ಯಾದಗಿರಿಯಲ್ಲಿ ಗ್ರಾಹಕರ ಹಕ್ಕುಗಳ ಕುರಿತು ಕಾನೂನು ಅರಿವು ಕಾರ್ಯಕ್ರಮ

Posted by

–

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಹಾಗೂ ಜವಾಹರ್ ಬಿ.ಎಡ್, ಐ.ಟಿ.ಐ. ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಜವಾಹರ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗ್ರಾಹಕರ ಹಕ್ಕುಗಳ ಕುರಿತು ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವು ಕುಮಾರಿ ಕಾಜಲ್ ಅವರ ಪ್ರಾರ್ಥನೆ ಗೀತೆಯೊಂದಿಗೆ ಪ್ರಾರಂಭವಾಯಿತು. ಡಾ. ಸಲೇಹಾ ನಿಖಾತ್ (ಸಹಾಯಕ ಪ್ರಾಧ್ಯಾಪಕರು) ಅವರು ಸ್ವಾಗತ ಭಾಷಣ ಮಾಡಿದರು.
ನಂತರ ಮಾತನಾಡಿದ ಮಹಿಳಾ ಸದಸ್ಯರಾದ ಫರ್ಹಿನ್ ಬೇಗಂ ಅವರು, ಕಾನೂನಿನಲ್ಲಿ ಗ್ರಾಹಕ ಎಂದರೆ ಯಾರು ಹಾಗೂ ಗ್ರಾಹಕರ ಹಕ್ಕುಗಳ ಕಾಯ್ದೆ ಕುರಿತು ವಿವರಿಸಿದರು. ಪ್ರತಿಯೊಬ್ಬರೂ ವಸ್ತು ಖರೀದಿಸಿದ ನಂತರ ತಪ್ಪದೇ ಬಿಲ್ ಪಡೆಯಬೇಕೆಂದು ಅವರು ಹೇಳಿದರು.

ಪ್ರಭಾರಿ ಅಧ್ಯಕ್ಷರಾದ ಮಾಲತಿ ಗುರಣ್ಣ ಅವರು ಮಾತನಾಡಿ, “ಗ್ರಾಹಕರಿಗೆ ತೊಂದರೆಯಾದರೆ ಗ್ರಾಹಕರ ಆಯೋಗಕ್ಕೆ ಅರ್ಜಿ ಸಲ್ಲಿಸಬೇಕು” ಎಂದು ತಿಳಿಸಿ, ವಸ್ತುವಿನ ಗುಣಮಟ್ಟ ಹಾಗೂ ಜಿಲ್ಲಾ ಆಯೋಗದಲ್ಲಿ ಪ್ರಕರಣಗಳಲ್ಲಿ ನೀಡಿದ ತೀರ್ಪುಗಳ ಉದಾಹರಣೆಗಳೊಂದಿಗೆ ವಿವರಣೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಶೇಖಾ ಇಕ್ಬಾಲ್ ಅವರು ಮಾತನಾಡಿ, ಕಾಲೇಜಿನ ವಿದ್ಯಾರ್ಥಿಗಳಿಗೆ ಗ್ರಾಹಕರ ಹಕ್ಕಿನ ಕುರಿತು ಅರಿವು ಮೂಡಿಸುವ ಈ ಕಾರ್ಯಕ್ರಮ ಅತ್ಯಂತ ಮಹತ್ವದ್ದಾಗಿದೆ. ಸೇವೆಯಲ್ಲಿ ಅಥವಾ ವಸ್ತುವನ್ನು ಖರೀದಿಸಿದ ನಂತರ ಕಳಪೆ ಗುಣಮಟ್ಟ ಕಂಡುಬಂದರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.

ಕೊನೆಯಲ್ಲಿ ಸಹಾಯಕ ರಿಜಿಸ್ಟ್ರಾರ್ ಹಾಗೂ ಸಹಾಯಕ ಆಡಳಿತಾಧಿಕಾರಿಗಳಾದ ಮಲ್ಲಿಕಾರ್ಜುನ ಬಿ.ಒಡೆಯರು ವಂದನಾರ್ಪಣೆ ಮಾಡಿದರು. ಧನರಾಜ ಪಾತ್ರೆ ಎಫ್.ಡಿ.ಎ. ಕಾರ್ಯಕ್ರಮ ನಿರೂಪಿಸಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಆಯೋಗದ ಸಿಬ್ಬಂದಿ ವರ್ಗ, ಜವಾಹರ್ ಕಾಲೇಜಿನ ಬಿ.ಎಡ್ ಮತ್ತು ಐ.ಟಿ.ಐ. ಕಾಲೇಜಿನ ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

↑
Suddi Belaku