
ಸುದ್ದಿ ಬೆಳಕು ವಾರ್ತೆ
ಯಾದಗಿರಿ, ಏಪ್ರಿಲ್ 20: ವಿದ್ಯಾರ್ಥಿಗಳು ಕಲಿತ ಶಾಲೆಯನ್ನು ಮತ್ತು ಅಕ್ಷರ ಕಲಿಸಿದ ಗುರುಗಳನ್ನು ಸ್ಮರಿಸುವುದು ಸಂಸ್ಕಾರದ ಸಂಕೇತ. ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರಿ ಇಂತಹ ಗುರು ವಂದನಾ ಕಾರ್ಯಕ್ರಮ ಹಮ್ಮಿಕೊಂಡಿರುವುದು ಹೆಮ್ಮೆಯ ವಿಷಯ ಎಂದು ನಿವೃತ್ತ ಶಿಕ್ಷಕ ಸುಂದರ್ ಅವರು ಅಭಿಪ್ರಾಯಪಟ್ಟರು.
ನಗರದ ಚಿರಂಜೀವಿ ಮೆಥೋಡಿಸ್ಟ್ ಕನ್ನಡ ಪ್ರೌಢಶಾಲೆಯ ಆವರಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ 2000–2001ನೇ ಸಾಲಿನ ಕನ್ನಡ ಮಾಧ್ಯಮ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ‘ಗುರು ವಂದನಾ ಹಾಗೂ ಸ್ನೇಹ ಸಮ್ಮಿಲನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗುರು-ಶಿಷ್ಯರ ಅಪೂರ್ವ ಭೇಟಿ
ಸುಮಾರು 25 ವರ್ಷಗಳ ಸುದೀರ್ಘ ಕಾಲದ ನಂತರ ಒಂದೇ ವೇದಿಕೆಯಲ್ಲಿ ಒಂದಾದ ಸಹಪಾಠಿಗಳು, ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು. ತಮಗೆ ಶಿಕ್ಷಣ ನೀಡಿದ ಗುರುಗಳನ್ನು ಆತ್ಮೀಯವಾಗಿ ಸನ್ಮಾನಿಸಿ, ಪಾದಪೂಜೆ ಮಾಡುವ ಮೂಲಕ ಕೃತಜ್ಞತೆ ಸಲ್ಲಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.
ನಿವೃತ್ತ ಶಿಕ್ಷಕ ರಾಘವೇಂದ್ರ ಮಾತನಾಡಿ, ವಿದ್ಯಾರ್ಥಿಗಳ ಈ ಪ್ರೀತಿ ಮತ್ತು ಗೌರವ ಶಿಕ್ಷಕ ವೃತ್ತಿಗೆ ಸಿಕ್ಕ ದೊಡ್ಡ ಗೌರವ ಎಂದು ಹರ್ಷ ವ್ಯಕ್ತಪಡಿಸಿದರು.
ಜೀವನ ಪಾಠ ಕಲಿಸಿದ ಗುರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಿವೃತ್ತ ಶಿಕ್ಷಕರಾದ ಗಿರಿಧರ್, ಸುನೀಲ್, ಸುನತ್, ವಿಜಯರತ್ನ, ಸುಶೀಲಾ, ಸುಮತಿ ಹಾಗೂ ವನಜ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಜೀವನದಲ್ಲಿ ಶಿಸ್ತು ಅಳವಡಿಸಿಕೊಳ್ಳುವುದು ಯಶಸ್ಸಿನ ಮೊದಲ ಮೆಟ್ಟಿಲು.
ಜವಾಬ್ದಾರಿ ಮತ್ತು ಸಮಯದ ಮೌಲ್ಯ ಅರಿತವನು ಉನ್ನತ ಸ್ಥಾನಕ್ಕೇರಬಲ್ಲ. ಸಮಾಜದ ಉತ್ತಮ ಪ್ರಜೆಗಳಾಗಿ ಬೆಳೆಯುವಂತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಬೋಧಕೇತರ ಸಿಬ್ಬಂದಿಗಳಾದ ರವಿ ಹಾಗೂ ಬೆನ್ಯನ್ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದರು.
ವಿಶಾಲಾಕ್ಷಿ ಮತ್ತು ಶುಷ್ಮಾ ಪ್ರಾರ್ಥಿಸಿದರು. ವೆಂಕಟರೆಡ್ಡ ಸ್ವಾಗತಿಸಿದರು. ಶಿವಗಂಗಮ್ಮ ನಿರೂಪಿಸಿದರು. ವೀಣಾ ಪಾಟೀಲ್ ವಂದನಾರ್ಪಣೆ ಮಾಡಿದರು.
ಸ್ನೇಹ ಸಮ್ಮಿಲನದಲ್ಲಿ ವಿವಿಧೆಡೆ ನೆಲೆಸಿರುವ 50ಕ್ಕೂ ಹೆಚ್ಚು ಹಳೆ ವಿದ್ಯಾರ್ಥಿಗಳು ಪಾಲ್ಗೊಂಡು ತಮ್ಮ ಹಳೆಯ ದಿನಗಳನ್ನು ನೆನೆದು ಭಾವುಕರಾದರು.










Leave a Reply