
ಸುದ್ದಿ ಬೆಳಕು ವಾರ್ತೆ
ಕಲಬುರಗಿ: ಹಿಂದುಳಿದ ಹಾಗೂ ಸಣ್ಣ ಸಣ್ಣ ಕಾಯಕ ಸಮಾಜಗಳಿಗೆ ನೀಡಿದ ಆಶ್ವಾಸನೆಗಳು ಬರೀ ಸುಳ್ಳಾಗದೆ, ಕೊಟ್ಟ ಮಾತು ತಪ್ಪದೆ ನ್ಯಾಯ ದೊರಕಿಸಿಕೊಡುವ ಕೆಲಸವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡಬೇಕು ಎಂದು ಕಲಬುರಗಿ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಒತ್ತಾಯಿಸಿದೆ. ಸಮಾಜದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಅವರಿಗೆ ಸಮಾಜದ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.
ಸಮಾಜದ ಪ್ರಮುಖ ಬೇಡಿಕೆಗಳು:
ಪ್ರತ್ಯೇಕ ಅಭಿವೃದ್ಧಿ ನಿಗಮ: ಹಡಪದ ಅಪ್ಪಣ್ಣ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಿ, ಕನಿಷ್ಠ ₹100 ಕೋಟಿ ಅನುದಾನ ಮೀಸಲಿಡಬೇಕು.
ಕಠಿಣ ಕಾನೂನು ಜಾರಿ: ಕಾಯಕ ಸಮುದಾಯಗಳ ಮೇಲಿನ ಜಾತಿ ನಿಂದನೆಗೆ ತಡೆ ಹಾಕಲು ಕಠಿಣ ಕಾನೂನು ಜಾರಿಗೆ ತರಬೇಕು ಹಾಗೂ ಇಂತಹ ಪ್ರಕರಣಗಳನ್ನು ಅಟ್ರಾಸಿಟಿ ಕಾಯ್ದೆಯಡಿ ದಾಖಲಿಸಬೇಕು.
ಗವಿ ಅಭಿವೃದ್ಧಿ: ಬಸವಕಲ್ಯಾಣದಲ್ಲಿರುವ ಬಸವಣ್ಣನವರ ಅರಿವಿನ ಮನೆಯ ಗವಿಯ ಪಕ್ಕದಲ್ಲಿರುವ ನಿಜಸುಖಿ ಹಡಪದ ಅಪ್ಪಣ್ಣನವರ ಗವಿಯನ್ನು ಬಸವಕಲ್ಯಾಣ ಅಭಿವೃದ್ಧಿ ಮಂಡಳಿ (BKDB) ವತಿಯಿಂದ ಅಭಿವೃದ್ಧಿಪಡಿಸಬೇಕು.
ತನಿಖೆಗೆ ಆಗ್ರಹ: ನಿಜಸುಖಿ ಹಡಪದ ಅಪ್ಪಣ್ಣನವರ ಗವಿಯ ಸ್ಥಳದಲ್ಲಿ ರಾತ್ರೋರಾತ್ರಿ ಅನ್ಯ ಮೂರ್ತಿ ಸ್ಥಾಪಿಸಿರುವ ಕುರಿತು ಸೂಕ್ತ ತನಿಖೆ ನಡೆಸಿ, ಬಸವಾದಿ ಕಾಯಕ ಶರಣರಾದ ಹಡಪದ ಅಪ್ಪಣ್ಣನವರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು.
ಕಾಯಕ ಶರಣರ ಇತಿಹಾಸ, ಪರಂಪರೆ ಮತ್ತು ಸ್ಮಾರಕಗಳನ್ನು ಸಂರಕ್ಷಿಸಿ ಗೌರವಿಸುವುದು ಸರ್ಕಾರದ ಕರ್ತವ್ಯವಾಗಿದೆ. ಬರುವ ಮುಂಗಾರು ಅಧಿವೇಶನದಲ್ಲಿ ಈ ಎಲ್ಲಾ ಬೇಡಿಕೆಗಳನ್ನು ಪ್ರಸ್ತಾಪಿಸಿ, ಹಡಪದ ಸಮಾಜದ ಪರವಾಗಿ ಧ್ವನಿಯಾಗಬೇಕು ಹಾಗೂ ನಿಗಮ ಮಂಡಳಿಗೆ ಅನುದಾನ ಬಿಡುಗಡೆಗೊಳಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಶಾಸಕರಲ್ಲಿ ವಿನಂತಿಸಲಾಯಿತು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಹಡಪದ ಸಮಾಜದ ಜಿಲ್ಲಾಧ್ಯಕ್ಷ ಈರಣ್ಣ ಸಿ. ಹಡಪದ ಸಣ್ಣೂರ, ಮುಖಂಡರಾದ ಸುನೀಲ್ ಕುಮಾರ್ ಭಾಗಹಿಪ್ಪರರ್ಗಾ ಸೇರಿದಂತೆ ಅನೇಕ ನಾಯಕರು ಉಪಸ್ಥಿತರಿದ್ದರು.
“ಹಡಪದ ಸಮಾಜದ ನ್ಯಾಯಯುತ ಬೇಡಿಕೆಗಳಿಗೆ ಧ್ವನಿಯಾಗಿ, ಕಾಯಕ ಶರಣರ ಗೌರವ ಮತ್ತು ಹಕ್ಕುಗಳನ್ನು ರಕ್ಷಿಸಲು ಸಮಾಜ ಸದಾ ಬದ್ಧವಾಗಿದೆ” ಎಂದು ಹಡಪದ ಸಮಾಜದ ಕಲಬುರಗಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ. ಹಡಪದ ಸುಗೂರ ಎನ್. ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











Leave a Reply