ಯಾದಗಿರಿ ವಾರ್ಡ್ 25ರಲ್ಲಿ 24×7 ನಳ ಸಂಪರ್ಕವಿದ್ದರೂ ಸಮರ್ಪಕ ನೀರು ಪೂರೈಕೆ ಇಲ್ಲ

Posted by

–

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ನಗರದ ವಾರ್ಡ್ ನಂ.25 ರ ಬಸವೇಶ್ವರನಗರ, ದೊಕಾ ಜೈನ್ಸ್ ಶಾಲೆ ಎದುರಿನ ಬಡಾವಣೆಯಲ್ಲಿ 24×7 ನಳದ ಸಂಪರ್ಕವಿದ್ದರೂ ಸಮರ್ಪಕವಾಗಿ ನೀರು ಸರಬರಾಜಾಗುತ್ತಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.

24×7 ನಳದ ಸಂಪರ್ಕ ಪಡೆದ ಆರಂಭದ ದಿನದಿಂದಲೂ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ಕುಡಿಯುವ ನೀರು ಸೇರಿದಂತೆ ದಿನನಿತ್ಯದ ಅಗತ್ಯಗಳಿಗೆ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ನಿಯಮಿತವಾಗಿ ಹಾಗೂ ಸಮರ್ಪಕ ಪ್ರಮಾಣದಲ್ಲಿ ನೀರು ಪೂರೈಕೆ ಮಾಡುವಂತೆ ಹಲವು ಬಾರಿ ಮನವಿ ಮಾಡಿದರೂ ಸಮಸ್ಯೆ ಬಗೆಹರಿದಿಲ್ಲ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಡಾವಣೆಯಲ್ಲಿನ ನೀರಿನ ಸಮಸ್ಯೆಯನ್ನು ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಶಾಶ್ವತ ಪರಿಹಾರ ಕಲ್ಪಿಸಬೇಕು. ಅಲ್ಲದೆ, ವಾರ್ಡ್ ಸದಸ್ಯರು ನಿವಾಸಿಗಳ ಸಮಸ್ಯೆಗೆ ಸ್ಪಂದಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ನಿವಾಸಿಗಳು ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಿ, ಕೂಡಲೇ ನೀರಿನ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ನಗರಸಭೆ ಆಯುಕ್ತರು, ಒಂದೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸಿ ಸಮರ್ಪಕ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ನಿವಾಸಿಗಳು, ನೀರು ಸರಬರಾಜು ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಿ, ಮುಂದಿನ ದಿನಗಳಲ್ಲಿ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಬಡಾವಣೆಯ ಪ್ರಮುಖರಾದ ಚಂದ್ರ ರೇಡ್ಡಿ, ಮೇಘರಾಜ ಪಟ್ಟೇದಾರ, ಶಿವಲಿಂಗ, ಸತೀಶ ಕುಲಕರ್ಣಿ, ವಿಶ್ವಾರಾಧ್ಯ ಸ್ವಾಮಿ, ನರೇಂದ್ರ ಜೋಶಿ, ಮಹೇಶ್ ರೆಡ್ಡಿ, ಮೋನಪ್ಪ, ಕೀಶನ ಚವಾಣ್, ಸುರ್ಯಕಾಂತ ಕಶೇಟ್ಟಿ,ವಸಂತ ಬಡಾವಣೆಯ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

↑
Suddi Belaku