
ಸುದ್ದಿ ಬೆಳಕು ವಾರ್ತೆ
ಯಾದಗಿರಿ, ಏಪ್ರಿಲ್ 18 : ಮಹಿಳಾ ಮೀಸಲಾತಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗದ ಹಿನ್ನೆಲೆ ರಾಜಕೀಯ ವಾಗ್ವಾದ ತೀವ್ರಗೊಂಡಿದ್ದು, ಬಿಜೆಪಿ ಮುಖಂಡ ರಾಚನಗೌಡ ಮುದ್ನಾಳ ಕಾಂಗ್ರೆಸ್ ಹಾಗೂ ಇಂಡಿ ಮೈತ್ರಿಕೂಟದ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಶಕಗಳ ಕಾಲ ಮಹಿಳಾ ಮೀಸಲಾತಿ ಮಸೂದೆಯನ್ನು ವಿಳಂಬಗೊಳಿಸಿದ್ದ ಕಾಂಗ್ರೆಸ್, ಇದೀಗ ಬಿಜೆಪಿ ಸರ್ಕಾರ 2029ರಿಂದಲೇ ಮಹಿಳೆಯರಿಗೆ 33% ಮೀಸಲಾತಿ ಜಾರಿಗೆ ತರಲು ತಿದ್ದುಪಡಿ ಮಸೂದೆ ತಂದಾಗಲೂ ವಿರೋಧ ವ್ಯಕ್ತಪಡಿಸಿದೆ ಎಂದು ಆರೋಪಿಸಿದರು.
2023ರಲ್ಲಿ ಎಲ್ಲ ಪಕ್ಷಗಳ ಸಹಮತದಿಂದ ಅಂಗೀಕರಿಸಲ್ಪಟ್ಟ ನಾರಿ ಶಕ್ತಿ ವಂದನಾ ಅಧಿನಿಯಮವನ್ನು ಅನುಷ್ಠಾನಗೊಳಿಸಲು ಸರ್ಕಾರ ಕ್ರಮ ಕೈಗೊಂಡಿದ್ದರೂ, ಲೋಕಸಭೆಯಲ್ಲಿ ಅಗತ್ಯವಿದ್ದ ಎರಡು-ಮೂರನೇ ಬಹುಮತ ಸಿಗದೆ ಮಸೂದೆ ಸೋತಿರುವುದು ವಿಷಾದನೀಯ ಎಂದು ಹೇಳಿದರು. 298 ಮತಗಳು ಬೆಂಬಲವಾಗಿ ಬಂದರೂ ಮಸೂದೆ ಅಂಗೀಕಾರವಾಗದಿರುವುದು ಮಹಿಳೆಯರ ಹಕ್ಕಿಗೆ ಧಕ್ಕೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರಧಾನಿ ನರೇಂದ್ರ ಮೋದಿ ಮಹಿಳಾ ಸಬಲೀಕರಣಕ್ಕೆ ಬದ್ಧರಾಗಿದ್ದಾರೆ. ಆದರೆ ಕಾಂಗ್ರೆಸ್ ಮತ್ತು ಇಂಡಿ ಮೈತ್ರಿಕೂಟ ಮಸೂದೆಗೆ ವಿರೋಧ ವ್ಯಕ್ತಪಡಿಸಿರುವುದು ಮಹಿಳೆಯರ ಆಕಾಂಕ್ಷೆಗಳಿಗೆ ವಿರುದ್ಧವಾಗಿದೆ ಎಂದು ಟೀಕಿಸಿದರು.
ಮಹಿಳೆಯರ 33% ಮೀಸಲಾತಿ ಹಕ್ಕನ್ನು ರಾಜಕೀಯ ಕಾರಣಗಳಿಂದ ತಡೆಹಿಡಿಯಲಾಗುತ್ತಿದೆ. ಇದು ದೇಶದ ಮಹಿಳಾ ಸಮುದಾಯಕ್ಕೆ ಅನ್ಯಾಯವಾಗಿದ್ದು, ಮತದಾರರು ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ಮಹಿಳಾ ಮೀಸಲಾತಿ ವಿಚಾರದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ರಾಜಕೀಯ ಘರ್ಷಣೆ ಮತ್ತಷ್ಟು ತೀವ್ರಗೊಂಡಿದೆ.










Leave a Reply