
ಸುದ್ದಿ ಬೆಳಕು ವಾರ್ತೆ
ಯಾದಗಿರಿ: ರಾಜ್ಯದಲ್ಲಿ ಮಳೆ ಕೊರತೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ರೈತರನ್ನು ಕೂಡಲೇ ಕಾಪಾಡಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ನಿಯೋಗವು ಸರ್ಕಾರದ ಕೃಷಿ ಇಲಾಖೆಯ ಆಯುಕ್ತ ಡಾ. ಸತೀಶ ಬಿ.ಸಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಮಳೆಯನ್ನೇ ನಂಬಿ ಕೃಷಿ ಕಾಯಕದಲ್ಲಿ ತೊಡಗಿರುವ ರಾಜ್ಯದ ಬಹುಪಾಲು ಅನ್ನದಾತರು ಈ ಬಾರಿ ಮಳೆ ಬಾರದೇ ಸಂಕಷ್ಟದಲ್ಲಿದ್ದಾರೆ. ಈಗಾಗಲೇ ಮುಂಗಾರು ಬೆಳೆ ನಾಶವಾಗಿದ್ದು, ಹಿಂಗಾರು ಬೆಳೆಯ ಮೇಲೂ ಅನಿಶ್ಚಿತತೆ ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ರೈತರನ್ನು ಆರ್ಥಿಕ ಮತ್ತು ಕೃಷಿ ಸಂಕಷ್ಟದಿಂದ ಪಾರು ಮಾಡಬೇಕೆಂದು ಕೃಷಿಕ ಸಮಾಜ ಒತ್ತಾಯಿಸಿತು.
ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಅಧ್ಯಕ್ಷ ನಗರದ ಮಹಾದೇವಪ್ಪ ನೇತೃತ್ವದ ನಿಯೋಗದಲ್ಲಿ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ರಾಚನಗೌಡ ಮುದ್ನಾಳ, ಮುಳ್ಳೂರ ಶಿವಣ್ಣ, ಶಿವಣ್ಣ ದಾವಣಗೆರೆ, ತುಮಕೂರು ಕೃಷಿಕ ಸಮಾಜದ ಅಧ್ಯಕ್ಷ ಪರಮೇಶ್ವರಪ್ಪ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.
ರಾಜ್ಯದ ರೈತ ಕುಲವನ್ನು ಉಳಿಸುವ ಸಲುವಾಗಿ ಸರ್ಕಾರ ಮತ್ತು ಕೃಷಿ ಇಲಾಖೆಯು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ನಿಯೋಗವು ಕೃಷಿ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿತು.
ರಾಜ್ಯವನ್ನು ಸಂಪೂರ್ಣವಾಗಿ ಬರಪೀಡಿತ ಪ್ರದೇಶ ಎಂದು ಘೋಷಿಸಬೇಕು. ಈಗಾಗಲೇ ಮುಂಗಾರು ಬೆಳೆಗೆ ನೀಡಲಾಗಿದ್ದ ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಎಲ್ಲಾ ಕೃಷಿ ಪರಿಕರಗಳನ್ನು ಹಿಂಗಾರು ಬೆಳೆಗೆ ಮತ್ತೊಮ್ಮೆ ಸಂಪೂರ್ಣವಾಗಿ ಉಚಿತವಾಗಿ ಎಲ್ಲಾ ರೈತರಿಗೂ ವಿತರಿಸಬೇಕು. ಮುಂಗಾರು ಮಳೆಗೆ ಬೆಳೆ ಹಾಕಿ ನಾಶವಾಗಿರುವ ಎಲ್ಲಾ ರೈತರಿಗೂ ರಾಜ್ಯಾದ್ಯಂತ ಬೆಳೆ ಪರಿಹಾರವನ್ನು ತಕ್ಷಣ ಪಾವತಿಸಬೇಕು.
ಬರ ನಿರ್ವಹಣೆಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ದನಕರುಗಳಿಗೆ ಮೇವನ್ನು ಒದಗಿಸುವ ಕಾರ್ಯವನ್ನು ಚುರುಕುಗೊಳಿಸಬೇಕು. ಇದಕ್ಕಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಕನಿಷ್ಠ 10 ಕೋಟಿ ರೂಪಾಯಿ ವಿಶೇಷ ಅನುದಾನವನ್ನು ಬಿಡುಗಡೆ ಮಾಡಬೇಕು.
ಕೃಷಿಯೇ ಆಧಾರವಾಗಿರುವ ರೈತರಿಗೆ ಕೃಷಿ ಪಂಪ್ ಸೆಟ್ ಗಳಿಗೆ ದಿನಕ್ಕೆ ಕನಿಷ್ಠ 7 ಗಂಟೆಗಳ ಕಾಲ ಅಡೆತಡೆ ರಹಿತ ಮತ್ತು ಗುಣಮಟ್ಟದ 3 ಫೇಸ್ ವಿದ್ಯುತ್ ಸರಬರಾಜು ಮಾಡಬೇಕು. ವಿದ್ಯುತ್ ಪರಿವರ್ತಕಗಳು ಸುಟ್ಟು ಹೋದರೆ ಅಥವಾ ಕೆಟ್ಟು ಹೋದರೆ ರೈತರಿಗೆ ತೊಂದರೆಯಾಗದಂತೆ ತಕ್ಷಣವೇ ಬದಲಾಯಿಸುವ ವ್ಯವಸ್ಥೆ ಮಾಡಬೇಕು.
ಆರ್ಥಿಕ ಸಂಕಷ್ಟದಲ್ಲಿರುವ ರೈತರ ಹೊರೆ ಕಡಿಮೆ ಮಾಡಲು ರೈತರ ಭೂ ಕಂದಾಯವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಅದೇ ರೀತಿ ವಾಣಿಜ್ಯ ಬ್ಯಾಂಕ್ ಮತ್ತು ಸಹಕಾರ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಬೆಳೆ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಈಗಾಗಲೇ ಸಾಲವನ್ನು ಬೇರೆ ಮೂಲಗಳಿಂದ ತೀರಿಸಿದ ರೈತರನ್ನೂ ಸಹ ಸಾಲ ಮನ್ನಾ ಯೋಜನೆಯ ವ್ಯಾಪ್ತಿಗೆ ಪರಿಗಣಿಸಬೇಕು. ಸಾಲ ಮನ್ನಾದಲ್ಲಿ ದೊಡ್ಡ ರೈತ, ಸಣ್ಣ ರೈತ ಎಂಬ ತಾರತಮ್ಯ ಮಾಡಬಾರದು. ಆದಾಯ ತೆರಿಗೆ ಪಾವತಿದಾರ ಎಂಬ ಕಾರಣಕ್ಕೂ ಯಾರನ್ನೂ ಹೊರಗಿಡಬಾರದು. ರೈತ ಎಂಬ ಅರ್ಹತೆಯೇ ಸಾಲ ಮನ್ನಾಕ್ಕೆ ಮಾನದಂಡವಾಗಬೇಕು ಎಂದು ನಿಯೋಗವು ಆಗ್ರಹಿಸಿತು.
ಬರದಿಂದ ತತ್ತರಿಸಿರುವ ರೈತ ಮತ್ತು ಕೃಷಿಯನ್ನು ಉಳಿಸುವ ನಿಟ್ಟಿನಲ್ಲಿ ಮೇಲಿನ ಎಲ್ಲಾ ಬೇಡಿಕೆಗಳ ಬಗ್ಗೆ ತಕ್ಷಣವೇ ಸರ್ಕಾರದ ಗಮನಕ್ಕೆ ತಂದು ಕ್ರಮ ವಹಿಸಬೇಕೆಂದು ಕರ್ನಾಟಕ ಪ್ರದೇಶ ಕೃಷಿಕ ಸಮಾಜವು ಕೃಷಿ ಆಯುಕ್ತರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.











Leave a Reply