ಡೀಸೆಲ್ ಕೊರತೆ: ಸುರಪುರದಲ್ಲಿ ರಾತ್ರಿಯಿಡೀ ಸಾಲಿನಲ್ಲಿ ನಿಂತ ಜನರು

Posted by

ಸುದ್ದಿ ಬೆಳಕು ವಾರ್ತೆ

ಸುರಪುರ: ನಗರದಲ್ಲಿ ಡೀಸೆಲ್ ಕೊರತೆ ತೀವ್ರಗೊಂಡ ಹಿನ್ನೆಲೆಯಲ್ಲಿ ಪೆಟ್ರೋಲ್ ಬಂಕ್‌ಗಳ ಮುಂದೆ ವಾಹನಗಳ ದೀರ್ಘ ಸಾಲು ಕಾಣಿಸಿಕೊಂಡು, ಪ್ರಮುಖ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ನಗರಸಭೆ ಸಮೀಪದ ಪೆಟ್ರೋಲ್ ಬಂಕ್ ಬಳಿ ಸೋಮವಾರ ತಡರಾತ್ರಿ ಕಂಡುಬಂತು.
ಡೀಸೆಲ್ ಪಡೆಯಲು ಟ್ರ್ಯಾಕ್ಟರ್, ಲಾರಿ, ಬೈಕ್ ಸೇರಿದಂತೆ ನೂರಾರು ವಾಹನಗಳು ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಸಾಲುಗಟ್ಟಿ ನಿಂತಿದ್ದವು. ವಾಹನಗಳನ್ನು ರಸ್ತೆ ಮಧ್ಯೆಯೇ ಅಡ್ಡಲಾಗಿ ನಿಲ್ಲಿಸಿದ್ದರಿಂದ ಬಸ್ ನಿಲ್ದಾಣದಿಂದ ವಿವಿಧ ಕಡೆಗಳಿಗೆ ತೆರಳುವ ವಾಹನಗಳಿಗೆ ರಸ್ತೆ ಇಲ್ಲದಂತಾಯಿತು. “ಮೊದಲು ನಮಗೆ ಡೀಸೆಲ್” ಎಂಬ ಆತುರದಲ್ಲಿ ವಾಹನ ಮಾಲೀಕರು ಮುಗಿಬಿದ್ದ ದೃಶ್ಯ ಕಂಡುಬಂತು.
ತಡರಾತ್ರಿ ವೇಳೆಯಲ್ಲಿಯೂ ಡೀಸೆಲ್ ಸಿಗುವ ನಿರೀಕ್ಷೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಭಾರಿ ಟ್ರಾಫಿಕ್ ಜಾಮ್ ಉಂಟಾಯಿತು. ಇದರಿಂದ ಬಸ್ ಸಂಚಾರಕ್ಕೂ ತೀವ್ರ ತೊಂದರೆ ಉಂಟಾಗಿ, ಬಸ್ ನಿಲ್ದಾಣದಿಂದ ಹೊರಡುವ ಹಾಗೂ ಆಗಮಿಸುವ ಬಸ್‌ಗಳು ಮಧ್ಯದಲ್ಲೇ ಸಿಲುಕಿಕೊಂಡವು. ದೂರದ ಊರುಗಳಿಗೆ ಪ್ರಯಾಣಿಸುವ ಸಾರ್ವಜನಿಕರು ಪರದಾಡುವಂತಾಯಿತು.

 

ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಅನೇಕರು ಪ್ಲಾಸ್ಟಿಕ್ ಕ್ಯಾನ್‌ಗಳನ್ನು ಹಿಡಿದು ಸರತಿ ಸಾಲಿನಲ್ಲಿ ನಿಂತು ಡೀಸೆಲ್‌ಗಾಗಿ ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. “ಸಾಯಂಕಾಲದಿಂದಲೇ ಸಾಲಿನಲ್ಲಿ ನಿಂತಿದ್ದೇವೆ. ಊಟ-ನೀರು ಮಾಡದೇ ಕಾಯುತ್ತಿದ್ದರೂ ಇನ್ನೂ ಡೀಸೆಲ್ ಸಿಗುತ್ತಿಲ್ಲ” ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.


“ಡೀಸೆಲ್ ಸಿಗದಿದ್ದರೆ ಕೃಷಿ ಕೆಲಸಗಳು ಸಂಪೂರ್ಣ ಸ್ಥಗಿತಗೊಳ್ಳಲಿವೆ. ಬೆಳಗಿನವರೆಗೂ ಇಲ್ಲಿಯೇ ಕಾಯಬೇಕಾದ ಪರಿಸ್ಥಿತಿ ಬಂದಿದೆ” ಎಂದು ರೈತರು ಹಾಗೂ ವಾಹನ ಚಾಲಕರು ಬೇಸರ ವ್ಯಕ್ತಪಡಿಸಿದರು.
ಸ್ಥಳದಲ್ಲಿ ಟ್ರಾಫಿಕ್ ಜಾಮ್ ತೀವ್ರವಾಗುತ್ತಿದ್ದಂತೆ ಪಿಎಸ್ಐ ಕೃಷ್ಣ ಸುಬೇದಾರ ಹಾಗೂ ಪೊಲೀಸ್ ಸಿಬ್ಬಂದಿ ಆಗಮಿಸಿ ವಾಹನ ಸಂಚಾರ ಸುಗಮಗೊಳಿಸಲು ಹರಸಾಹಸ ಪಟ್ಟರು. ಪೆಟ್ರೋಲ್ ಬಂಕ್‌ಗಳಲ್ಲಿ ಹೆಚ್ಚಿದ ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಸಾಕಷ್ಟು ಪರದಾಟ ನಡೆಸಿದರು.

“ಸಾರ್ವಜನಿಕರು ಡೀಸೆಲ್ ಪಡೆಯಲು ಬಂಕ್ ಒಳಭಾಗದಲ್ಲೇ ಸರತಿ ಸಾಲಿನಲ್ಲಿ ನಿಲ್ಲಬೇಕು. ರಸ್ತೆ ಮಧ್ಯೆ ವಾಹನಗಳನ್ನು ಅಡ್ಡವಾಗಿ ನಿಲ್ಲಿಸುವುದರಿಂದ ಇತರೆ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕು.”

— ಉಮೇಶ ಎಂ ನಾಯಕ

Leave a Reply

Your email address will not be published. Required fields are marked *

Suddi Belaku