್ಸೆಲ್ಸಿ ಪಾಸಾದ ಎಲ್ಲ ಪತ್ರಕರ್ತರ ಮಕ್ಕಳಿಗೆ ತಲಾ 5 ಸಾವಿರ ರೂಪಾಯಿ ನೀಡಿ ಸನ್ಮಾನ ಮಾಡುವ ರಾಜ್ಯದ ಮೊದಲ ಸಂಘ ಯಾದಗಿರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವಾಗಿದೆ ಎಂದರು.

ಮಕ್ಕಳಲ್ಲಿ ಸಾಕಷ್ಟು ಪ್ರತಿಭೆ ಇರುತ್ತದೆ. ನಾವು ಅದನ್ನು ಗುರುತಿಸುವಂತಹ ಕೆಲಸ ಮಾಡಿದಾಗ ಮಕ್ಕಳನ್ನು‌ ಮುಖ್ಯವಾಹಿನಿಗೆ ಕರೆತರಲು ಸಾಧ್ಯವಿದೆ ಎಂದರು.
ಪತ್ರಕರ್ತರ ಅಭ್ಯುದಯಕ್ಕಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮವಾದ ಕಾರ್ಯಗಳನ್ನು ರೂಪಿಸುವ ಉದ್ದೇಶವಿಟ್ಟುಕೊಳ್ಳಲಾಗಿದೆ ಎಂದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಲಿಂಗೇರಿ ಪ್ರಾಸ್ತಾವಿಕ ಮಾತನಾಡಿ, ಕಳೆದ 4 ವರ್ಷಗಳಿಂದಲೂ ಸಂಘ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಸಂಘದ ಸಾಧನೆಗಳ ಕುರಿತು ತಿಳಿಸಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಶ್ರೇಣಿಕುಮಾರ ಧೋಕಾ, ಸಂಘದ ರಾಜ್ಯ ಪರಿಷತ್ತು ಸದಸ್ಯ ಸಾಗರ್ ದೇಸಾಯಿ ಇದ್ದರು.
ಪತ್ರಕರ್ತ‌ ನರಸಪ್ಪ ನಾರಾಯಣೋರ್ ನಿರೂಪಿಸಿ, ವಂದಿಸಿದರು.

 


9 ವಿದ್ಯಾಥಿಗಳಿಗೆ ಸನ್ಮಾನ

ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ತೇರ್ಗಡೆಯಾದ ಜಿಲ್ಲೆಯ ಪತ್ರಕರ್ತರ ಮಕ್ಕಳಾದ ರಿಷಿಕಾ ರಾಘವೇಂದ್ರ ಸೈದಾಪುರ, ವರುಣ ಮಹೇಶ ಕಲಾಲ, ಮುತ್ತುರಾಜ್ ರವಿರಾಜ್ ಕಂದಳ್ಳಿ, ಭಾರ್ಗವ ಭೀಮಸೇನರಾವ ಕುಲಕರ್ಣಿ, ಇಕ್ರಾ ಶಹಜಿಯಾ ಖಾಜಾ ಕಲೀಮುದ್ದೀನ್ ಫರೀದಿ ಸುರಪುರ, ಸಾಯಿಸುಜಲ ಮಲ್ಲಿಕಾರ್ಜುನ ಮುದ್ನೂರ ಶಹಾಪುರ, ಸಂಗೀತಾ ಶಿವಣ್ಣ ಚಿನ್ನಾಕಾರ ಬೂದಿಹಾಳ, ಹರ್ಷಿತ್ ರಾಠಿ, ಯಶೋಧಾ ಚಂದ್ರು ನಾರಾಯಣಪುರ ಸೇರಿ 9 ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ರೂಪಾಯಿ ನಗದು ಬಹುಮಾನ ನೀಡಿ ಗೌರವಿಸಲಾಯಿತು.


ಮಕ್ಕಳಲ್ಲಿ‌ ಇಮ್ಮಡಿಗೊಂಡ ಖುಷಿ

ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಅವರು 9 ವಿದ್ಯಾರ್ಥಿಗಳಿಗೆ ತಲಾ 2 ಸಾವಿರ ರೂಪಾಯಿ ನಗದು ಬಹುಮಾನ ನೀಡಿದರು. ಖುದ್ದಾಗಿ ಶಾಸಕರೇ ನಗರು ಪುರಸ್ಕಾರ ನೀಡಿದ್ದು ಮಕ್ಕಳಲ್ಲಿ ಖುಷಿ ಇಮ್ಮಡಿಗೊಂಡಿತು.


ನಾಲ್ವರು ಸಾಧಕ ಪತ್ರಕರ್ತರಿಗೆ ಸನ್ಮಾನ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಅಮರೇಶ ಹಿರೇಮಠ, ಟಿ. ನಾಗೇಂದ್ರ, ಮಲ್ಲಯ್ಯ ಪೋಲಂಪಲ್ಲಿ ಹಾಗೂ ಬಸವರಾಜ ಕಟ್ಟಿಮನಿ ಅವರನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *

Suddi Belaku