
ಸುದ್ದಿ ಬೆಳಕು ವಾರ್ತೆ
ಯಾದಗಿರಿ: ಆಹಾರ ನಿರೀಕ್ಷಕರು ವಿವಿಧ ಅವ್ಯವಹಾರಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಿ ಅಮಾನತುಗೊಳಿಸಬೇಕು ಎಂದು ನಮ್ಮ ಕರ್ನಾಟಕ ಸೇನೆ ಜಿಲ್ಲಾ ಘಟಕ ಆಗ್ರಹಿಸಿದೆ.
ಈ ಕುರಿತು ಜಿಲ್ಲಾಧಿಕಾರಿ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರಿಗೆ ಪ್ರತ್ಯೇಕ ಮನವಿ ಸಲ್ಲಿಸಿದ ಸಂಘಟನೆಯ ಜಿಲ್ಲಾ ಅಧ್ಯಕ್ಷ ವಿಶ್ವಾರಾಧ್ಯ ದಿಮ್ಮೆ, ಆಹಾರ ನಿರೀಕ್ಷಕ ವಿಠಲ್ ಅವರ ವಿರುದ್ಧ ಹಲವು ಅಕ್ರಮಗಳ ಆರೋಪಗಳನ್ನು ಮಾಡಿದರು.
ಪಡಿತರ ಚೀಟಿದಾರರ ಏಕ ಸದಸ್ಯರ ಕಾರ್ಡ್‌ಗಳಲ್ಲಿ ಅನಧಿಕೃತವಾಗಿ ಇತರರ ಹೆಸರುಗಳನ್ನು ಸೇರಿಸುವುದು, ಮೂಲ ಯಜಮಾನರ ಹೆಸರನ್ನು ತೆಗೆದುಹಾಕಿ ಹೊಸ ಪಡಿತರ ಚೀಟಿ ನೀಡಲು ₹15 ಸಾವಿರದಿಂದ ₹20 ಸಾವಿರವರೆಗೆ ಹಣ ಪಡೆಯಲಾಗುತ್ತಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಅವರ ಸಹಾಯಕ ಲಕ್ಷ್ಮಣ ಕೂಡ ಭಾಗಿಯಾಗಿದ್ದಾರೆ ಎಂದು ದೂರಲಾಗಿದೆ.
ನ್ಯಾಯಬೆಲೆ ಅಂಗಡಿಗಳ ಡೀಲರ್‌ಗಳ ಬಳಿ ಪ್ರತಿ ತಿಂಗಳು ಎರಡು ಕ್ವಿಂಟಲ್ ಅಕ್ಕಿಯನ್ನು ಕಡಿತಗೊಳಿಸಲಾಗುತ್ತಿದೆ. ಇದನ್ನು ಪ್ರಶ್ನಿಸಿದಾಗ ಮೇಲಾಧಿಕಾರಿಗಳಿಗೆ ಹಣ ನೀಡಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ ಎಂದು ಆರೋಪಿಸಿದರು.
ಕೆಲವು ಅನಕ್ಷರಸ್ಥ ನ್ಯಾಯಬೆಲೆ ಅಂಗಡಿ ಡೀಲರ್‌ಗಳ ಗಮನಕ್ಕೆ ಬಾರದಂತೆ ಹೆಚ್ಚುವರಿ ಬಿಲ್‌ಗಳನ್ನು ಸೃಷ್ಟಿಸಿ, ಆಹಾರ ಧಾನ್ಯ ವಿತರಿಸದೆ ಗೋದಾಮಿನಿಂದಲೇ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಪ್ರಕರಣದಲ್ಲಿ ಗೋದಾಮಿನ ವ್ಯವಸ್ಥಾಪಕರ ಪಾತ್ರವೂ ಇದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಆಹಾರ ನಿರೀಕ್ಷಕರು ಹಲವು ವರ್ಷಗಳಿಂದ ಯಾದಗಿರಿಯಲ್ಲೇ ಕಾರ್ಯನಿರ್ವಹಿಸುತ್ತಿದ್ದು, ನ್ಯಾಯಬೆಲೆ ಅಂಗಡಿಗಳ ಡೀಲರ್‌ಗಳಿಂದ ಪ್ರತಿ ತಿಂಗಳು ₹5 ಸಾವಿರ ಹಣ ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ಹಣ ನೀಡದಿದ್ದರೆ ನ್ಯಾಯಬೆಲೆ ಅಂಗಡಿಯನ್ನು ಅಮಾನತುಗೊಳಿಸುವುದಾಗಿ ಬೆದರಿಕೆ ಹಾಕಲಾಗುತ್ತಿದೆ ಎಂದು ಡೀಲರ್‌ಗಳು ತಮ್ಮ ಗಮನಕ್ಕೆ ತಂದಿದ್ದಾರೆ ಎಂದು ವಿಶ್ವಾರಾಧ್ಯ ದಿಮ್ಮೆ ಹೇಳಿದರು.
ಹಲವು ನ್ಯಾಯಬೆಲೆ ಅಂಗಡಿಗಳ ಹೆಚ್ಚುವರಿ ಜವಾಬ್ದಾರಿಯನ್ನು ಕೆಲ ಡೀಲರ್‌ಗಳಿಗೆ ನೀಡುವ ಮೂಲಕ ಅದರ ಆದಾಯದಲ್ಲಿ ಪಾಲು ಪಡೆಯಲಾಗುತ್ತಿದೆ. ಅಲ್ಲದೆ, ಸಂಬಂಧಿಕರ ಹೆಸರಿನಲ್ಲಿ ಅಕ್ರಮವಾಗಿ ಆಸ್ತಿ ಸಂಪಾದಿಸಿರುವ ಶಂಕೆಯಿದ್ದು, ಆದಾಯ ಮೀರಿ ಆಸ್ತಿ ಗಳಿಸಿರುವ ಬಗ್ಗೆ ತನಿಖೆ ನಡೆಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಕುಡಿದ ಅಮಲಿನಲ್ಲಿ ರಾತ್ರಿ ವೇಳೆ ಡೀಲರ್‌ಗಳಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸುವುದು ಹಾಗೂ ಬೆದರಿಕೆ ಹಾಕುವ ಘಟನೆಗಳೂ ನಡೆಯುತ್ತಿವೆ ಎಂದು ಆರೋಪಿಸಲಾಗಿದೆ.
ಆಹಾರ ನಿರೀಕ್ಷಕರ ವಿರುದ್ಧದ ಎಲ್ಲಾ ಆರೋಪಗಳ ಕುರಿತು ಸಮಗ್ರ ಹಾಗೂ ಉನ್ನತ ಮಟ್ಟದ ತನಿಖೆ ನಡೆಸಬೇಕು. ನೇಮಕಾತಿಯಿಂದ ಇಲ್ಲಿಯವರೆಗೆ ಅವರ ಆಸ್ತಿ ವಿವರಗಳನ್ನು ಪರಿಶೀಲಿಸಿ, ತಪ್ಪು ಕಂಡುಬಂದಲ್ಲಿ ಕೂಡಲೇ ಅಮಾನತುಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಹಾಗೂ ಇಲಾಖೆಯ ಉಪನಿರ್ದೇಶಕರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮು ಪೂಜಾರಿ, ಮಹಿಳಾ ಜಿಲ್ಲಾ ಅಧ್ಯಕ್ಷೆ ಶ್ರೀದೇವಿ ಕಟ್ಟಿಮನಿ, ಗುರುಮಠಕಲ್ ತಾಲ್ಲೂಕು ಅಧ್ಯಕ್ಷ ಅಬ್ದುಲ್ ರಿಯಾಜ್, ಮರೆಪ್ಪ, ರಮೇಶ್ ಬೈರಂಕೊಂಡ, ಭೀಮು ಮಳ್ಳಲ್ಲಿ, ರೆಡ್ಡೆಪ್ಪ ಬಡ್ಡಿ, ಅಬ್ದುಲ್ ಅಜೀಜ್, ಮೆಹಬೂಬ್, ಶರಣು ಅರ್ಜುಣಗಿ, ಸಿದ್ದು ಬಾಡದ್, ಕಾಶಿಮ್ ಗೊರ್ಲೆ, ಸಂತೋಷ್, ಸಾಬಣ್ಣ, ಶರೀಫ್, ವೆಂಕಟೇಶ್ ಚಿಕ್ಕಬಾನರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.












Leave a Reply