
ಸುರಪುರ : ಬದುಕಿನ ಹಿರಿಮೆ ಮತ್ತು ರಹಸ್ಯವನ್ನು ಬೋಧಿಸುವುದೇ ನಿಜವಾದ ಧರ್ಮವಾಗಿದ್ದು, ಪರಿಶುದ್ಧ ಮತ್ತು ಪವಿತ್ರ ಜೀವನ ರೂಪುಗೊಳ್ಳಲು ಧರ್ಮ ಪ್ರಜ್ಞೆ ಅವಶ್ಯಕವಾಗಿದೆ. ಸಾಮರಸ್ಯದ ಬದುಕು ಜೀವನದಲ್ಲಿ ಸುಖ-ಶಾಂತಿಗೆ ಸೋಪಾನವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ತಾಲೂಕಿನ ದೇವಾಪುರ ಗ್ರಾಮದ ಶ್ರೀ ಜಡಿಶಾಂತಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಕಳಸಾರೋಹಣ, ಸಾಮೂಹಿಕ ವಿವಾಹ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಪರಿಪಕ್ವ ಸಮಾಜ ನಿರ್ಮಾಣವೇ ಧರ್ಮದ ಮೂಲ ಗುರಿಯಾಗಿದ್ದು, ಮನುಷ್ಯ ಜೀವನವನ್ನು ಸುಂದರ ಮತ್ತು ಶುದ್ಧಗೊಳಿಸುವುದೇ ಗುರುವಿನ ಪರಮ ಧ್ಯೇಯವಾಗಿದೆ ಎಂದು ಹೇಳಿದರು. ವೀರಶೈವ ಧರ್ಮದಲ್ಲಿ ಸಂಸ್ಕಾರ ಮತ್ತು ಧರ್ಮ ಪರಿಪಾಲನೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ದೇವಸ್ಥಾನಗಳು ನೊಂದ ಜನತೆಗೆ ಶಾಂತಿ ಮತ್ತು ನೆಮ್ಮದಿ ನೀಡುವ ಆಧ್ಯಾತ್ಮಿಕ ತಾಣಗಳಾಗಿವೆ ಎಂದು ತಿಳಿಸಿದರು.
ದೇಹವನ್ನು ದುಡಿಮೆಗೆ ಮತ್ತು ಮನಸ್ಸನ್ನು ಭಗವಂತನಿಗೆ ಅರ್ಪಿಸಿ ಬಾಳಿದಾಗ ಬದುಕು ಉಜ್ವಲವಾಗುತ್ತದೆ ಎಂದು ಜಗದ್ಗುರು ರೇಣುಕಾಚಾರ್ಯರು ಪ್ರತಿಪಾದಿಸಿರುವುದನ್ನು ಉಲ್ಲೇಖಿಸಿದರು. ಸಾಮೂಹಿಕ ವಿವಾಹಗಳಿಂದ ಸಮಾಜದಲ್ಲಿ ದುಂದು ವೆಚ್ಚ ಕಡಿಮೆಯಾಗುತ್ತದೆ. ಈ ಸಮಾರಂಭದಲ್ಲಿ 10 ಜೋಡಿ ನವ ದಂಪತಿಗಳು ಗೃಹಸ್ಥಾಶ್ರಮಕ್ಕೆ ಪಾದಾರ್ಪಣೆ ಮಾಡಿದರು. ಅವರ ಬದುಕು ಉಜ್ವಲವಾಗಲಿ ಎಂದು ಆಶಿಸಿದರು.
ವೀರಶೈವ ಧರ್ಮದ ಪಂಚ ಪೀಠಗಳಿಂದ ಮಹಿಳೆಯರಿಗೆ ಹಸಿರು ಬಳೆ, ಕುಂಕುಮ, ಕರಿಮಣಿ ಸರ, ಮೂಗು ನತ್ತು, ಕಾಲುಂಗುರ ಮತ್ತು ಮಾಂಗಲ್ಯ ನೀಡಲಾಗುತ್ತಿರುವುದನ್ನು ಸ್ಮರಿಸಿದರು. ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪ್ರಶಸ್ತಿ ನೀಡುವುದು ಸಂತೋಷದ ಸಂಗತಿ ಎಂದು ಹೇಳಿದರು.
ದೇವಾಪುರ ಹಿರೇಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ವಿವಾಹಕ್ಕೆ ಪಾವಿತ್ರ್ಯವಿದ್ದು, ಸತಿ-ಪತಿಗಳು ಸೌಹಾರ್ದದಿಂದ ಜೀವನ ನಡೆಸಬೇಕು ಎಂದರು. ಸಾಮರಸ್ಯ ಮತ್ತು ಸೌಹಾರ್ದತೆಯ ಜೀವನ ಉಜ್ವಲ ಭವಿಷ್ಯಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು.

ಗುರುಮಿಠಕಲ್ ಶಾಸಕ ಶರಣಗೌಡ ಕಂದಕೂರು ಸಮಾರಂಭವನ್ನು ಉದ್ಘಾಟಿಸಿ, ಮಾನವನ ಭೌತಿಕ ಬದುಕು ಶ್ರೀಮಂತವಾಗುತ್ತಿದ್ದರೂ ಆಂತರಿಕ ಬದುಕು ದುರ್ಬಲವಾಗುತ್ತಿದೆ. ಸಮಾಜದಲ್ಲಿ ಪ್ರೀತಿ ಮತ್ತು ವಿಶ್ವಾಸದಿಂದ ಬದುಕುವುದು ಅಗತ್ಯ ಎಂದು ಹೇಳಿದರು. ದೇವಾಪುರ ಶಿವಮೂರ್ತಿ ಶಿವಾಚಾರ್ಯರು ಜನಪರ ಕಾರ್ಯಗಳನ್ನು ಕೈಗೊಂಡಿರುವುದು ಶ್ಲಾಘನೀಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಶ್ರೀನಿವಾಸ ಸರಡಗಿ ಹಾಗೂ ಡಾ. ರೇವಣಸಿದ್ಧ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಕಲಬುರ್ಗಿ ಚವದಾಪುರಿ ಡಾ. ರಾಜಶೇಖರ ಶಿವಾಚಾರ್ಯರು, ಹೆಡಿಗೆಮುದ್ರಾ ಮಲ್ಲಿಕಾರ್ಜುನ ಶಿವಾಚಾರ್ಯರು ಉಪದೇಶ ನೀಡಿದರು. ತೊನಸನಹಳ್ಳಿ ರೇವಣಸಿದ್ಧ ಶಿವಾಚಾರ್ಯರು ಹಾಗೂ ನವಲಕಲ್ಲ ಸೋಮನಾಥ ಶಿವಾಚಾರ್ಯರು ಉಪಸ್ಥಿತರಿದ್ದರು.

ಮಾಜಿ ಸಚಿವ ನರಸಿಂಹ ನಾಯಕ (ರಾಜುಗೌಡ್ರ) ಲೋಗೋ ಬಿಡುಗಡೆ ಮಾಡಿ ಮಾತನಾಡಿ, ಧರ್ಮ ಮಾರ್ಗದಲ್ಲಿ ನಡೆಯುವುದು ಇಂದಿನ ಅಗತ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀಮತಿ ಶ್ವೇತಾ ರಾಜಶೇಖರ ಅವರಿಗೆ ಶಾಂತಶ್ರೀ ಪ್ರಶಸ್ತಿ, ಶ್ರೀಮತಿ ಚನ್ನಮ್ಮ ಮಹಾಂತಸ್ವಾಮಿ ಅವರಿಗೆ ರೇಣುಕಶ್ರೀ ಪ್ರಶಸ್ತಿ ಹಾಗೂ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಲಕ್ಷ್ಮೀಬಾಯಿ ರಮಾನಂದ ಕವಲಿ ಅವರಿಗೆ ನ್ಯಾಯರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಪಿ. ದಯಾನಂದ (ಡಿ.ಎಸ್. ಮ್ಯಾಕ್ಸ್) ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜಾ ಹನುಮಪ್ಪ ನಾಯಕ, ಚನ್ನಬಸಪ್ಪ ಮೆಕಾಲೆ, ವೀರೇಶ ಚಿಂಚೋಳಿ, ಬಲಭೀಮನಾಯಕ ಬೈರಿಮರಡಿ, ಸುರೇಶ ಆರ್. ಸಜ್ಜನ, ಸಂಗಣ್ಣ ಸಾಹು, ಸಿದ್ಧನಗೌಡ ಕರಿಭಾವಿ, ಶಂಕರ ನಾಯಕ, ಭೀಮಣ್ಣ ಬೇವಿನಾಳ, ಹೆಚ್.ಸಿ. ಪಾಟೀಲ, ಬಿ.ಎಮ್. ಹಳ್ಳಿಕೋಟಿ, ಬಸವರಾಜ ಸ್ಥಾವರಮಠ, ವೇಣುಮಾಧವ ನಾಯಕ, ಮಹೇಶ ಪಾಟೀಲ ಸೂಗೂರ, ಪ್ರಕಾಶ ಆರ್. ಸಜ್ಜನ್, ಕೃಷ್ಣಾರೆಡ್ಡಿ ಮುದನೂರು ಸೇರಿದಂತೆ ಹಲವರು ಭಾಗವಹಿಸಿದರು.
ಕಾರ್ಯಕ್ರಮವನ್ನು ಅಮರಯ್ಯಸ್ವಾಮಿ ಜಾಲಿಬೆಂಚಿ ನಿರೂಪಿಸಿದರು. ನಂತರ ಅನ್ನದಾಸೋಹ ಜರುಗಿತು.










Leave a Reply