ಕಲ್ಯಾಣ ಕರ್ನಾಟಕಕ್ಕೆ ₹5,000 ಕೋಟಿ ಅನುದಾನ: ಸಿಎಂ ಡಿ.ಕೆ. ಶಿವಕುಮಾರ್

Posted by

ಸುದ್ದಿ ಬೆಳಕು ವಾರ್ತೆ

ಕಲಬುರಗಿ : “ಬೆಂಗಳೂರು ನಾಡಿನ ಕಿರೀಟವಾದರೆ, ಜಗಜ್ಯೋತಿ ಬಸವೇಶ್ವರರ ಕರ್ಮಭೂಮಿ ಹಾಗೂ ಸಾಮಾಜಿಕ ಕ್ರಾಂತಿಯ ನೆಲವಾದ ಕಲ್ಯಾಣ ಕರ್ನಾಟಕವು ರಾಜ್ಯದ ನೈಜ ಶಕ್ತಿಪೀಠವಿದ್ದಂತೆ. ಕಲ್ಯಾಣದ ನಿಜವಾದ ಕಲ್ಯಾಣವೇ ನಮ್ಮ ಸರ್ಕಾರದ ಮೂಲ ಮಂತ್ರವಾಗಿದೆ,” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಪಾದಿಸಿದರು.

ನಗರದ ಡಿಎಆರ್ ಪೊಲೀಸ್ ಪರೇಡ್ ಮೈದಾನದಲ್ಲಿ ಬುಧವಾರ ಆಯೋಜಿಸಲಾಗಿದ್ದ 79ನೇ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಪ್ರಯುಕ್ತ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಆಕರ್ಷಕ ಪಥಸಂಚಲನ ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಿದ ನಂತರ ಅವರು ಸಾರ್ವಜನಿಕ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.

ಪ್ರತಿ ವರ್ಷ ₹5,000 ಕೋಟಿ ಅನುದಾನ – ಉದ್ಯೋಗ ಭರ್ತಿ:

“ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಕೆಕೆಆರ್‌ಡಿಬಿ) ಪ್ರತಿ ವರ್ಷ ₹5,000 ಕೋಟಿ ಅನುದಾನವನ್ನು ಸರ್ಕಾರ ಒದಗಿಸಲಿದೆ. 2013-14 ರಿಂದ 2025-26ರ ವರೆಗೆ ಮಂಡಳಿಗೆ ಒಟ್ಟು ₹24,780 ಕೋಟಿ ಬಿಡುಗಡೆ ಮಾಡಲಾಗಿದ್ದು, ಈಗಾಗಲೇ ₹14,000 ಕೋಟಿ ವೆಚ್ಚದಲ್ಲಿ 32,985 ಕಾಮಗಾರಿಗಳು ಪೂರ್ಣಗೊಂಡಿವೆ. 8,118 ಕಾಮಗಾರಿಗಳು ಪ್ರಗತಿಯಲ್ಲಿವೆ. ಸಂವಿಧಾನದ 371(ಜೆ) ವಿಶೇಷ ಸ್ಥಾನಮಾನ ಜಾರಿಯಾದ ಬಳಿಕ 79,383 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಪ್ರಸ್ತುತ ಹೊಸದಾಗಿ ಭರ್ತಿ ಪ್ರಕ್ರಿಯೆಯಲ್ಲಿರುವ 72 ಸಾವಿರ ಸರ್ಕಾರಿ ಹುದ್ದೆಗಳ ಪೈಕಿ 32 ಸಾವಿರ ಹುದ್ದೆಗಳು ಈ ಭಾಗದ ಯುವಜನರಿಗೆ ದೊರೆಯಲಿವೆ. 371(ಜೆ) ಮೀಸಲಾತಿಯಿಂದಾಗಿ ವೈದ್ಯಕೀಯ ಕ್ಷೇತ್ರದಲ್ಲಿ 10,000 ಹಾಗೂ ಎಂಜಿನಿಯರಿಂಗ್‌ನಲ್ಲಿ 31,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸೀಟುಗಳು ಲಭಿಸಿವೆ. ಈ ಕ್ರಾಂತಿಕಾರಿ ತಿದ್ದುಪಡಿ ತಂದ ಯುಪಿಎ ನಾಯಕಿ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಅವಿರತ ಶ್ರಮಿಸಿದ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಕೊಡುಗೆಯನ್ನು ಯಾರೂ ಮರೆಯುವಂತಿಲ್ಲ,” ಎಂದು ಸ್ಮರಿಸಿದರು.

ಪ್ರಮುಖ ಯೋಜನೆಗಳ ಸಮಗ್ರ ನೀಲನಕ್ಷೆ:

  • ಕಲ್ಯಾಣ ಕರ್ನಾಟಕ ಎಕಾನಮಿ ಮಿಷನ್ (KKEM): ಸೆಕ್ಷನ್ 8 ಕಂಪನಿಯಾಗಿ ಈ ಮಿಷನ್ ಸ್ಥಾಪಿಸಲಾಗುತ್ತಿದ್ದು, ಬೃಹತ್ ಕೈಗಾರಿಕೆಗಳು ಹಾಗೂ ಹೂಡಿಕೆಗಳನ್ನು ಸೆಳೆಯಲಿದೆ.

  • ಜೈವಿಕ ಆರ್ಥಿಕ ಮಿಷನ್ (Bio Economy Mission): ತೊಗರಿ ಬೇಳೆ, ಕಮಲಾಪುರ ಕೆಂಪು ಬಾಳೆಹಣ್ಣು, ಒಣದ್ರಾಕ್ಷಿ ಹಾಗೂ ಸಿರಿಧಾನ್ಯಗಳ ಮೌಲ್ಯವರ್ಧನೆ ಮತ್ತು ಸಂಸ್ಕರಣೆಗೆ ಚಾಲನೆ ನೀಡಲಾಗುತ್ತದೆ.

  • ಆರೋಗ್ಯ ಆವಿಷ್ಕಾರ & ರಕ್ತಹೀನತೆ ಮುಕ್ತ ಅಭಿಯಾನ: ₹1,797 ಕೋಟಿ ವೆಚ್ಚದಲ್ಲಿ ಕಲಬುರಗಿಯನ್ನು ‘ಮೆಡಿಕಲ್ ಹಬ್’ ಮಾಡಲಾಗುತ್ತಿದೆ. ಯಾದಗಿರಿ, ಬೀದರ್, ಕೊಪ್ಪಳದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಪ್ರಗತಿಯಲ್ಲಿದೆ. ಗರ್ಭಿಣಿಯರು ಹಾಗೂ ತಾಯಂದಿರಿಗಾಗಿ ರಕ್ತಹೀನತೆ ವಿರುದ್ಧ 2 ವರ್ಷಗಳ ವಿಶೇಷ ಅಭಿಯಾನ ಕೈಗೊಳ್ಳಲಾಗುವುದು.

  • ಸ್ಪೋರ್ಟ್ಸ್ ಸಿಟಿ & ಕೆಎಸ್‌ಸಿಎ ಒಪ್ಪಂದ: ಕಲಬುರಗಿ ತಾಲೂಕಿನ ಹಡಗಿಲ ಹಾರೂತಿ ಗ್ರಾಮದಲ್ಲಿ ಅಂತಾರಾಷ್ಟ್ರೀಯ ದರ್ಜೆಯ “ಸ್ಪೋರ್ಟ್ಸ್ ಸಿಟಿ” ಸ್ಥಾಪನೆ. ಚಂದ್ರಶೇಖರ ಪಾಟೀಲ ಕ್ರೀಡಾಂಗಣದ ನವೀಕರಣ ಹಾಗೂ ಕೆಎಸ್‌ಸಿಎ ಸಹಯೋಗದಲ್ಲಿ ಕ್ರಿಕೆಟ್ ಮೈದಾನಗಳ ಅಭಿವೃದ್ಧಿ.

  • ಐಟಿ ಪಾರ್ಕ್ & KRIYA: 30 ಎಕರೆಯಲ್ಲಿ ನೂತನ ಐಟಿ ಪಾರ್ಕ್ ಹಾಗೂ ಸ್ಟಾರ್ಟ್‌ಅಪ್‌ಗಳಿಗಾಗಿ ‘ಕ್ರಿಯಾ’ (Kalaburagi Research Innovation and Youth Accelerator) ಸ್ಥಾಪನೆ.

  • ನಗರ ಮೂಲಸೌಕರ್ಯ & 50,000 ನಿವೇಶನಗಳು: ಸೇಡಂ ರಸ್ತೆ ರಿಂಗ್ ರೋಡ್‌ನಲ್ಲಿ ಮೇಲ್ಸೇತುವೆ, ಪೆರಿಫೆರಲ್ ರಿಂಗ್ ರೋಡ್ ಡಿಪಿಆರ್, ₹30 ಕೋಟಿ ವೆಚ್ಚದಲ್ಲಿ ಕೆರೆ-ಮನರಂಜನಾ ಪಾರ್ಕ್, ಎಐ ಆಧಾರಿತ ಸಿಸಿಟಿವಿ ಜಾಲ ಹಾಗೂ ನಿವೇಶನ ರಹಿತ ಬಡವರಿಗೆ 50,000 ವಸತಿ ನಿವೇಶನಗಳ ಹಂಚಿಕೆ.

  • ಪುಣ್ಯ ಯಾತ್ರಾ ಸರ್ಕ್ಯೂಟ್: ಕಲಬುರಗಿ ಕೋಟೆ, ಶರಣಬಸವೇಶ್ವರ ಗುಡಿ, ಖ್ವಾಜಾ ಬಂದೇ ನವಾಜ್ ದರ್ಗಾ, ಬುದ್ಧ ವಿಹಾರ, ಮಳಖೇಡ, ಸನ್ನತಿ, ನಾಗಾವಿ, ಕಾಳಗಿ ಸಂಪರ್ಕಿಸುವ ಪ್ರವಾಸೋದ್ಯಮ ಜಾಲ; ಮೊದಲ ಹಂತದಲ್ಲಿ ₹50 ಕೋಟಿ ವೆಚ್ಚದಲ್ಲಿ ಗಾಣಗಾಪುರ ಅಭಿವೃದ್ಧಿ ಹಾಗೂ ಕಲಬುರಗಿಯಲ್ಲಿ ‘ವಚನ ಮಂಟಪ’ ಸ್ಥಾಪನೆ.

  • ಕೋಟಿ ವೃಕ್ಷ ಅಭಿಯಾನ: ಹಸಿರು ಹೊದಿಕೆ ಹೆಚ್ಚಿಸಲು ಮುಂದಿನ 2 ವರ್ಷಗಳಲ್ಲಿ ಕಲ್ಯಾಣ ಕರ್ನಾಟಕದಾದ್ಯಂತ 1 ಕೋಟಿ ಗಿಡಗಳನ್ನು ನೆಟ್ಟು ಪೋಷಿಸುವ ಬೃಹತ್ ಅಭಿಯಾನ.

ಪೊಲೀಸ್, ಗೃಹರಕ್ಷಕ, ಅಗ್ನಿಶಾಮಕ ಹಾಗೂ ಶಾಲಾ ಮಕ್ಕಳ 16 ತುಕಡಿಗಳಿಂದ ಶಿಸ್ತುಬದ್ಧ ಪಥಸಂಚಲನ ನಡೆಯಿತು. ಕಲಾವಿದ ವಿಲಾಸ್ ನಾಯಕ್ ಅವರು ನೆಹರು ಮತ್ತು ಸರ್ದಾರ್ ಪಟೇಲ್ ಅವರ ಲೈವ್ ಪೇಂಟಿಂಗ್ ಬಿಡಿಸಿ ಗಮನ ಸೆಳೆದರು.

ಸಮಾರಂಭದಲ್ಲಿ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕಿ ಕನೀಜ್ ಫಾತೀಮಾ, ಸಂಸದ ರಾಧಾಕೃಷ್ಣ ದೊಡ್ಡಮನಿ, ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್, ಶಾಸಕರುಗಳಾದ ಎಂ.ವೈ. ಪಾಟೀಲ್, ಅಲ್ಲಮಪ್ರಭು ಪಾಟೀಲ್, ಡಾ. ಅವಿನಾಶ್ ಜಾಧವ್, ಬಸವರಾಜ ಮತ್ತಿಮಡು, ಬಸನಗೌಡ ದದ್ದಲ್, ಹಂಪನಗೌಡ ಬಾದರ್ಲಿ, ವಿಧಾನ ಪರಿಷತ್ ಸದಸ್ಯರು, ನಿಗಮ ಮಂಡಳಿ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

You Might Also Like

Leave a Reply

Your email address will not be published. Required fields are marked *

Suddi Belaku