
ಸುದ್ದಿ ಬೆಳಕು ವಾರ್ತೆ
ಸೈದಾಪುರ ಏಪ್ರಿಲ್ 18 : ಗುರುಮಠಕಲ್ ಕ್ಷೇತ್ರದ ಹತ್ತಿಕುಣಿ ಕ್ಲಸ್ಟರ್ ಯೋಜನೆಯಡಿ 72 ಕೋಟಿ ರೂ. ಮೊತ್ತದ ಕಾಮಗಾರಿಗೆ ಸಚಿವ ಸಂಪುಟ ಸಭೆಯು ಆಡಳಿತಾತ್ಮಕ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ, ಸಚಿವ ಪ್ರಿಯಾಂಕ್ ಖರ್ಗೆ ಅವರ ಕಾರ್ಯವನ್ನು ಕ್ಷೇತ್ರದ ರೈತಾಪಿ ವರ್ಗದ ಪರವಾಗಿ ಕೆ.ಪಿ.ಸಿ.ಸಿ ಸದಸ್ಯ ಶರಣಪ್ಪ ಮಾನೇಗಾರ್ ಶ್ಲಾಘಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಹತ್ತಿಕುಣಿ ಎಡದಂಡೆ ಕಾಲುವೆ 1973ರಲ್ಲಿ ನಿರ್ಮಾಣಗೊಂಡಿದ್ದು, ಸುಮಾರು 14 ಕಿಲೋ ಮೀಟರ್ ಉದ್ದ ಹೊಂದಿದೆ ಎಂದು ತಿಳಿಸಿದ್ದಾರೆ. ಈ ಯೋಜನೆಯ ಉದ್ದೇಶ ಹತ್ತಿಕುಣಿ, ಯಡ್ಡಳ್ಳಿ, ಹೊನಗೇರಾ, ಬಂಡಹಳ್ಳಿ, ದಸ್ತರಾಬಾದ್ ಮತ್ತು ಮುಂಡರಗಿ ಸೇರಿದಂತೆ ಬರಪೀಡಿತ ಗ್ರಾಮಗಳ ಸುಮಾರು 5,300 ಎಕರೆ ಕೃಷಿ ಯೋಗ್ಯ ಪ್ರದೇಶಕ್ಕೆ ನೀರು ಒದಗಿಸುವುದಾಗಿದೆ.
ಆದರೆ ಕಳೆದ 53 ವರ್ಷಗಳಿಂದ ಕಾಲುವೆಗೆ ಸೂಕ್ತ ದುರಸ್ತಿ ಕಾರ್ಯ ಕೈಗೊಳ್ಳದ ಕಾರಣ, ನೀರಿನ ಹರಿವಿನ ಪ್ರಮಾಣ ಕುಸಿತಗೊಂಡಿದೆ. ಇದರ ಪರಿಣಾಮವಾಗಿ ಅಲಬೂರು, ಬಾದರ್ಲಿ, ಗಿಣಿವಾರ, ಹರತನೂರು ಹಾಗೂ ವೆಂಗಲಾಪುರ ಗ್ರಾಮಗಳ ಕೊನೆಯ ಭಾಗದ ರೈತರಿಗೆ ನೀರು ತಲುಪುವುದರಲ್ಲಿ ಸಮಸ್ಯೆ ಎದುರಾಗಿದೆ.
ಈ ಹಿನ್ನೆಲೆಯಲ್ಲಿ, ಶಿಥಿಲಾವಸ್ಥೆಯಲ್ಲಿರುವ ಹತ್ತಿಕುಣಿ ಜಲಾಶಯ ಕಾಲುವೆಯ ಸಮಗ್ರ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಇದರಿಂದ ಎಲ್ಲಾ ಗ್ರಾಮಗಳ ರೈತರಿಗೆ ಸಮರ್ಪಕವಾಗಿ ನೀರು ತಲುಪುವ ನಿರೀಕ್ಷೆಯಿದೆ ಎಂದು ಮಾನೇಗಾರ್ ತಿಳಿಸಿದ್ದಾರೆ.
ಈ ಕಾಮಗಾರಿ ಪೂರ್ಣಗೊಂಡಲ್ಲಿ, ಕ್ಷೇತ್ರದ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ಸಿಗುವುದಲ್ಲದೆ, ರೈತರ ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ ಎಂಬ ಆಶಾಭಾವನೆ ವ್ಯಕ್ತವಾಗಿದೆ ಎಂದು ಸಂತಸ ಪಟ್ಟರು.










Leave a Reply