
ಸುದ್ದಿ ಬೆಳಕು ವಾರ್ತೆ
ಗುರುಮಠಕಲ್ (ಯಾದಗಿರಿ): ಇಲ್ಲಿನ ವಿದ್ಯಾಜ್ಯೋತಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿಗಾಗಿ ಮಕ್ಕಳ ಹಕ್ಕುಗಳು ಮತ್ತು ಸಂಬಂಧಿತ ಕಾಯ್ದೆ-ಕಾನೂನುಗಳ ಕುರಿತು ಜಾಗೃತಿ ಹಾಗೂ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಾಜ ಕಾರ್ಯಕರ್ತೆ ಕುಮಾರಿ ಮಂಜಮ್ಮ, “ಬಾಲಕಾರ್ಮಿಕ ನಿಷೇಧ ಕಾಯ್ದೆ-೧೯೮೬ ರ ಪ್ರಕಾರ ೬ ರಿಂದ ೧೮ ವರ್ಷದೊಳಗಿನ ಪ್ರತಿಯೊಂದು ಮಗುವೂ ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು. ಮಕ್ಕಳು ಶಾಲೆಯನ್ನು ಬಿಟ್ಟು ಕೂಲಿ ಕೆಲಸಕ್ಕೆ ತೆರಳಿದರೆ ಶಿಕ್ಷಣದಿಂದ ವಂಚಿತರಾಗುತ್ತಾರೆ” ಎಂದರು.
“ಮಕ್ಕಳನ್ನು ಬಾಲಕಾರ್ಮಿಕತೆಗೆ ಒಳಪಡಿಸಿದರೆ ಅಥವಾ ಅಪಾಯಕಾರಿ ಸ್ಥಳಗಳಲ್ಲಿ ಕೆಲಸಕ್ಕೆ ನಿಯೋಜಿಸಿಕೊಂಡರೆ ಅಂತವರ ವಿರುದ್ಧ ₹೨೦,೦೦೦ ದಿಂದ ₹೫೦,೦೦೦ ದವರೆಗೆ ದಂಡ ಹಾಗೂ ೬ ತಿಂಗಳಿಂದ ೨ ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಶಿಕ್ಷಣ ಅರ್ಧಕ್ಕೆ ಮೊಟಕುಗೊಂಡರೆ ಬಾಲ್ಯವಿವಾಹದಂತಹ ಸಾಮಾಜಿಕ ಪಿಡುಗುಗಳಿಗೆ ಮಕ್ಕಳು ತಳ್ಳಲ್ಪಡುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಶಾಲೆ ಬಿಡದೆ ಕಡ್ಡಾಯವಾಗಿ ಶಿಕ್ಷಣ ಪೂರ್ಣಗೊಳಿಸಬೇಕು” ಎಂದು ತಿಳಿಸಿದರು.
ಕಾನೂನಾತ್ಮಕ ದತ್ತು ಸ್ವೀಕಾರ ಹಾಗೂ ಭಿಕ್ಷಾಟನೆ ತಡೆ: ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಡಿಯಲ್ಲಿ ಬರುವ ದತ್ತು ಸ್ವೀಕಾರ ಕೇಂದ್ರದ ಕುರಿತು ಮಾಹಿತಿ ನೀಡಿದ ಅವರು, “ಪರಿತ್ಯಕ್ತ, ಅನಾಥ ಹಾಗೂ ಸಂಕಷ್ಟದಲ್ಲಿರುವ ನವಜಾತ ಶಿಶುವಿನಿಂದ ೬ ವರ್ಷದೊಳಗಿನ ಮಕ್ಕಳನ್ನು ಮಕ್ಕಳಿಲ್ಲದ ದಂಪತಿಗಳು ‘CARA’ (www.cara.nic.in) ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಿ ಕಾನೂನಾತ್ಮಕವಾಗಿ ದತ್ತು ಪಡೆಯಬಹುದು. ಕಾನೂನುಬಾಹಿರವಾಗಿ ಮಕ್ಕಳನ್ನು ಸಾಕುವುದು ಅಥವಾ ಹಣ ನೀಡಿ ಕೊಂಡುಕೊಂಡರೆ ₹೧ ಲಕ್ಷ ದಂಡ ಮತ್ತು ೫ ವರ್ಷ ಜೈಲು ಶಿಕ್ಷೆಯಾಗಲಿದೆ” ಎಂದು ಎಚ್ಚರಿಸಿದರು.
ಮುಂದುವರಿದು, “ಮಕ್ಕಳಿಗೆ ಭಿಕ್ಷೆ ನೀಡುವುದು ಸಾಮಾಜಿಕ ಅಪರಾಧ. ಭಿಕ್ಷಾಟನೆಯಿಂದ ಮಕ್ಕಳು ಸೋಮಾರಿಗಳಾಗಿ ಶಿಕ್ಷಣದಿಂದ ದೂರ ಉಳಿಯುತ್ತಾರೆ. ಮಕ್ಕಳೇ ದೇಶದ ಆಸ್ತಿಯಾಗಿದ್ದು, ಅವರ ಭವಿಷ್ಯ ರೂಪಿಸುವುದು ಪ್ರತಿಯೊಬ್ಬರ ಹೊಣೆ” ಎಂದರು. ಸಾಂಕಷ್ಟದಲ್ಲಿರುವ, ಬಾಲಕಾರ್ಮಿಕ, ಬಾಲ್ಯವಿವಾಹ, ಲೈಂಗಿಕ ದೌರ್ಜನ್ಯ ಅಥವಾ ಶಿಕ್ಷಣದಿಂದ ವಂಚಿತರಾದ ಮಕ್ಕಳು ಕಂಡುಬಂದರೆ ತಕ್ಷಣವೇ ೨೪/೭ ಉಚಿತ ಸಹಾಯವಾಣಿ 1098 ಅಥವಾ 112 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಮನವಿ ಮಾಡಿದರು. ಇದೇ ವೇಳೆ ಬಾಲ್ಯವಿವಾಹ ನಿಷೇಧ ಕಾಯ್ದೆ-೨೦೦೬, ಪೋಕ್ಸೋ ಕಾಯ್ದೆ-೨೦೧೨ ಹಾಗೂ ಪೋಷಕತ್ವ ಯೋಜನೆಗಳ ಕುರಿತು ಜಾಗೃತಿ ಮೂಡಿಸಲಾಯಿತು.
ಶಾಲೆಯ ಮುಖ್ಯಗುರುಗಳಾದ ಮಹೇಶ್‌ಕುಮಾರ್ ಮಾತನಾಡಿ, “ಇಂತಹ ಅರಿವು ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಲ್ಲಿ ಕಾನೂನಿನ ಅರಿವು ಮೂಡಲು ಹಾಗೂ ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ತಡೆಯಲು ನೆರವಾಗುತ್ತದೆ” ಎಂದು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಸಾಂಸ್ಥಿಕ ರಕ್ಷಣಾಧಿಕಾರಿ ಜಯಶ್ರೀ ಗಾಂಜಿ, ‘ವಿಶ್ವಗಂಗಾ’ ಸರ್ಕಾರೇತರ ಸಂಸ್ಥೆಯ ಶರಣಗೌಡ ಬಿರಾದಾರ, ಸಹ ಶಿಕ್ಷಕರಾದ ಶಿವಮ್ಮ, ಅನಿಲ್ ಕುಮಾರ್, ಸುರೇಶ್ ಕುಮಾರ್, ನಂದಿನಿ ಸೇರಿದಂತೆ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.











Leave a Reply