ಬೆಂಗಳೂರಿನಲ್ಲಿ ಕನ್ನಡಿಗ ಯುವಕನ ಮೇಲಿನ ಹಲ್ಲೆ ಖಂಡನಾರ್ಹ : ರಾಚನಗೌಡ ಮುದ್ನಾಳ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಕನ್ನಡದಲ್ಲಿ ಮಾತನಾಡಿದಕ್ಕೆ ಯಾದಗಿರಿ ಮೂಲದ ಡೆಲಿವರಿ ಬಾಯ್ ಮೇಲೆ ಬೆಂಗಳೂರಿನಲ್ಲಿ ನಡೆದ ಹಲ್ಲೆ ಘಟನೆಯನ್ನು ಬಿಜೆಪಿಯ ಹಿರಿಯ ಮುಖಂಡ ರಾಚನಗೌಡ ಮುದ್ನಾಳ ತೀವ್ರವಾಗಿ ಖಂಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, “ಯಾದಗಿರಿ ಮೂಲದ ಬಸವರಾಜ್ ಎಂಬ ಯುವಕ ಜೆಪ್ಟೋ ಕಂಪನಿಯಲ್ಲಿ ಡೆಲಿವರಿ ಕೆಲಸ ಮಾಡುತ್ತಿದ್ದಾನೆ. ಆಗಸ್ಟ್ 8 ರಂದು ಮುಂಜಾನೆ ಬೆಂಗಳೂರಿನ ಸಂತೋಷ್ ನಗರದಲ್ಲಿ ಡೆಲಿವರಿ ಮುಗಿಸಿ ಮನೆಗೆ ತೆರಳುವಾಗ ಕನ್ನಡದಲ್ಲಿ ಮಾತನಾಡಿದ ಕಾರಣಕ್ಕೆ ನೆರೆ ರಾಜ್ಯದ ಕೆಲ ಯುವಕರು ಹಲ್ಲೆ ನಡೆಸಿರುವುದು ಅತ್ಯಂತ ಖಂಡನೀಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಕರ್ನಾಟಕದಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ಕನ್ನಡದಲ್ಲಿ ಮಾತನಾಡುವ ಸಾಂವಿಧಾನಿಕ ಹಕ್ಕಿದೆ. ಭಾಷೆಯ ವಿಚಾರವಾಗಿ ಕನ್ನಡಿಗರ ಮೇಲೆ ಹಲ್ಲೆ ಮಾಡುವುದು ರಾಜ್ಯದ ಸೌಹಾರ್ದತೆ ಮತ್ತು ಏಕತೆಗೆ ಧಕ್ಕೆ ತರುವ ಕೃತ್ಯ. ಇಂತಹ ಘಟನೆಗಳು ಮರುಕಳಿಸದಂತೆ ರಾಜ್ಯ ಸರ್ಕಾರ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.

ಇದೇ ವೇಳೆ ಸರ್ಕಾರ ಮತ್ತು ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ ಅವರು, “ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಹಲ್ಲೆಗೊಳಗಾದ ಬಸವರಾಜ್ ಕುಟುಂಬಕ್ಕೆ ಸೂಕ್ತ ರಕ್ಷಣೆ ಮತ್ತು ಪರಿಹಾರ ನೀಡಬೇಕು. ನ್ಯಾಯ ದೊರಕದಿದ್ದಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು” ಎಂದು ಎಚ್ಚರಿಸಿದರು.

ನಾಯಕರ ಬೆಂಬಲ ಸ್ವಾಗತಾರ್ಹ:

ಈ ಪ್ರಕರಣದ ಕುರಿತಾಗಿ ಈಗಾಗಲೇ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರು, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣಶೆಟ್ಟಿ ಅವರು ಸೇರಿದಂತೆ ಅನೇಕರು ಘಟನೆಯನ್ನು ತೀವ್ರವಾಗಿ ಖಂಡಿಸಿ, ಯುವಕನ ಪರವಾಗಿ ಎಲ್ಲ ರೀತಿಯಲ್ಲೂ ನಿಲ್ಲುವ ಭರವಸೆ ನೀಡಿರುವುದು ಸ್ವಾಗತಾರ್ಹ ಎಂದು ರಾಚನಗೌಡ ಮುದ್ನಾಳ ಹೇಳಿದರು.

Leave a Reply

Your email address will not be published. Required fields are marked *

Suddi Belaku