
ಯಾದಗಿರಿ: ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯದಿಂದ ಯಾರೊಬ್ಬರೂ ವಂಚಿತರಾಗದAತೆ ನೋಡಿಕೊಳ್ಳುವ ಉದ್ದೇಶದಿಂದ ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ ಮಟ್ಟದಲ್ಲಿ ಗ್ಯಾರಂಟಿ ಸಮಿತಿಗಳನ್ನು ರಚಿಸಲು ಸರ್ಕಾರ ಆದೇಶಿಸಿದೆ ಎಂದು ಜಿಲ್ಲಾ ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶ್ರೇಣಿಕುಮಾರ ದೋಖಾ ಅವರು ತಿಳಿಸಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಮೇಲ್ವಿಚಾರಣೆಗಾಗಿ ಈಗಾಗಲೇ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಇದೀಗ ಯೋಜನೆಗಳ ಪ್ರಯೋಜನವನ್ನು ಸ್ಥಳೀಯ ಮಟ್ಟದಲ್ಲೇ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಉದ್ದೇಶದಿಂದ ಗ್ರಾಮ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದಲ್ಲೂ ಸಮಿತಿಗಳನ್ನು ರಚಿಸಲು ಸರ್ಕಾರ ಮುಂದಾಗಿದೆ ಎಂದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ರಾಜ್ಯಮಟ್ಟದ ಅಧ್ಯಕ್ಷರಾದ ಹೆಚ್.ಎಂ ರೇವಣ್ಣ ಅವರು ಪಂಚಾಯಿತಿ ಮಟ್ಟದಲ್ಲಿ ಸಮಿತಿಗಳನ್ನು ರಚಿಸುವ ಕುರಿತು ಸಲಹೆ ನೀಡಿದ್ದಾರೆ. ಪ್ರತಿ ಗ್ರಾಮ ಪಂಚಾಯಿತಿಗೆ ಆರು ಸದಸ್ಯರ ಸಮಿತಿ ರಚಿಸಲಾಗುವುದು. ಇದರಲ್ಲಿ ಎಸ್ಸಿ/ಎಸ್ಟಿ, ಅಲ್ಪಸಂಖ್ಯಾತರು, ಮಹಿಳೆಯರು, ಇತರೆ ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವರ್ಗಕ್ಕೆ ಪ್ರಾತಿನಿಧ್ಯ ನೀಡಲಾಗುತ್ತದೆ ಎಂದು ಹೇಳಿದರು.
ಶಕ್ತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹಜ್ಯೋತಿ ಹಾಗೂ ಯುವನಿಧಿ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯಗಳು ಅರ್ಹರಿಗೆ ತಲುಪಿದೆಯೇ ಎಂಬುದನ್ನು ಸ್ಥಳೀಯ ಮಟ್ಟದಲ್ಲಿ ಪರಿಶೀಲಿಸಲು ಸಮಿತಿಗಳು ನೆರವಾಗಲಿವೆ. ಯೋಜನೆಗಳಿಂದ ವಂಚಿತರಾಗಿರುವ ಫಲಾನುಭವಿಗಳನ್ನು ಗುರುತಿಸಿ, ಅವರಿಗೆ ಸೌಲಭ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಸಮಿತಿ ಸದಸ್ಯರು ಕಾರ್ಯನಿರ್ವಹಿಸಲಿದ್ದಾರೆ ಎಂದರು.
ನಗರ ಪ್ರದೇಶಕ್ಕೂ ಸಮಿತಿ
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ ಹಾಗೂ ವಾರ್ಡ್ಗಳ ಸಂಖ್ಯೆಗೆ ಅನುಗುಣವಾಗಿ ಸಮಿತಿಗಳ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ. ಪಟ್ಟಣ ಪಂಚಾಯಿತಿಯಲ್ಲಿ ಎಂಟು ವಾರ್ಡ್ಗಳಿಗೆ ಒಂದು ಸಮಿತಿ, ಪುರಸಭೆಯಲ್ಲಿ ಆರು ವಾರ್ಡ್ಗಳಿಗೆ ಒಂದು, ಗ್ರೇಡ್-2 ನಗರಸಭೆಯಲ್ಲಿ ನಾಲ್ಕು ವಾರ್ಡ್ಗಳಿಗೆ ಒಂದು ಹಾಗೂ ಗ್ರೇಡ್-1 ನಗರಸಭೆಯಲ್ಲಿ ಎರಡು ವಾರ್ಡ್ಗಳಿಗೆ ಒಂದು ಸಮಿತಿ ರಚಿಸಲಾಗುತ್ತದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ವಾರ್ಡ್ಗೆ ಒಂದು ಸಮಿತಿ ಇರಲಿದೆ.
ಪ್ರತಿ ಸಮಿತಿಯಲ್ಲೂ ಆರು ಸದಸ್ಯರಿದ್ದು, ಎಸ್ಸಿ/ಎಸ್ಟಿ, ಅಲ್ಪಸಂಖ್ಯಾತರು, ಇಬ್ಬರು ಮಹಿಳೆಯರು, ಇತರೆ ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವರ್ಗಕ್ಕೆ ಪ್ರಾತಿನಿಧ್ಯ ಕಲ್ಪಿಸಲಾಗಿದೆ. ಅಲ್ಪಸಂಖ್ಯಾತರ ಪ್ರಾತಿನಿಧ್ಯ ಲಭ್ಯವಿಲ್ಲದಿದ್ದಲ್ಲಿ ಸಾಮಾನ್ಯ ವರ್ಗದ ಸದಸ್ಯರನ್ನು ನೇಮಿಸಲು ಅವಕಾಶ ನೀಡಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರಿಗೆ ನೇಮಕಾಧಿಕಾರ
ಗ್ರಾಮ ಪಂಚಾಯಿತಿ ಹಾಗೂ ವಾರ್ಡ್ ಮಟ್ಟದ ಗ್ಯಾರಂಟಿ ಸಮಿತಿಗಳ ಸದಸ್ಯರನ್ನು ನೇಮಿಸುವ ಅಧಿಕಾರವನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀಡಲಾಗಿದೆ. ಸಮಿತಿಗಳು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಡಿಯಲ್ಲಿ ಕಾರ್ಯನಿರ್ವಹಿಸಲಿವೆ.
8 ದಿನದಲ್ಲಿ ಪ್ರಕ್ರಿಯೆ ಪೂರ್ಣ
ಪಂಚಾಯಿತಿ ಮಟ್ಟದ ಸಮಿತಿಗಳ ರಚನೆ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು. ಎಂಟು ದಿನಗಳೊಳಗೆ ಸದಸ್ಯರ ವಿವರಗಳನ್ನು ಸಂಗ್ರಹಿಸಿ ರಾಜ್ಯಮಟ್ಟಕ್ಕೆ ಕಳುಹಿಸಲಾಗುವುದು. ಬಳಿಕ ಸಮಿತಿಗಳನ್ನು ಕಾರ್ಯರೂಪಕ್ಕೆ ತಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ವೇಗ ನೀಡಲಾಗುವುದು ಎಂದು ಶ್ರೇಣಿಕುಮಾರ ದೋಖಾ ತಿಳಿಸಿದರು.
ಸ್ಥಳೀಯ ಮಟ್ಟದಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಸರ್ಕಾರದ ಯೋಜನೆಗಳ ಸೌಲಭ್ಯ ನಿಜವಾದ ಫಲಾನುಭವಿಗಳಿಗೆ ತಲುಪಿಸುವುದೇ ಸಮಿತಿಗಳ ಪ್ರಮುಖ ಉದ್ದೇಶವಾಗಿದೆ. ಈ ಮೂಲಕ ಗ್ಯಾರಂಟಿ ಯೋಜನೆಗಳಿಂದ ಯಾರೂ ವಂಚಿತರಾಗದAತೆ ವ್ಯವಸ್ಥೆ ರೂಪಿಸಲಾಗುವುದು ಎಂದು ಅವರು ಹೇಳಿದರು.
ಈ ವೇಳೆ ಸಂಜೀವ್ ಕವಲಿ, ಹೊನ್ನೇಶ್ ದೊಡ್ಡಮನಿ ಸೇರಿದಂತೆ ಇತರರು ಇದ್ದರು.











Leave a Reply