ಯಾದಗಿರಿಯಲ್ಲಿ ಸೆ.27ಕ್ಕೆ ಕನಕ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

Posted by

–

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕನಕ ನೌಕರರ ಸಂಘದ ವತಿಯಿಂದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಸೆಪ್ಟೆಂಬರ್ 27ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ನಗರದ ಹೊಸಳ್ಳಿ ರಸ್ತೆಯ ಕೆಇಬಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕನಕ ನೌಕರರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಬುಗ್ಗಪ್ಪ ಗಣಪುರ ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಯಾದಗಿರಿ ಹಾಗೂ ಗುರುಮಠಕಲ್ ತಾಲೂಕುಗಳ ಕನಕ ನೌಕರರ ಸಂಘದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಯಾದಗಿರಿ ಹಾಗೂ ಗುರುಮಠಕಲ್ ತಾಲೂಕು ವ್ಯಾಪ್ತಿಯ ಹಾಲುಮತ ಸಮಾಜದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.85 ಹಾಗೂ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ.

ಕಾರ್ಯಕ್ರಮಕ್ಕೆ ಕಾಗಿನೆಲೆ ಕನಕ ಗುರುಪೀಠದ ತಿಂಥಣಿ ಬ್ರಿಡ್ಜ್ ಪೀಠಾಧಿಪತಿ ಲಿಂಗಬೀರದೇವರು, ಸರೂರು ಶಾಖಾಮಠದ ಆಗತೀರ್ಥ ಮಹಾಸ್ವಾಮಿ ರೇವಣಸಿದ್ದೇಶ್ವರ ಶಾಂತಮಯಿ ಹಾಗೂ ಶ್ರೀ ಕ್ಷೇತ್ರ ಹುಲಿಜಂತಿಯ ಮಹಾಸ್ವಾಮಿ ಮಾಳಿಂಗರಾಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹಾಗೂ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಅವರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ದಿಕ್ಸೂಚಿ ಮಾತನಾಡಲಿದ್ದಾರೆ.

ವಿಶೇಷ ಆಹ್ವಾನಿತರಾಗಿ ಬೆಂಗಳೂರಿನ ಇನ್‌ಸೈಟ್ಸ್ ಐಎಎಸ್ ಕೋಚಿಂಗ್ ಸೆಂಟರ್ ಸಂಸ್ಥಾಪಕ ಜಿ.ಬಿ. ವಿನಯಕುಮಾರ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ.

ಯಾದಗಿರಿ ಜಿಲ್ಲೆಯ ಸರ್ವ ಕನಕ ಸಮಾಜದ ಬಂಧುಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಬುಗ್ಗಪ್ಪ ಗಣಪುರ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

↑
Suddi Belaku