
ಸುದ್ದಿ ಬೆಳಕು ವಾರ್ತೆ
ಸೈದಾಪುರ: ಬಣಜಿಗ ಸಮಾಜದ ಸವಾರ್ಂಗೀಣ ಅಭಿವೃದ್ಧಿಗಾಗಿ ಸಂಘಟಿತರಾಗಿ, ಸಂವಿಧಾನಬದ್ಧವಾಗಿ ದೊರೆಯುವ ಹಕ್ಕುಗಳನ್ನು ಪಡೆದುಕೊಳ್ಳಬೇಕು. ಬಣಜಿಗ ಸಮಾಜದವರು ಹಿಂದೂಳಿದ ವರ್ಗದ 2ಎ ಪ್ರವರ್ಗದ ಜಾತಿ ಪ್ರಮಾಣ ಪತ್ರ ಪಡೆದು ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿಯ ಸೌಲಭ್ಯ ಪಡೆಯಬೇಕು ಎಂದು ರಾಜ್ಯ ಬಣಜಿಗರ ಸಮಾಜದ ಸಂಘಟನಾ ಕಾರ್ಯದರ್ಶಿ ಮಲಕಪ್ಪ ಪಾಟೀಲ್ ಹೇಳಿದರು.
ಪಟ್ಟಣದ ಐರೆಡ್ಡಿ ಕಲ್ಯಾಣ ಮಂಟಪದಲ್ಲಿ ಸೈದಾಪುರ ವಲಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಬಣಜಿಗ ಸಮಾಜದ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಬಣಜಿಗ ಸಮಾಜವು ನೀತಿ, ಪ್ರಾಮಾಣಿಕತೆ ಹಾಗೂ ಸಾಮಾಜಿಕ ಮೌಲ್ಯಗಳಿಗೆ ಹೆಸರಾಗಿದೆ. ಬಸವಣ್ಣನವರ ಸಮಕಾಲಿನ ಅಕ್ಕಮಹಾದೇವಿ ಶರಣರ ತತ್ವ, ಆದರ್ಶ ಹಾಗೂ ನೀತಿಗಳನ್ನು ಪಾಲಿಸಿಕೊಂಡು ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು. ಸಮಾಜದ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು ಎಂದರು. 2ಎ ಪ್ರವರ್ಗದ ಜಾತಿ ಪ್ರಮಾಣ ಪತ್ರ ಪಡೆಯುವ ಕುರಿತು ವಿವಿಧ ಹಂತಗಳಲ್ಲಿ ನ್ಯಾಯಾಲಯದ ಪ್ರಕರಣಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಸಮಾಜದ ಜನರು ಕಾನೂನುಬದ್ಧವಾಗಿ ತಮ್ಮ ಹಕ್ಕುಗಳಿಗಾಗಿ ಸಂಘಟಿತರಾಗಬೇಕು. ಯಾವುದೇ ಸಮುದಾಯದ ವಿರುದ್ಧ ಹೋರಾಟ ನಡೆಸುವುದು ಸಂಘಟನೆಯ ಉದ್ದೇಶವಲ್ಲ. ಬದಲಾಗಿ ಬಣಜಿಗ ಸಮಾಜಕ್ಕೆ ಸಂವಿಧಾನ ಹಾಗೂ ಕಾನೂನುಬದ್ಧವಾಗಿ ದೊರೆಯಬೇಕಾದ ಹಕ್ಕುಗಳನ್ನು ಪಡೆಯುವುದೇ ಸಂಘಟನೆಯ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು.
ಸಮಾವೇಶದ ಅಧ್ಯಕ್ಷತೆಯನ್ನು ವಲಯಾಧ್ಯಕ್ಷ ಗಂಗಾಧರ ಚಂದ್ರಗಿರಿ ವಹಿಸಿದ್ದರು. ಸರ್ವಮಂಗಳ ರಾಯಚೂರು ಮತ್ತು ಆರ್.ಜಿ.ಶೆಟಗಾರ್ ಕಲಬುರಗಿ ರವರು ವಿಶೇಷ ಉಪನ್ಯಾಸ ನೀಡಿದರು.
ಈ ವೇಳೆ ಮಲ್ಲಿಕಾರ್ಜುನ ಅರುಣಿ, ಸೂಗುರೇಶ ವಾರದ್, ಮಹೇಶ್ಚಂದ್ರ ವಾಲಿ ಯಾದಗಿರಿ, ಸಂಜೀವಕುಮಾರ ಗುರುಮಠಕಲ್, ಬಸವರಾಜ ವಡಿಗೇರಾ, ಮಹೇಶ್ಚಂದ್ರ ಶಹಾಪುರ, ಸುರೇಶ ಸುರಪೂರ, ಅನ್ನಪೂರ್ಣ ಜವಳಿ, ನೀಲಕಂಠ ಹುಣಸಗಿ, ಮಲ್ಲಿಕಾರ್ಜುನ ಬಳೆ, ಬನ್ನಪ್ಪ ಬೆಟ್ಟಪ್ಪನೋರ್, ಕೈಲಾಸ್ ಆಸ್ಪಲ್ಲಿ, ಸೂಗಪ್ಪ ಸಾಹುಕಾರ, ಸಂತೋಷ ಖಾನವಳಿ, ಶರಣು ಚಂದ್ರಗಿರಿ, ಸಂತೋಷ ಚಂದ್ರಗಿರಿ ಸೇರಿದಂತೆ ಸಮಾಜದ ಮುಖಂಡರು, ಪದಾಧಿಕಾರಿಗಳು ಹಾಗೂ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಬಣಜಿಗ ಸಮಾಜದ ಜನರು ಭಾಗವಹಿಸಿದ್ದರು.
ಒಗ್ಗಟ್ಟಿನಲ್ಲಿ ಬಲವಿದೆ. ಸಮಾಜದ ಪ್ರತಿಯೊಬ್ಬರೂ ಸಂಘಟಿತರಾಗಿ ಪರಸ್ಪರ ಸಹಾಯ, ಸಹಕಾರ ನೀಡಬೇಕು. ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವಂತಹ ಬಲಿಷ್ಠ ಸಂಘಟನೆಯನ್ನು ಕಟ್ಟಬೇಕು. ಯಾದಗಿರಿ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಸೈದಾಪುರದಲ್ಲಿ ಬಣಜಿಗ ಸಮಾಜದ ಜಾಗೃತಿ ಸಮಾವೇಶ ಆಯೋಜಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.
• ಸೂಗರೇಶ ವಾರದ್ ಸುರಪೂರ, ರಾಜ್ಯ ಕಾರ್ಯಕಾರಣಿ ಸದಸ್ಯ
ರಾಜಕೀಯ ನಾಯಕರ ಸೋಲು-ಗೆಲುವಿನಲ್ಲಿ ನಮ್ಮ ಪಾತ್ರ ಇದೆ ಎಂದು ಗುರುತಿಸವಂತಿರಬೇಕು: ಬಣಜಿಗ ಸಮಾಜದ ಯುವಕರು ಶಿಕ್ಷಣದ ಜೊತೆಗೆ ರಾಜಕೀಯ, ಸಾಮಾಜಿಕ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯಬೇಕು. ನಮ್ಮ ಸಮಾಜವು ಚಿಕ್ಕದಿರಬಹುದು ಆದರೆ ನಾಯಕರ ಸೋಲು-ಗೆಲವಿನಲ್ಲಿ ನಮ್ಮ ಪಾತ್ರದ ಬಗ್ಗೆ ಮನವರಿಕೆ ಮಾಡುವಂತಿರಬೇಕು. ರಾಜಕೀಯ ಕ್ಷೇತ್ರದಲ್ಲಿಯೂ ಸಮಾಜದ ಪ್ರಾತಿನಿಧ್ಯ ಹೆಚ್ಚಬೇಕು. ಇದಕ್ಕಾಗಿ ಯುವಜನರು ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಬಣಜಿಗ ಸಮಾಜದ ಜಿಲ್ಲಾಧ್ಯಕ್ಷ ಬನ್ನಪ್ಪ ಸುಂಕದ ಕರೆ ನೀಡಿದರು.











Leave a Reply