
ಯಾದಗಿರಿ: ಮಹಾರಾಷ್ಟ್ರದ ಸಾಂಗ್ಲಿಯ ಭಾರತಿ ವಿದ್ಯಾಪೀಠ ಕಾಲೇಜಿನಲ್ಲಿ ವೈದ್ಯಕೀಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞತೆಯ ಸ್ನಾತಕೋತ್ತರ (ಪಿಜಿ) ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದ ಡಾ. ಶೈಲಶ್ರೀ ಡಾ. ಸುಭಾಷ ನಾಡಗೌಡ ಅವರಿಗೆ ಬಂಗಾರದ ಪದಕ ನೀಡಿ ಗೌರವಿಸಲಾಯಿತು.
ಪುಣೆಯ ಭಾರತಿ ವಿದ್ಯಾಪೀಠ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ, ಪ್ರತಾಪರಾವ ಗಣಪತರಾವ ಜಾಧವ ಅವರು ಪ್ರಶಸ್ತಿ ಪತ್ರ ಹಾಗೂ ಗೌರವ ಪದಕ ವಿತರಿಸಿದರು. ಪುಣೆ ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಶೇ. 79ರಷ್ಟು ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿರುವುದು ಗಮನಾರ್ಹ ಸಾಧನೆಯಾಗಿದೆ.

ನಗರದ ಖ್ಯಾತ ವೈದ್ಯರಾದ ಡಾ. ನೀಲಮ್ಮ ಎಸ್. ರಡ್ಡಿ ಯಲ್ಹೇರಿ ಅವರ ಪುತ್ರಿಯಾಗಿರುವ ಡಾ. ಶೈಲಶ್ರೀ, ಆರಂಭದಿಂದಲೇ ಪರಿಶ್ರಮ ಮತ್ತು ನಿಷ್ಠೆಯಿಂದ ಅಭ್ಯಾಸ ಮಾಡಿ ಈ ಸಾಧನೆ ಮಾಡಿದ್ದಾರೆ. ಅವರ ಸಾಧನೆ ಯುವ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ.
ಸಮಾರಂಭದಲ್ಲಿ ಅವರ ತಾಯಿ ಡಾ. ನೀಲಮ್ಮ ಎಸ್. ರಡ್ಡಿ ಯಲ್ಹೇರಿ, ಪತಿ ಡಾ. ಸುಭಾಷ ನಾಡಗೌಡ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.
ಈ ಕುರಿತು ಮಾತನಾಡಿದ ಡಾ. ಶೈಲಶ್ರೀ ನಾಡಗೌಡ, ತಾಯಿ ಹಾಗೂ ಗುರುಗಳ ಮಾರ್ಗದರ್ಶನದಿಂದ ವೈದ್ಯಕೀಯ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿದ್ದಾಗಿ ತಿಳಿಸಿದರು. ಯಾದಗಿರಿ ಜಿಲ್ಲೆಯಂತಹ ಹಿಂದುಳಿದ ಪ್ರದೇಶಗಳಲ್ಲಿ ಮಹಿಳೆಯರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಿ, ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ತರಬೇಕೆಂಬುದು ತಮ್ಮ ಮುಖ್ಯ ಉದ್ದೇಶವೆಂದು ಹೇಳಿದರು.










Leave a Reply