ರೈತರಿಗೆ ರಸಗೊಬ್ಬರ ಕೊರತೆ ಆಗದಿರಲಿ: ರಾಚನಗೌಡ ಮುದ್ನಾಳ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಭರದಿಂದ ಸಾಗಿದ್ದು, ಈ ಸಂದರ್ಭದಲ್ಲಿ ರೈತರಿಗೆ ಗುಣಮಟ್ಟದ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳ ಕೊರತೆಯಾಗದಂತೆ ಕೃಷಿ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡ ರಾಚನಗೌಡ ಮುದ್ನಾಳ ಆಗ್ರಹಿಸಿದ್ದಾರೆ.

ಮಂಗಳವಾರ ಯಾದಗಿರಿ ಮತಕ್ಷೇತ್ರದ ವಿವಿಧ ಗ್ರಾಮಗಳ ರೈತರ ನಿಯೋಗದೊಂದಿಗೆ ತಮ್ಮ ಸ್ವಗೃಹದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ರತೇಂದ್ರನಾಥ ಸೂಗೂರ ಅವರನ್ನು ಭೇಟಿ ಮಾಡಿದ ಅವರು, ಕ್ಷೇತ್ರದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಗಂಟೆಗೂ ಹೆಚ್ಚು ಕಾಲ ವಿಸ್ತೃತ ಚರ್ಚೆ ನಡೆಸಿದರು.

ಈ ವೇಳೆ ಮಾತನಾಡಿದ ಮುದ್ನಾಳ, ಸದ್ಯ ರಸಗೊಬ್ಬರ ವಿತರಣೆಯಲ್ಲಿ ಗೊಂದಲ ಮತ್ತು ತಾರತಮ್ಯ ತಾಂಡವವಾಡುತ್ತಿದೆ. ಕೆಲವು ಮಾರಾಟ ಮಳಿಗೆಗಳಲ್ಲಿ 10 ಎಕರೆಗೆ ಮಾತ್ರ ರಸಗೊಬ್ಬರ ನೀಡುವುದಾಗಿ ಹೇಳಲಾಗುತ್ತಿದೆ. ಹಾಗಾದರೆ 15-20 ಎಕರೆ ಜಮೀನು ಹೊಂದಿರುವ ಸಣ್ಣ ಹಾಗೂ ಮಧ್ಯಮ ರೈತರು ಉಳಿದ ಬೆಳೆಗೆ ಗೊಬ್ಬರವನ್ನು ಎಲ್ಲಿಂದ ತರಬೇಕು? ದೊಡ್ಡ ರೈತರ ಕಥೆ ಏನು? ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ ರಸಗೊಬ್ಬರದ ದಾಸ್ತಾನು ಕೊರತೆ ಇದ್ದರೆ ಕೃಷಿ ಇಲಾಖೆಯೇ ಅಧಿಕೃತ ಪ್ರಕಟಣೆ ಹೊರಡಿಸಲಿ. ‘ಪ್ರಸ್ತುತ ಇಷ್ಟೇ ದಾಸ್ತಾನು ಲಭ್ಯವಿದೆ, ರೈತರು ಲಭ್ಯತೆ ನೋಡಿಕೊಂಡು ಬಿತ್ತನೆ ಯೋಜನೆ ರೂಪಿಸಿಕೊಳ್ಳಿ’ ಎಂದು ಮುಕ್ತವಾಗಿ ತಿಳಿಸಿದರೆ ರೈತರಿಗೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ಪ್ರತಿ ಮಳಿಗೆಯಲ್ಲೂ ರೈತರು ಗಂಟೆಗಟ್ಟಲೆ ಕಾಯುವ, ಜಗಳ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ ಬಿತ್ತನೆ ಸಮಯ ವ್ಯರ್ಥವಾಗಿ ಇಳುವರಿ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಇಲಾಖೆ ಪಾರದರ್ಶಕವಾಗಿ ವರ್ತಿಸಬೇಕು. ಸುಖಾಸುಮ್ಮನೆ ರೈತರಿಗೆ ತೊಂದರೆ ಕೊಡುವುದು ಬೇಡ ಎಂದು ಅವರು ತಾಕೀತು ಮಾಡಿದರು.

ಇದರೊಂದಿಗೆ ನಕಲಿ ಬೀಜ, ಕಳಪೆ ಕೀಟನಾಶಕ ಮಾರಾಟದ ಬಗ್ಗೆಯೂ ಕಟ್ಟುನಿಟ್ಟಿನ ನಿಗಾ ವಹಿಸಬೇಕು. ಪ್ರತಿ ಹೋಬಳಿ ಮಟ್ಟದಲ್ಲಿ ಜಾಗೃತ ದಳ ರಚಿಸಿ ದಿಢೀರ್ ತಪಾಸಣೆ ನಡೆಸಬೇಕು. ರೈತ ಸಂಪರ್ಕ ಕೇಂದ್ರಗಳಲ್ಲಿ ಸಾಕಷ್ಟು ಸಿಬ್ಬಂದಿ ನಿಯೋಜಿಸಿ ರೈತರಿಗೆ ಸಮರ್ಪಕ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.

ರೈತರ ಎಲ್ಲ ಅಹವಾಲುಗಳನ್ನು ಶಾಂತಚಿತ್ತರಾಗಿ ಆಲಿಸಿದ ಜಂಟಿ ನಿರ್ದೇಶಕ ರತೇಂದ್ರನಾಥ ಸೂಗೂರ, ಜಿಲ್ಲೆಯಲ್ಲಿ ಸದ್ಯಕ್ಕೆ ರಸಗೊಬ್ಬರದ ಕೊರತೆ ಇಲ್ಲ. ಆದರೆ ವಿತರಣೆಯಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಾಗಿವೆ. ಕೂಡಲೇ ಎಲ್ಲ ಮಾರಾಟಗಾರರ ಸಭೆ ಕರೆದು ಏಕರೂಪದ ಮಾರ್ಗಸೂಚಿ ನೀಡಲಾಗುವುದು. ದಾಸ್ತಾನು ವಿವರವನ್ನು ಪ್ರತಿದಿನ ಪ್ರಕಟಿಸಲಾಗುವುದು. ನಕಲಿ ಬೀಜ-ಗೊಬ್ಬರ ತಡೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಭರವಸೆ ನೀಡಿದರು.

ಕೃಷಿ ಇಲಾಖೆಯ ಸುರೇಶ ಸೇರಿದಂತೆ ವಿವಿಧ ಅಧಿಕಾರಿಗಳು ಜಂಟಿ ನಿರ್ದೇಶಕರ ಜೊತೆಗಿದ್ದರು.

ಸಭೆಯಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ವೆಂಕಟರೆಡ್ಡಿ ಪಾಟೀಲ ತಂಗಡಗಿ, ಮುಖಂಡರಾದ ಶರಣಗೌಡ ಅಲ್ಲಿಪೂರ, ಮಲ್ಲಿಕಾರ್ಜುನರೆಡ್ಡಿ ವಡವಡಗಿ, ಸುರೇಶ ರಾಠೋಡ,ವಿಜಯಕುಮಾರ್ ಚಟ್ನಳ್ಳಿ ಸೇರಿದಂತೆ ಯಾದಗಿರಿ ಮತಕ್ಷೇತ್ರದ ಚಟ್ನಳ್ಳಿ,ಹೆಡಗಿಮದ್ರಾ,ನಾಯ್ಕಲ್ ಸೇರಿದಂತೆ ವಿವಿಧ ಗ್ರಾಮಗಳ ರೈತ ಮುಖಂಡರು ಹಾಗೂ ಕೃಷಿಕ ಸಮಾಜದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Suddi Belaku