ರಾಯಚೂರಿನಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿ, ಬೀಜದುಂಡೆ ತಯಾರಿಕೆ ಕಾರ್ಯಾಗಾರ

Posted by

ಸುದ್ದಿ ಬೆಳಕು ವಾರ್ತೆ

ರಾಯಚೂರು  : “ಧಾರ್ಮಿಕ ಆಚರಣೆಗಳು ಪರಿಸರಕ್ಕೆ ಪೂರಕವಾಗಿರಬೇಕೇ ಹೊರತು ಪ್ರಕೃತಿ ವಿಕೋಪಕ್ಕೆ ದಾರಿಯಾಗಬಾರದು. ಮಣ್ಣಿನಿಂದ ತಯಾರಿಸಿದ ನೈಸರ್ಗಿಕ ಗಣೇಶ ಮೂರ್ತಿಗಳನ್ನು ಪೂಜಿಸುವುದರಿಂದ ಜಲಮಾಲಿನ್ಯ ತಡೆಗಟ್ಟಲು ಸಾಧ್ಯ,” ಎಂದು ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಡಾ. ಸುಗುಣ ಬಸವರಾಜ ತಿಳಿಸಿದರು.

ಕಾಲೇಜಿನ ಇಕೋ-ಕ್ಲಬ್ (Eco-Club) ಹಾಗೂ ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದ “ಪರಿಸರ ಸ್ನೇಹಿ ಗಣೇಶ ವಿಗ್ರಹ ತಯಾರಿಕೆ ಹಾಗೂ ಬೀಜದುಂಡೆಗಳ ತಯಾರಿಕೆ” ಕುರಿತ ಒಂದು ದಿನದ ವಿಶೇಷ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

“ಪ್ರಕೃತಿಯ ಸಂಪನ್ಮೂಲಗಳನ್ನು ಮಿತವಾಗಿ, ಜವಾಬ್ದಾರಿಯಿಂದ ಸದ್ಬಳಕೆ ಮಾಡಿಕೊಳ್ಳಬೇಕು. ರಾಸಾಯನಿಕಯುಕ್ತ ಬಣ್ಣಗಳು ಹಾಗೂ ಪಿಒಪಿ ವಿಗ್ರಹಗಳಿಂದ ಪರಿಸರಕ್ಕೆ ಅಪಾರ ಹಾನಿಯಾಗುತ್ತಿದೆ. ಶುದ್ಧ ಜೇಡಿಮಣ್ಣಿನ ಮೂರ್ತಿಗಳ ಪೂಜೆ ಮತ್ತು ಬೀಜದುಂಡೆಗಳ ಪ್ರಸರಣ ಪರಿಸರ ಸಮತೋಲನ ಕಾಯ್ದುಕೊಳ್ಳಲು ಅತ್ಯಂತ ಸಹಕಾರಿ,” ಎಂದರು.

ಕಾರ್ಯಾಗಾರದ ಗೌರವ ಅತಿಥಿಯಾಗಿ ಭಾಗವಹಿಸಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮುಖಂಡ ಬಸವರಾಜ ಬೋರೆಡ್ಡಿ ಮಾತನಾಡಿ, “ನಮ್ಮ ಸಂಸ್ಥೆಯ ವತಿಯಿಂದ ಶಾಲಾ-ಕಾಲೇಜು ಮಕ್ಕಳ ಮೂಲಕ ಬೀಜದುಂಡೆಗಳನ್ನು (Seed Balls) ನಿರಂತರವಾಗಿ ತಯಾರಿಸಿ ವಿತರಿಸಲಾಗುತ್ತಿದೆ. ಇದು ಹಸಿರು ಪರಿಸರ ನಿರ್ಮಾಣಕ್ಕೆ ಹಾಗೂ ಅರಣ್ಯೀಕರಣಕ್ಕೆ ಪರಿಣಾಮಕಾರಿ ಮಾರ್ಗವಾಗಿದೆ,” ಎಂದು ಅಭಿಪ್ರಾಯಪಟ್ಟರು.

ಕಾರ್ಯಾಗಾರದ ಸಂಘಟಕರು ಹಾಗೂ ಇಕೋ-ಕ್ಲಬ್ ಸಂಯೋಜಕಿ, ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸರಸ್ವತಿ ಕೆ. ಮಾತನಾಡಿ, “ಮಣ್ಣಿನ ಗಣೇಶ ಮತ್ತು ಬೀಜದುಂಡೆ ತಯಾರಿಕೆಯ ಈ ಎರಡೂ ಚಟುವಟಿಕೆಗಳು ಯುವಪೀಳಿಗೆಯಲ್ಲಿ ಪರಿಸರ ಕಾಳಜಿ ಮೂಡಿಸಲು ಪೂರಕವಾಗಿವೆ,” ಎಂದು ವಿವರಿಸಿದರು. ಕಾರ್ಯಾಗಾರದಲ್ಲಿ ನಗರದ ವಿವಿಧ ಶಾಲೆಗಳ ಶಿಕ್ಷಕ ವೃಂದ, ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು.

You Might Also Like

Leave a Reply

Your email address will not be published. Required fields are marked *

Suddi Belaku