
ಆಸ್ತಿ ತೆರಿಗೆ ರಿಯಾಯಿತಿ ಕೇವಲ ಕಾಗದದಲ್ಲೇ – ದಿನವೂ ಕಚೇರಿ ಸುತ್ತ ಅಲೆದಾಡುವ ಮಾಜಿ ಯೋಧ
ಸುದ್ದಿ ಬೆಳಕು ವಾರ್ತೆ
ಸೈದಾಪುರ : ದೇಶದ ಗಡಿ ಕಾಯ್ದು ಜೀವ ಪಣಕ್ಕಿಟ್ಟ ಮಾಜಿ ಸೈನಿಕನಿಗೆ, ತನ್ನ ಊರಿನಲ್ಲೇ ಗೌರವ ಸಿಗದ ದುಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರವು ಸ್ಪಷ್ಟ ಆದೇಶದ ಮೂಲಕ ಮಾಜಿ ಸೈನಿಕರಿಗೆ ಆಸ್ತಿ ತೆರಿಗೆಯಲ್ಲಿ 50% ರಿಯಾಯಿತಿ ನೀಡಬೇಕೆಂದು ಘೋಷಿಸಿದರೂ, ಗ್ರಾಮ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆ ಸೌಲಭ್ಯ ನೆಲಮಟ್ಟದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ.
ಸೈದಾಪುರ ಪಟ್ಟಣದ ರಮೇಶ ಎಸ್. ಎಂಬ ಮಾಜಿ ಸೈನಿಕನು ತನ್ನ ಸ್ವಂತ ಆಸ್ತಿಯ ಮೇಲಿನ ರಿಯಾಯಿತಿ ಪಡೆಯಲು ಹಲವು ಬಾರಿ ಗ್ರಾಮ ಪಂಚಾಯತಿ ಕಚೇರಿಗೆ ಭೇಟಿ ನೀಡಿದ್ದರೂ, ಅಧಿಕಾರಿಗಳು ಸ್ಪಂದಿಸದೇ ಅವನನ್ನು ದಿನನಿತ್ಯ ಅಲೆದಾಡಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಸರಕಾರಿ ಆದೇಶವನ್ನು ಉಲ್ಲಂಘಿಸುವಷ್ಟರ ಮಟ್ಟಿಗೆ ನಿರ್ಲಕ್ಷ್ಯ ತೋರಿರುವುದು ಪ್ರಶ್ನಾರ್ಹವಾಗಿದೆ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ತಕ್ಷಣ ಹಸ್ತಕ್ಷೇಪ ಮಾಡಿ, ಮಾಜಿ ಸೈನಿಕನಿಗೆ ಸಲ್ಲುವ 50% ಆಸ್ತಿ ತೆರಿಗೆ ರಿಯಾಯಿತಿಯನ್ನು ನೀಡಬೇಕು. ಜೊತೆಗೆ, ಕರ್ತವ್ಯ ಲೋಪ ತೋರಿದ ಗ್ರಾಮ ಪಂಚಾಯತಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ದೇಶ ಸೇವೆ ಮಾಡಿದ ವ್ಯಕ್ತಿಗೆ ಇಂತಹ ಅವಮಾನಕರ ವರ್ತನೆ ತೋರುವುದು ಸಮಾಜಕ್ಕೆ ನಾಚಿಕೆಯ ಸಂಗತಿ. ಸರ್ಕಾರ ನೀಡಿದ ಸೌಲಭ್ಯವನ್ನು ಕೂಡ ಪಡೆಯಲು ಕಚೇರಿಗಳ ಸುತ್ತ ಅಲೆದಾಡಬೇಕಾದರೆ, ಸಾಮಾನ್ಯ ಜನರ ಸ್ಥಿತಿ ಹೇಗಿರಬಹುದು. ಈ ಘಟನೆ ಗ್ರಾಮ ಪಂಚಾಯತಿ ಆಡಳಿತದ ನಿರ್ಲಕ್ಷ್ಯ ಮತ್ತು ಅಸಂವೇದನಾಶೀಲತೆಯನ್ನೇ ನೋಡಬಹುದಾಗಿದೆ.
ಮಾಜಿ ಸೈನಿಕರಂತಹ ಗೌರವಾನ್ವಿತ ವ್ಯಕ್ತಿಗಳ ಹಕ್ಕುಗಳನ್ನು ಕಾಪಾಡುವಲ್ಲಿ ವಿಫಲವಾಗಿರುವುದು ಸರ್ಕಾರದ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕಳೆದು ಹೋಗುತ್ತಿದೆ.
• ರಾಘವೇಂದ್ರ ಕಲಾಲ್, ಸ್ಥಳೀಯ ನಿವಾಸಿ ಸೈದಾಪುರನಮ್ಮ ರಾಜ್ಯ ಸರ್ಕಾರವು ಸೈನಿಕ, ಮಾಜಿ ಸೈನಿಕರ ಆಸ್ತಿ ತೆರಿಗೆಯಲ್ಲಿ ಶೇಕಡ 50ರಷ್ಟು ರಿಯಾತಿ ನೀಡಿದೆ. ಅದರಂತೆ ನಾವು ಕಳೆದ 6 ತಿಂಗಳುಗಳಿಂದ ಪಂಚಾಯತಿಯ ಅಧಿಕಾರಿಗಳಿಗೆ ಬೇಟಿಯಾದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ನಮ್ಮ ಹಕ್ಕುಗಳ ಮತ್ತು ಯೋಜನೆಗಳ ಪಡೆದುಕೊಳ್ಳಲು ಅರಸಹಾಸ ಪಡೆಯುವಂತಾಗಿದೆ.
ಈ ಬಗ್ಗೆ ಇಲಾಖೆಯ ಮೇಲಾಧಿಕಾರಿಗಳು ಗಮನಹರಿಸಿ ಸಮಸ್ಯೆಯನ್ನು ಪರಿಹರಿಸಿಕೊಡಬೇಕು.
• ರಮೇಶ ಎಸ್. ಮಾಜಿ ಸೈನಿಕ










Leave a Reply