
ಸುದ್ದಿ ಬೆಳಕು ವಾರ್ತೆ
ಯಾದಗಿರಿ : ಜಿಲ್ಲೆಯಲ್ಲಿ ಶೇ. 25 ಕ್ಕೂ ಕಮ್ಮಿ ಮಳೆಯಾದ ಹಿನ್ನೆಲೆಯಲ್ಲಿ ಕೂಡಲೇ ಬರ ಪೀಡಿತ ಎಂದು ಘೋಷಿಸಬೇಕು ಬರಪರಿಹಾರ ಕಾಮಗಾರಿ ಆರಂಭಿಸಬೇಕು ಮತ್ತು ರೈತರ ಸಾಲಮನ್ನಾ ಮಾಡಬೇಕು ಎಂದು ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಬಿ.ಎನ್. ವಿಶ್ವನಾಥ ನಾಯಕ ಒತ್ತಾಯಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಮಳೆಯೇ ಬಾರದ ಹಿನ್ನೆಲೆಯಲ್ಲಿ ರೈತರು ಬೆಳೆದ ಬೆಳೆಗಳು ನೀರಿಲ್ಲದೇ ಒಣಗುತ್ತಿವೆ. ಒಣಗಿದ ಬೆಳೆ ಕಂಡು ರೈತರು ಕಂಗಾಲಾಗಿದ್ದಾರೆ. ಮಳೆ ಬಾರದೇ ಇದ್ದುದರಿಂದ ರೈತರು ಗುಳೆ ಹೋಗುತ್ತಿದ್ದಾರೆ. ಇನ್ನಷ್ಟು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
ಈಗಾಗಲೇ ಚಟ್ನಳ್ಳಿ ಗ್ರಾಮದಲ್ಲಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಷ್ಟೆಲ್ಲ ಆಗುತ್ತಿದ್ದರೂ ಸ್ಥಳೀಯ ಶಾಸಕರು ಸಂಸದರು ಸಚಿವರು ಇತ್ತ ಹೊರಳಿಯೂ ನೋಡುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಳೆಬಾರದೇ ಇರುವ ಹಿನ್ನೆಲೆಯಲ್ಲಿ ಕನಿಷ್ಟ ಪಂಪ್ ಸೆಟ್ ನಿಂದಲಾದರೂ ಬಿತ್ತಿದ ಬೆಳೆ ಉಳಿಸಿಕೊಳ್ಳಲು ರೈತರು ಮುಂದಾದರೆ ವಿದ್ಯುತ್ ಅನಿಯಮಿತ ಕಡಿತ ಮಾಡುತ್ತಿರುವುದರಿಂದ ಅಲ್ಲೂ ರೈತರಿಗೆ ಅನ್ಯಾಯವಾಗುತ್ತಿದೆ. ಈ ಕುರಿತು ವಿಚಾರಿಸಿದರೆ ಅಧಿಕಾರಿಗಳು ಜೆಇ, ಎಇಇ, ಇಇ ಗಳು ಒಬ್ಬರ ಮೇಲೆ ಒಬ್ಬರು ಹಾಕಿ ರೈತರಿಗೆ ಸಾವಿಗೆ ಕಾರಣರಾಗುತ್ತಿದ್ದಾರೆ.
ಇಷ್ಟೆಲ್ಲ ಆಗುತ್ತಿದ್ದರೂ ರೈತರ ಸಮಸ್ಯೆಗೂ ತಮಗೂ ಸಂಬAಧವೇ ಇಲ್ಲ ಎನ್ನುವಂತೆ ಶಾಸಕರು ಸಚಿವರು ವರ್ತಿಸುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಸಾಲ ಸೋಲ ಮಾಡಿ ಬೆಳೆದ ಬೆಳೆ ಕಣ್ಣಾರೆ ಒಣಗಿ ಹೋಗುತ್ತಿರುವುದನ್ನು ಕಂಡು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದುವರೆಗೆ ಗ್ರಾಮಕ್ಕೆ ಮೃತ ರೈತನ ಕುಟುಂಬಕ್ಕೆ ಭೇಟಿ ಮಾಡಿ ಸಾಂತ್ವನ ಹೇಳುವ ಕೆಲಸ ಸರ್ಕಾರ, ಉಸ್ತುವಾರಿ ಸಚಿವ, ಸಂಸದ ಹೋಗಲಿ ಕೊನೆಗೆ ಶಾಸಕ ಸಹಿತ ಭೇಟಿ ನೀಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಜಿಲ್ಲೆಯನ್ನು ಬರ ಪೀಡಿತ ಎಂದು ಘೋಷಣೆ ಮಾಡಬೇಕು ಎಕರೆಗೆ 50ಸಾವಿರ ರೂ. ಬರ ಪರಿಹಾರ ಘೋಷಣೆ ಮಾಡಬೇಕು, ಕೂಡಲೇ ಬರ ಪರಿಹಾರ ಕಾಮಗಾರಿಗಳು ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.
ಯಾದಗಿರಿ ಮತಕ್ಷೇತ್ರದ ಒಂದೇ ಗ್ರಾಮ ಚಟ್ನಳ್ಳಿಯಲ್ಲಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದ ಮಲ್ಲಿಕಾರ್ಜುನ ಹಾಗೂ ಮಹಾಂತೇಶ ಕೊಂಡಾನೋರು ಎಂಬ ರೈತರು ಸಾವಿಗೆ ಶರಣಾಗಿದ್ದಾರೆ. ಆದರೆ ಒಬ್ಬೇ ಒಬ್ಬ ಜನಪ್ರತಿನಿಧಿ ಸ್ಥಳಕ್ಕೆ ಭೇಟಿ ನೀಡಿಲ್ಲ, ಕನಿಷ್ಟ ಶಾಸಕರಾದರೂ ಭೇಟಿ ಕೊಡಬೇಕಿತ್ತು ಆದರೆ ಈ ರೈತ ವಿರೋಧಿ ಸರ್ಕಾರದಲ್ಲಿ ರೈತರ ಸಾವಿಗೆ ಯಾವುದೇ ಬೆಲೆ ಇಲ್ಲದಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡಲೇ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಸ್ಥಳಕ್ಕೆ ಭೇಟಿ ನೀಡಬೇಕು ರೈತರ ಕುಟುಂಬಕ್ಕೆ ತಕ್ಷಣ ಪರಿಹಾರ ಕೊಡಿಸಿ ಅವರ ಕಣ್ಣಿರು ಒರೆಸುವ ಕೆಲಸ ಮಾಡಬೇಕು ಇಲ್ಲವಾದಲ್ಲಿ ಇವರ ವಿರುದ್ಧವೇ ಸೋಮವಾರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.











Leave a Reply