
ಬೀದರ್, ಏಪ್ರಿಲ್ 11: ಊಹಾ ಪತ್ರಿಕೋದ್ಯಮ ಸಮಾಜಕ್ಕೆ ಅಪಾಯಕಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದು, ಪತ್ರಕರ್ತರು ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಮಾತನಾಡಿದ ಅವರು, ಕ್ಷುಲ್ಲಕ ವಿಷಯಗಳನ್ನು ದಿನವಿಡೀ ಪ್ರಸಾರ ಮಾಡುವುದರಿಂದ ಸಮಾಜಕ್ಕೆ ಯಾವುದೇ ಪ್ರಯೋಜನ ಇಲ್ಲ ಎಂದು ಟೀಕಿಸಿದರು.
“ಗಂಡ-ಹೆಂಡತಿ ಜಗಳವನ್ನು ದಿನವಿಡೀ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ?” ಎಂದು ಪ್ರಶ್ನಿಸಿದರು.
ಸಂವಿಧಾನ ಮೌಲ್ಯಗಳನ್ನು ಪಾಲಿಸಬೇಕು
ಪತ್ರಕರ್ತರು ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ಮಾಡುತ್ತಿದ್ದೇವಾ ಎಂಬುದನ್ನು ತಮ್ಮೊಳಗೆ ಪರಿಶೀಲಿಸಿಕೊಳ್ಳಬೇಕು ಎಂದು ಸಿಎಂ ಹೇಳಿದರು.
ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿ ಇಬ್ಬರೂ ಪತ್ರಕರ್ತರಾಗಿ ಸಮಾಜದ ದುರ್ಬಲ ವರ್ಗಗಳ ಧ್ವನಿಯಾಗಿದ್ದರು. ಪತ್ರಕರ್ತರು ಕೇವಲ ಮಾಹಿತಿ ನೀಡುವುದಕ್ಕೆ ಸೀಮಿತವಾಗದೆ ಸಮಾಜ ಸುಧಾರಣೆಯಲ್ಲೂ ಪಾತ್ರವಹಿಸಬೇಕು ಎಂದು ಸಲಹೆ ನೀಡಿದರು.
ಕಾರ್ಪೊರೇಟ್ ಪ್ರಭಾವದ ಬಗ್ಗೆ ಆತಂಕ
ಇಂದಿನ ಮಾಧ್ಯಮ ಸಂಸ್ಥೆಗಳು ಕಾರ್ಪೊರೇಟ್ ಪ್ರಭಾವಕ್ಕೆ ಒಳಗಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಸಿಎಂ, ಕೆಲವೊಮ್ಮೆ ಸತ್ಯ ಸುದ್ದಿಗಳು ಕೂಡ ಒತ್ತಡಕ್ಕೆ ಒಳಗಾಗಿ ಬದಲಾಗುತ್ತವೆ ಎಂದು ಹೇಳಿದರು.
“ನಾನು 40 ವರ್ಷಗಳಿಂದ ರಾಜಕಾರಣದಲ್ಲಿ ಇದ್ದೇನೆ. ನಮ್ಮ ಸರ್ಕಾರದ ಪರವಾಗಿ ಬರೆಯಿರಿ ಎಂದು ಯಾರನ್ನೂ ಕೇಳಿಲ್ಲ,” ಎಂದರು.
ವೈಜ್ಞಾನಿಕ ಚಿಂತನೆ ಅಗತ್ಯ
ಸಮಾಜದಲ್ಲಿ ಅಂಧನಂಬಿಕೆ ಹೆಚ್ಚುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ವೈಚಾರಿಕತೆ ಮತ್ತು ವೈಜ್ಞಾನಿಕ ಶಿಕ್ಷಣ ಅಗತ್ಯ ಎಂದು ಒತ್ತಿ ಹೇಳಿದರು.
ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್
ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಯೋಜನೆ ಕುರಿತು ಮಾತನಾಡಿದ ಸಿಎಂ, ಅದರ ನಿಯಮಗಳಲ್ಲಿ ಇರುವ ತೊಂದರೆಗಳನ್ನು ಚರ್ಚಿಸಿ ಪರಿಹರಿಸಲಾಗುವುದು ಎಂದು ತಿಳಿಸಿದರು.










Leave a Reply