
ಸುದ್ದಿ ಬೆಳಕು ವಾರ್ತೆ
ವಡಗೇರ : ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ನಿರ್ದೇಶನದಂತೆ ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಅಜೀಂ ಪ್ರೇಮ್ಜಿ ಪ್ರೌಢಶಾಲೆಯಲ್ಲಿ ಮಕ್ಕಳ ಹಕ್ಕುಗಳು ಮತ್ತು ಮಕ್ಕಳಿಗೆ ಸಂಬಂಧಿಸಿದ ವಿವಿಧ ಕಾನೂನುಗಳ ಕುರಿತು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಶ್ರೀ ಪರ್ವತರೆಡ್ಡಿ (ಎಸ್ಐ), ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕ್ಷೇತ್ರ ಕಾರ್ಯಕರ್ತರು, ಮಕ್ಕಳ ಹಕ್ಕುಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಮಕ್ಕಳನ್ನು ಪ್ರೀತಿ ಮತ್ತು ಕಾಳಜಿಯಿಂದ ಬೆಳೆಸುವುದು ಪೋಷಕರ ಜವಾಬ್ದಾರಿಯಾಗಿದ್ದು, ಮಕ್ಕಳ ಮೇಲೆ ಮಾನಸಿಕ ಅಥವಾ ದೈಹಿಕ ಹಿಂಸೆ, ದೌರ್ಜನ್ಯ ನಡೆದರೆ ಸರ್ಕಾರ ಕಾನೂನು ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದರು.
ತಾಯಿಯ ಗರ್ಭಧಾರಣೆಯಿಂದ ಹಿಡಿದು 18 ವರ್ಷದೊಳಗಿನ ಪ್ರತಿಯೊಬ್ಬ ಮಗು ಸರ್ಕಾರದ ರಕ್ಷಣೆಯ ವ್ಯಾಪ್ತಿಯಲ್ಲಿದ್ದು, ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಎಲ್ಲರೂ ಜಾಗರೂಕರಾಗಿರಬೇಕು ಎಂದರು. ಬಾಲಕಾರ್ಮಿಕ ಪದ್ಧತಿ, ಮಕ್ಕಳಿಂದ ಭಿಕ್ಷೆ ಬೇಡಿಸುವುದು, ಮಕ್ಕಳ ಕಳ್ಳಸಾಗಣೆ, ಬಾಲ್ಯವಿವಾಹ ಸೇರಿದಂತೆ ಮಕ್ಕಳ ಮೇಲಿನ ಶೋಷಣೆಗಳು ಅವರ ಶಿಕ್ಷಣ ಮತ್ತು ಭವಿಷ್ಯಕ್ಕೆ ಮಾರಕವಾಗುತ್ತವೆ ಎಂದು ಹೇಳಿದರು.
ಹೋಟೆಲ್, ಗ್ಯಾರೇಜ್, ಢಾಬಾ, ಹೊಲಗದ್ದೆ, ಜೀತ ಪದ್ಧತಿ, ದನ ಅಥವಾ ಕುರಿ ಕಾಯುವ ಮಕ್ಕಳನ್ನು ಕಂಡರೆ ತಕ್ಷಣ 1098 ಅಥವಾ 112 ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮಾಹಿತಿ ನೀಡುವವರ ಹೆಸರು ಮತ್ತು ವಿವರಗಳನ್ನು ಸಂಪೂರ್ಣ ಗೌಪ್ಯವಾಗಿಡಲಾಗುತ್ತದೆ ಎಂದು ತಿಳಿಸಿದರು.
ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನಲ್ ವಕೀಲ ಶಿವಕುಮಾರ್ ಫಿರಂಗಿ ಮಾತನಾಡಿ, 15100 ಸಹಾಯವಾಣಿ ಮೂಲಕ ಉಚಿತ ಕಾನೂನು ಸಲಹೆ ಪಡೆಯಬಹುದಾಗಿದೆ. ಮಕ್ಕಳ ಮೇಲಿನ ದೌರ್ಜನ್ಯ ಅಥವಾ ಹಕ್ಕು ಉಲ್ಲಂಘನೆಯ ಪ್ರಕರಣಗಳಲ್ಲಿ ಉಚಿತ ಕಾನೂನು ನೆರವು ಲಭ್ಯವಿದ್ದು, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಬಹುದೆಂದು ತಿಳಿಸಿದರು.
ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಕಿರಣ್ ಕುಮಾರ್ ಚೌಹಾನ್ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿ, ಅವರಲ್ಲಿದ್ದ ಕಾನೂನು ಸಂಬಂಧಿತ ಗೊಂದಲಗಳನ್ನು ನಿವಾರಿಸಿದರು.
ಜಿಲ್ಲಾ ಮಕ್ಕಳ ವಿಶೇಷ ಪೊಲೀಸ್ ಘಟಕ (SJPU) ಸಮಾಜ ಕಾರ್ಯಕರ್ತ ಕು. ಮಹೇಶ್ ಮಾತನಾಡಿ, ಜಿಲ್ಲೆಯ ಪ್ರತಿಯೊಂದು ಪೊಲೀಸ್ ಠಾಣೆಯಲ್ಲೂ ಮಕ್ಕಳ ಸ್ನೇಹಿ ವಾತಾವರಣ ಕಲ್ಪಿಸಲಾಗಿದ್ದು, ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಸಂವೇದನಾಶೀಲವಾಗಿ ನಿರ್ವಹಿಸಲಾಗುತ್ತದೆ ಎಂದು ತಿಳಿಸಿದರು. ಮಕ್ಕಳು ಪೊಲೀಸರನ್ನು ಕಂಡು ಭಯಪಡದೆ, ಸಮಸ್ಯೆಗಳನ್ನು ಧೈರ್ಯವಾಗಿ ತಿಳಿಸಬೇಕು ಎಂದು ಸಲಹೆ ನೀಡಿದರು.
ಶಾಲೆಯ ಮುಖ್ಯಗುರು ಅನಿಲ್ ಮಾತನಾಡಿ, ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಹಮ್ಮಿಕೊಂಡ ಈ ಕಾರ್ಯಕ್ರಮದಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮಕ್ಕಳ ಹಕ್ಕುಗಳು ಮತ್ತು ವಿವಿಧ ಕಾನೂನುಗಳ ಕುರಿತು ಉಪಯುಕ್ತ ಮಾಹಿತಿಯನ್ನು ಪಡೆದಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.











Leave a Reply