ಸುಳ್ಳು ದೂರುಗಳಿಗೆ ಕಡಿವಾಣ – 24 ಮಂದಿಗೆ ₹1.57 ಲಕ್ಷ ವಸೂಲಾತಿ ನೋಟಿಸ್

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ: ಸುಳ್ಳು ಹಾಗೂ ದುರುದ್ದೇಶಪೂರಿತ ದೂರುಗಳನ್ನು ನೀಡಿ ಬಳಿಕ ಹಿಂಪಡೆಯುವ ಪ್ರವೃತ್ತಿಗೆ ಕಡಿವಾಣ ಹಾಕಲು ಜಿಲ್ಲಾ ಪಂಚಾಯತ್ ಕಠಿಣ ಕ್ರಮ ಕೈಗೊಂಡಿದ್ದು, 24 ದೂರುದಾರರಿಗೆ ಒಟ್ಟು ₹1,57,475 ವಸೂಲಾತಿ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ ತಿಳಿಸಿದ್ದಾರೆ.

ಸರ್ಕಾರದ 05.03.2021ರ ಸುತ್ತೋಲೆಯ ಅನ್ವಯ, ಮೊದಲು ದೂರು ಸಲ್ಲಿಸಿ ನಂತರ ಹಿಂಪಡೆದ ಹಾಗೂ ಸಾಕ್ಷ್ಯಾಧಾರವಿಲ್ಲದೆ ಸುಳ್ಳು ದೂರು ನೀಡಿದವರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ನೋಟಿಸ್ ಪಡೆದವರು ಸಮಾಧಾನಕರ ಉತ್ತರ ನೀಡದಿದ್ದಲ್ಲಿ, ಅವರನ್ನು ಕಪ್ಪುಪಟ್ಟಿಗೆ ಸೇರಿಸಿ ಮುಂದೆ ಸಲ್ಲಿಸುವ ಯಾವುದೇ ದೂರುಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಎಚ್ಚರಿಸಲಾಗಿದೆ.

ಜಿಲ್ಲಾ ಪಂಚಾಯತ್‌ಗೆ ವರ್ಷಕ್ಕೆ ಸರಾಸರಿ 3,000 ದೂರುಗಳು ಬರುತ್ತಿದ್ದು, ಅವುಗಳ ತನಿಖೆಗೆ ಸಾಕಷ್ಟು ಸರ್ಕಾರಿ ವೆಚ್ಚ ಹಾಗೂ ಸಮಯ ವ್ಯಯವಾಗುತ್ತದೆ. ಆದರೆ ಕೆಲವರು ಕಾನೂನು ರಕ್ಷಣೆಯನ್ನು ದುರ್ಬಳಕೆ ಮಾಡಿಕೊಂಡು ಅಧಿಕಾರಿಗಳ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಸುಳ್ಳು ದೂರುಗಳನ್ನು ನೀಡುತ್ತಿರುವುದು ಕಂಡುಬಂದಿದೆ ಎಂದು ಸಿಇಒ ತಿಳಿಸಿದ್ದಾರೆ.

ಪ್ರತಿ ದೂರು ತನಿಖೆಗೆ ರೂ.5,000ರಿಂದ ರೂ.20,000ವರೆಗೆ ವೆಚ್ಚವಾಗುತ್ತಿದ್ದು, ನಂತರ ದೂರು ಹಿಂಪಡೆಯುವ ಮೂಲಕ ಈ ಶ್ರಮ ವ್ಯರ್ಥವಾಗುತ್ತದೆ. ಇದರಿಂದ ನೈಜ ದೂರುಗಳಿಗೆ ನ್ಯಾಯ ದೊರಕುವ ಪ್ರಕ್ರಿಯೆ ವಿಳಂಬವಾಗುವುದರ ಜೊತೆಗೆ ಅಭಿವೃದ್ಧಿ ಕಾಮಗಾರಿಗಳಿಗೂ ಅಡ್ಡಿಯಾಗುತ್ತಿದೆ ಎಂದು ಅವರು ಹೇಳಿದರು.

ಭಾರತೀಯ ನ್ಯಾಯ ಸಂಹಿತೆ (BNS) 2023ರ ಪ್ರಕಾರ, ಸುಳ್ಳು ಮಾಹಿತಿ ನೀಡಿದರೆ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸುವ ಅವಕಾಶವಿದೆ. ಅಧಿಕಾರಿಗಳ ಮಾನಹಾನಿ, ಕಚೇರಿ ಕಾರ್ಯ ವಿಳಂಬ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ಉಂಟಾಗುತ್ತಿರುವುದರಿಂದ ಇಂತಹ ಕ್ರಮ ಅನಿವಾರ್ಯವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಇನ್ನೂ ಮುಂದೆ ದೂರು ಸಲ್ಲಿಸುವವರು ಸರಿಯಾದ ದಾಖಲೆಗಳೊಂದಿಗೆ ಮಾತ್ರ ಅರ್ಜಿ ಸಲ್ಲಿಸಬೇಕು. ನೈಜ ಸಮಸ್ಯೆಗಳಿರುವ ಪ್ರತಿಯೊಬ್ಬ ಪ್ರಜೆಗೂ ಜಿಲ್ಲಾ ಪಂಚಾಯತ್ ಸ್ಪಂದಿಸಲು ಸದಾ ಸಿದ್ಧವಿದೆ ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳು, ಪದಾಧಿಕಾರಿಗಳು ಹಾಗೂ ಸಾರ್ವಜನಿಕರಿಂದ ಬಂದಿದ್ದ ದೂರುಗಳ ಕುರಿತು ತನಿಖೆ ನಡೆಸಿ, ಸುಳ್ಳು ಎಂದು ಕಂಡುಬಂದ ಪ್ರಕರಣಗಳಲ್ಲಿ ಸಂಬಂಧಪಟ್ಟವರಿಗೆ ವಸೂಲಾತಿ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

Leave a Reply

Your email address will not be published. Required fields are marked *

Suddi Belaku