
ಸುದ್ದಿ ಬೆಳಕು ವಾರ್ತೆ
ಯಾದಗಿರಿ: ಪ್ರಸ್ತುತ ದಿನಗಳಲ್ಲಿ ಯಾದಗಿರಿ ಮತಕ್ಷೇತ್ರದಲ್ಲಿ “ಪದೇ ಪದೇ ಕರೆಂಟ್ ಕಟ್‌ಗೆ, ಜನ ಬೇಸತ್ತಿದ್ದಾರೆ” ಯಾದಗಿರಿ ಜಿಲ್ಲೆಯಲ್ಲಿ 42% ಬಿಸಿಲಿನ ಸೆಕೆಯಿಂದ ಜನ ಹೈರಾಣಾಗಿದ್ದರೆ, ಮತ್ತೊಂದೆಡೆ ದಿನದಲ್ಲಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಹತ್ತಾರು ಬಾರಿ ಯಾವುದೇ ಮುನ್ಸೂಚನೆ ಇಲ್ಲದೆ ವಿದ್ಯುತ್ ಕಡಿತಗೊಳಿಸುತ್ತಿರುವುದು ಯಾದಗಿರಿ ಮತಕ್ಷೇತ್ರದ ಸಾರ್ವಜನಿಕರ ತೀವ್ರ ಕೆರಳಿಕೆಗೆ ಕಾರಣವಾಗಿದೆ.
ತಿಂಗಳ ಕೊನೆಗೆ ಕರೆಂಟ್ ಬಿಲ್ ಮಾತ್ರ ಸರಿಯಾದ ಸಮಯಕ್ಕೆ ಬರುತ್ತದೆ, ಆದರೆ ಬಳಸಲು ಕರೆಂಟ್ ಮಾತ್ರ ಇರುವುದಿಲ್ಲ. ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಧರ ಸಾಹುಕಾರ ಅವರು ವಿದ್ಯುತ್ ಇಲಾಖೆ ಮತ್ತು ಯಾದಗಿರಿ ಶಾಸಕರಿಗೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ವಿದ್ಯುತ್ ಅಭಾವದಿಂದಾಗಿ ಸಾರ್ವಜನಿಕ ಜೀವನ, ಉದ್ಯಮ ಹಾಗೂ ಕೃಷಿ ವಲಯ ಸಂಪೂರ್ಣವಾಗಿ ಕಂಗೆಟ್ಟಿದ್ದು, ವಿಪರೀತ ಸೆಕೆಯಿಂದಾಗಿ ಫ್ಯಾನ್, ಕೂಲರ್ ಅಥವಾ ಎಸಿ ಬಳಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ವೃದ್ಧರು, ಅನಾರೋಗ್ಯ ಪೀಡಿತರು ಮತ್ತು ಸಣ್ಣ ಮಕ್ಕಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ನಗರ ಭಾಗಗಳಲ್ಲಿ ರಾತ್ರಿ ವೇಳೆಯೂ ಪದೇ ಪದೇ ಕರೆಂಟ್ ಕಟ್ ಆಗುತ್ತಿರುವುದರಿಂದ ಜನರು ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗದೆ ರಾತ್ರಿಯಿಡೀ ಕತ್ತಲಲ್ಲಿ ಕಳೆಯುವಂತಾಗಿದೆ.
ನಿರಂತರ ವಿದ್ಯುತ್ ಕೈಕೊಡುತ್ತಿರುವುದರಿಂದ ಸಣ್ಣ ಪುಟ್ಟ ಉದ್ಯಮಗಳಾದ ಮಹಿಳಾ ಸ್ವಸಹಾಯ ಉದ್ಯಮಿಗಳಿಗೆ, ಹಿಟ್ಟಿನ ಗಿರಣಿ, ಟೈಲರಿಂಗ್ ಶಾಪ್, ವೆಲ್ಡಿಂಗ್ ಶಾಪ್ ಮತ್ತು ಜೆರಾಕ್ಸ್ ಅಂಗಡಿಗಳ ಮಾಲೀಕರು, ಕೆಲಸವಿಲ್ಲದೆ ಕೈಕಟ್ಟಿ ಕುಳಿತುಕೊಳ್ಳುವಂತಾಗಿದ್ದು, ದಿನದ ಆದಾಯ ಕಳೆದುಕೊಂಡು ಜೀವನ ನಡೆಸಲು ಪರದಾಡುತ್ತಿದ್ದಾರೆ.
ಗ್ರಾಮೀಣ ಭಾಗಗಳಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ನಿಯಮದಂತೆ ಸಮರ್ಪಕವಾಗಿ ನೀಡಬೇಕಾದ 7 ಗಂಟೆಗಳ ‘ತ್ರೀ-ಫೇಸ್’ ವಿದ್ಯುತ್ ಸಿಗುತ್ತಿಲ್ಲ. ಇದರಿಂದಾಗಿ ತೋಟ ಹಾಗೂ ಕೈಗೆ ಬಂದ ಬೆಳೆಗಳಿಗೆ ನೀರು ಹಾಯಿಸಲು ಸಾಧ್ಯವಾಗದೆ, ಕಡುಬಿಸಿಲಿಗೆ ಬೆಳೆಗಳು ಕಣ್ಣೆದುರೇ ಒಣಗುತ್ತಿರುವುದನ್ನು ಕಂಡು ಅನ್ನದಾತರು ಕಣ್ಣೀರು ಹಾಕುತ್ತಿದ್ದಾರೆ.
ಕೂಡಲೇ ಸಂಬಂಧಪಟ್ಟ ವಿದ್ಯುತ್ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಯಾದಗಿರಿ ಮರಕ್ಷೇತ್ರದ ಶಾಸಕರು ಈ ಗಂಭೀರ ಸಮಸ್ಯೆಯ ಕಡೆಗೆ ಗಮನ ಹರಿಸಬೇಕು. ಅಘೋಷಿತ ವಿದ್ಯುತ್ ಕಡಿತವನ್ನು ತಕ್ಷಣವೇ ನಿಲ್ಲಿಸಿ, ನಿರಂತರ ಮತ್ತು ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಸಾರ್ವಜನಿಕರು ಹಾಗೂ ರೈತ ಸಂಘಟನೆಗಳೊಂದಿಗೆ ಸೇರಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಧರ ಸಾಹುಕಾರ ಎಚ್ಚರಿಸಿದ್ದಾರೆ.












Leave a Reply