ಯಾದಗಿರಿಯಲ್ಲಿ ಹೀಟ್ ವೇವ್ ಯಲ್ಲೋ ಅಲರ್ಟ್: ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಸೂಚನೆ

Posted by

ಯಾದಗಿರಿ : ಎ. 16 : ಜಿಲ್ಲೆಯಾದ್ಯಂತ ಏಪ್ರಿಲ್ 15ರಿಂದ 19ರವರೆಗೆ ಬಿಸಿಗಾಳಿ ತೀವ್ರವಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯಲ್ಲೋ ಅಲರ್ಟ್ ಘೋಷಿಸಿದೆ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ತಿಳಿಸಿದ್ದಾರೆ.

ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಬಿಸಿಗಾಳಿ ಪರಿಣಾಮ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಲಹೆ ನೀಡಿದೆ.

ಮಧ್ಯಾಹ್ನ 12ರಿಂದ 4ರವರೆಗೆ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಬೇಕು. ಬಾಯಾರಿಕೆ ಇಲ್ಲದಿದ್ದರೂ ಸಾಕಷ್ಟು ನೀರು ಕುಡಿಯಬೇಕು. ಹಗುರವಾದ, ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸಬೇಕು. ಬಿಸಿಲಿಗೆ ಹೋಗುವಾಗ ಟೋಪಿ, ಛತ್ರಿ ಹಾಗೂ ರಕ್ಷಣಾತ್ಮಕ ಸಾಮಗ್ರಿಗಳನ್ನು ಬಳಸಬೇಕು.

ದೇಹವನ್ನು ನಿರ್ಜಲೀಕರಣಗೊಳಿಸುವ ಪಾನೀಯಗಳನ್ನು ತಪ್ಪಿಸಿ, ಮಜ್ಜಿಗೆ, ನಿಂಬೆ ನೀರು, ಅಕ್ಕಿ ನೀರು ಮುಂತಾದ ದ್ರವಾಹಾರಗಳನ್ನು ಸೇವಿಸಬೇಕು. ಹೆಚ್ಚು ಬಿಸಿಲಿನಲ್ಲಿ ಶ್ರಮದಾಯಕ ಕೆಲಸಗಳನ್ನು ಮಾಡಬಾರದು.

ಮಕ್ಕಳು ಮತ್ತು ಪ್ರಾಣಿಗಳನ್ನು ನಿಲ್ಲಿಸಿದ ವಾಹನಗಳಲ್ಲಿ ಬಿಡಬಾರದು. ಅಸ್ವಸ್ಥತೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.

ರೈತರು ಮತ್ತು ಕಾರ್ಮಿಕರಿಗೆ ಸಲಹೆ:
ಹೊಲದಲ್ಲಿ ಕೆಲಸ ಮಾಡುವವರು ಮುಂಜಾನೆ ಅಥವಾ ಸಾಯಂಕಾಲದ ವೇಳೆಯಲ್ಲಿ ಕೆಲಸ ಮಾಡಬೇಕು. ಹೊರಗೆ ಹೋಗುವಾಗ ಸಾಕಷ್ಟು ನೀರು ತೆಗೆದುಕೊಂಡು ಹೋಗಬೇಕು. ತಲೆ, ಮುಖ, ಕುತ್ತಿಗೆ ಮೇಲೆ ಒದ್ದೆಯಾದ ಬಟ್ಟೆ ಬಳಕೆ ಮಾಡಬೇಕು.

ಜಾನುವಾರುಗಳ ರಕ್ಷಣೆ:
ಜಾನುವಾರುಗಳಿಗೆ ದಿನಕ್ಕೆ ಹಲವು ಬಾರಿ ನೀರು ನೀಡಬೇಕು. ಮಧ್ಯಾಹ್ನ ಸಮಯದಲ್ಲಿ ನೆರಳಿನಲ್ಲಿ ಇರಿಸಬೇಕು. ಮುಂಜಾನೆ ಮತ್ತು ಸಾಯಂಕಾಲ ಮೇಯಿಸಲು ಬಿಡಬೇಕು. ನಿರ್ಜಲೀಕರಣ ತಪ್ಪಿಸಲು ವಿಶೇಷ ಪಾನೀಯ ನೀಡಬೇಕು.

ಅನುಸರಿಸಬೇಕಾದ ಕ್ರಮಗಳು:
ತಂಪಾದ ಸ್ಥಳದಲ್ಲಿ ಇರಬೇಕು, ಸಾಕಷ್ಟು ನೀರು ಮತ್ತು ಮಜ್ಜಿಗೆ ಕುಡಿಯಬೇಕು, ಕೋಣೆಯನ್ನು ತಂಪಾಗಿರಿಸಬೇಕು.

ಅನುಸರಿಸಬಾರದ ಕ್ರಮಗಳು:
ನೇರ ಬಿಸಿಲಿಗೆ ಹೋಗಬಾರದು, ಕಪ್ಪು ಅಥವಾ ಗಾಢ ಬಣ್ಣದ ಉಡುಪು ಧರಿಸಬಾರದು, ಬಿಸಿ ಪಾನೀಯ ಮತ್ತು ಮದ್ಯ ಸೇವಿಸಬಾರದು.

ಬಿಸಿಗಾಳಿಯಿಂದ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಎಲ್ಲರೂ ಜಾಗರೂಕತೆಯಿಂದ ವರ್ತಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

Suddi Belaku