ಸುದ್ದಿ ಬೆಳಕು ವಾರ್ತೆ
ನವದೆಹಲಿ: ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿ, ಬೆಂಗಳೂರಿನ ಅಭಿವೃದ್ಧಿ ಹಾಗೂ ಸಂಚಾರ ವ್ಯವಸ್ಥೆಗೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚಿಸಿದರು.
ಸಭೆಯಲ್ಲಿ ರಕ್ಷಣಾ ಇಲಾಖೆಗೆ ಸೇರಿದ ಭೂಮಿಯನ್ನು ಬೆಂಗಳೂರಿನ ಸಾರ್ವಜನಿಕ ಬಳಕೆಗೆ ತರಲು ಹಾಗೂ ನಗರದ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸಲು ಸಂಬಂಧಿಸಿದ ಹಲವು ಪ್ರಸ್ತಾವನೆಗಳನ್ನು ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸಚಿವರ ಮುಂದಿಟ್ಟರು.
ಚರ್ಚೆಯಾದ ಪ್ರಮುಖ ವಿಷಯಗಳು
ಇಬ್ಲೂರು ಫೈರಿಂಗ್ ರೇಂಜ್ ಸಮೀಪದ ಸುಮಾರು 730 ಎಕರೆ ಬಳಕೆಯಾಗದ ರಕ್ಷಣಾ ಭೂಮಿಯನ್ನು ಬೆಂಗಳೂರಿಗೆ ಶಾಶ್ವತ ಸಾರ್ವಜನಿಕ ಉದ್ಯಾನ ಹಾಗೂ ಹಸಿರು ವಲಯವಾಗಿ ಅಭಿವೃದ್ಧಿಪಡಿಸುವ ಪ್ರಸ್ತಾವನೆ.
ರಕ್ಷಣಾ ಇಲಾಖೆಯ ಸುಮಾರು 43.838 ಎಕರೆ ಭೂಮಿಯಲ್ಲಿರುವ 10 ಅಧಿಸೂಚಿತ ಕೊಳೆಗೇರಿಗಳಿಗೆ ಪ್ರಾಯೋಗಿಕ ಪರಿಹಾರ ಕಂಡುಕೊಳ್ಳುವುದು ಹಾಗೂ ದುರಸ್ತಿ ಮತ್ತು ಪುನರ್‌ಅಭಿವೃದ್ಧಿಗೆ ತುರ್ತು ಕಾರ್ಯಾನುಮತಿ ನೀಡುವಂತೆ ಮನವಿ.
ಎಚ್‌ಎಎಲ್ ವಿಮಾನ ನಿಲ್ದಾಣ ಹಾಗೂ ಯಲಹಂಕ ವಾಯುಪಡೆ ನಿಲ್ದಾಣದ ಸುತ್ತಲಿನ ಕಟ್ಟಡ ಮತ್ತು ಎತ್ತರ ನಿರ್ಬಂಧಗಳನ್ನು ಪರಿಶೀಲಿಸಿ ಸರಳೀಕರಿಸುವುದು ಹಾಗೂ 20 ಕಿ.ಮೀ. ವ್ಯಾಪ್ತಿಯೊಳಗಿನ ಕಡ್ಡಾಯ ಎನ್‌ಒಸಿ ನಿಯಮವನ್ನು ಮರುಪರಿಶೀಲಿಸುವ ಕುರಿತು ಚರ್ಚೆ.
ಎಜಿಪುರ ಜಂಕ್ಷನ್ ಮೂಲಕ ಲೋವರ್ ಅಗರಂ ರಸ್ತೆ–ಸರ್ಜಾಪುರ ರಸ್ತೆಯನ್ನು ಸಂಪರ್ಕಿಸುವ 24 ಮೀಟರ್ ರಸ್ತೆಗಾಗಿ 13.709 ಎಕರೆ ರಕ್ಷಣಾ ಭೂಮಿಯ ವರ್ಗಾವಣೆ ಹಾಗೂ ಕಾಮಗಾರಿಗೆ ಕಾರ್ಯಾನುಮತಿಯನ್ನು ತ್ವರಿತಗೊಳಿಸುವಂತೆ ಮನವಿ.
ಬೆಂಗಳೂರು ನಗರ ವಾಹನ ಸಂಚಾರ ಅವಳಿ ಸುರಂಗ ಯೋಜನೆಗೆ ಅಗತ್ಯವಿರುವ ರಕ್ಷಣಾ ಭೂಮಿಯ ವರ್ಗಾವಣೆ ಪ್ರಕ್ರಿಯೆ ತ್ವರಿತಗೊಳಿಸುವುದು ಹಾಗೂ ಮೆಖ್ರಿ ಸರ್ಕಲ್ ಬಳಿ ರಕ್ಷಣಾ ಪ್ರದೇಶದ ಮೂಲಕ ಹಾದುಹೋಗುವ ಭೂಗತ ಮಾರ್ಗಕ್ಕೆ ಪ್ರಸ್ತಾಪಿಸಿರುವ ಪರವಾನಗಿ ಶುಲ್ಕವನ್ನು ಕಡಿಮೆ ಮಾಡುವ ಕುರಿತು ಚರ್ಚೆ.
ಬಳ್ಳಾರಿ ರಸ್ತೆಯಿಂದ ಸರೋವರ ಲೇಔಟ್‌ಗೆ ಸಂಪರ್ಕ ಕಲ್ಪಿಸುವ 18 ಮೀಟರ್ ರಸ್ತೆಗಾಗಿ 6.837 ಎಕರೆ ರಕ್ಷಣಾ ಭೂಮಿಯ ವರ್ಗಾವಣೆಗೆ ಶೀಘ್ರ ಅನುಮತಿ ನೀಡುವಂತೆ ಮನವಿ.
ವಿಮಾನ ನಿಲ್ದಾಣದತ್ತ ತೆರಳುವ ಪ್ರಮುಖ ಮಾರ್ಗದಲ್ಲಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಮೆಖ್ರಿ ಸರ್ಕಲ್‌ನಲ್ಲಿ ರಸ್ತೆಯನ್ನು ಎರಡು ಪಥದಿಂದ ಮೂರು ಪಥಕ್ಕೆ ವಿಸ್ತರಿಸಲು 0.775 ಎಕರೆ ಸೇನಾ ಭೂಮಿಯ ವರ್ಗಾವಣೆ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಕೋರಿದರು.













Leave a Reply