ರಾಸಾಯನಿಕ ಗೊಬ್ಬರಗಳ ಅತಿಬಳಕೆ ಆರೋಗ್ಯಕ್ಕೆ ಮಾರಕ: ಡಾ. ಎ.ಜಿ. ಶ್ರೀನಿವಾಸ್

Posted by

ಸುದ್ದಿ ಬೆಳಕು ವಾರ್ತೆ 

ಗುರುಮಠಕಲ್: ಪ್ರಕೃತಿದತ್ತ ಅತ್ಯಂತ ಉತ್ತಮ ಫಲವತ್ತತೆಯ ಭೂಮಿಯನ್ನು ಹೊಂದಿದ ಗುರುಮಠಕಲ್ ಕ್ಷೇತ್ರದ ಜಮೀನು ಮತ್ತು ಹೊಲಗಳಿಗೆ ವಿಷಪೂರಿತ ರಾಸಾಯನಿಕ ಮತ್ತು ಕೀಟನಾಶಕಗಳನ್ನು ಸೇರಿಸದಂತೆ ಜನರಲ್ಲಿ ಜಾಗೃತಿ ಮೂಡಿಸುವಂತೆ, ರಾಯಚೂರ ಕೃಷಿ ವಿಶ್ವವಿದ್ಯಾಲಯದ ಕೀಟಶಾಸ್ತ್ರದ ಪ್ರಧ್ಯಾಪಕರು, ಸಂಪನ್ಮೂಲ ವ್ಯಕ್ತಿ ,ಡೀಮ್ ಡಾ.ಎ.ಜಿ.ಶ್ರೀನಿವಾಸ್ ಅವರು  ಕರೆ ನೀಡಿದರು.
ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ವಿಶ್ವವಿದ್ಯಾಲಯ ರಾಯಚೂರ ಮತ್ತು ಕೃಷಿ ಇಲಾಖೆ ಯಾದಗಿರಿ ಇವರ ಸಂಯುಕ್ತಾಶ್ರಯದಲ್ಲಿ ಕೃಷಿಯಲ್ಲಿ ರಾಸಾಯನಿಕಗಳ ಸಮರ್ಪಕ ಬಳಕೆ  ಬಗ್ಗೆ ತಾಲೂಕಿನ ರಸಗೊಬ್ಬರ ಮಾರಾಟಗಾರರು ಮತ್ತು ರೈತರೊಂದಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ನಡೆಯಿತು.
ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರ ಘನ ಉಪಸ್ಥಿತಿಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗಡಿನಾಡಿನ ರೈತರ ಭೂಮಿಗಳು  ಮಳೆ ಆಧಾರಿತ ಜಮೀನುಗಳಾಗಿದ್ದು ಬೆಳೆಗಳ ಹೆಚ್ಚುವರಿ ಇಳುವರಿಗಾಗಿ ರೈತರು ರಸಗೊಬ್ಬರ ಮತ್ತು ರಸಾಯನಗಳ ಮೊರೆಹೋಗುತ್ತಿದ್ದಾರೆ.
ಅಗತ್ಯಕ್ಕಿಂತ ಹೆಚ್ಚಿನ ವಿಷರಸಾಯನಗಳು ಭೂಮಿಗೆ ಸೇರಿ ನೀರು, ಗಾಳಿ ಮತ್ತು ಆಹಾರ, ತರಕಾರಿಗಳ ಮೂಲಕ ನಮ್ಮ ದೇಹಕ್ಕೆ ಸೇರುತ್ತಿದೆ ಇದರಿಂದ ತಲೆನೋವಿನಿಂದ ಆರಂಭವಾದ ರೋಗಗಳು ಕ್ಯಾನ್ಸರ್ ಮತ್ತು ಬಂಜೆತನಕ್ಕೆ ಕಾರಣವಾಗುತ್ತಿವೆ ಕಾರಣ ರಸಗೊಬ್ಬರ ಖರೀದಿಗೆ ಬರುವ  ರೈತರಿಗೆ ರಸಗೊಬ್ಬರ ಅಪಾಯಗಳ ಬಗ್ಗೆ ತಿಳಿಸಿ ಜಮೀನು ಮತ್ತು ಬೆಳೆಗಳಿಗೆ ಅನುಕೂಲವಾಗುವಂತೆ ರಸಾಯನಗಳನ್ನು ನೀಡುವಂತೆ ತಿಳಿಸಿದರು.
ಕೀಟನಾಶಕಗಳನ್ನು ಬೆಳೆಗಳಿಗೆ ಸಿಂಪಡಿಸುವಾಗ ತೆಗೆದುಕೊಳ್ಳಬೇಕಾದ ಅಗತ್ಯಕ್ರಮಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಕೆಲ ದಶಕದ ಹಿಂದೆ ಕಾಸರಗೋಡ ಎಫೆಕ್ಟ ಎಂದೇ ಹೆಸರಾದ ಅತಿಯಾದ ಎಂಡೋಸಲ್ಫಾನ್ ಬಳಕೆಯಿಂದ ಅಲ್ಲಿನ ಜನರ ಆರೋಗ್ಯ ಇಂದಿಗೂ ದಾರುಣವಾಗಿದೆ. ಅದರಂತೆ ಈ ಭಾಗದ ಸಂಪದ್ಭರಿತ ಮಣ್ಣಿಗೆ ಅತಿಯಾದ ರಾಸಾಯನಿಕ ರಸಗೊಬ್ನರಗಳ ಬಳಕೆಯು ಮುಂದೊಂದುದಿನ ನಮ್ಮ ಆರೋಗ್ಯದ ಮೇಲೆ ಖಂಡಿತ ಪ್ರಭಾವ ಬೀರುತ್ತದ ಎಂದು ಎಚ್ಚರಿಸಿದರು.
ಸಹಾಯಕ ಕೃಷಿ ನಿರ್ದೇಶಕ ಸುರೇಶ ಅವರು ಪ್ರಸ್ತಾವಿಕ ಮಾತನಾಡಿದರು.
ಸಭೆಯಲ್ಲಿ ರೈತ ಸಂಪರ್ಕ ಕೇಂದ್ರ ಅಧಿಕಾರಿ ಮಲ್ಲಿಕಾರ್ಜುನ ವಾರದ್ ಗುರುಮಠಕಲ್ ಮತ್ತು ಸೈದಾಪೂರ ವ್ಯಾಪ್ತಿಯ ರಸಗೊಬ್ಬರ ಮಾರಾಟಗಾರರು ಅಧ್ಯಕ್ಷ ಶಿವರೆಡ್ಡಿ, ಬಸುಲಿಂಗಪ್ಪ, ಕೃಷಿಕ ಸಮಾಜ ಅಧ್ಯಕ್ಷ ಅಯೂಬ್ ಖಾನ್  ಮತ್ತು ರೈತರು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಸಿಬ್ಬಂದಿ ಇದ್ದರು.

 


ಅತಿಯಾದ ರಾಸಾಯನ ಗೊಬ್ಬರಬಳಕೆಯಿಂದ ಕ್ಯಾನ್ಸರ್ ಹೆಚ್ಚಳ: ಶಾಸಕ ಕಂದಕೂರ ಕಳವಳ.
ರಸಗೊಬ್ಬರಗಳ ಬಳಕೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಬೀರುವ ಪರಿಣಾಮಗಳನ್ನು ಅರಿಯಲು ಸ್ವತಃ ಶಾಸಕ ಶರಣಗೌಡ ಕಂದಕೂರ ಅವರು ಕಾರ್ಯಾಗಾರದಲ್ಲಿ ಮಾರಾಟಗಾರರು ಮತ್ತು ರೈತರೊಂದಿಗೆ ಡಾ.ಎ.ಜಿ.ಶ್ರೀನಿವಾಸ ಅವರ ಉಪನ್ಯಾಸವನ್ನು ಆಲಿಸಿದರು.
ಅತಿಯಾದ ಪ್ಲಾಸ್ಟಿಕ್ ಬಳಕೆ ಮತ್ತು ಬೀದಿಬದಿ ತಯಾರಿಸುವ ಆಹಾರದ ಗುಣಮಟ್ಟ, ಚಹಾದಲ್ಲಿ ಬಳಕೆಯಾಗುವ ಹಾಲು ಮತ್ತು ಚಹಾಪುಡಿಯ ಜೊತೆಗೆ  ತರಕಾರಿ, ಇತರೆ ಆಹಾರ ಉತ್ಪನ್ನಗಳ ಗುಣಮಟ್ಟವು ತೀರ ಕಳಪೆಯಾಗಿದ್ದು ಆರೋಗ್ಯ ಇಲಾಖೆಯ ವರದಿಗಳು ಅಪಾಯವನ್ನು ಸೂಚಿಸುತ್ತಿದೆ.
ಕೆಲವರ್ಷಗಳಿಂದ ಕ್ಯಾನ್ಸರ್, ಹೃದಯಸಂಬಂಧಿತ ರೋಗಗಳು, ಕಿಡ್ನಿ ರೋಗಿಗಳು ಹೆಚ್ಚುತ್ತಿದ್ದು ಪ್ರತಿದಿನ ನಾವು ತಿನ್ನುವ ಆಹಾರದ ಬಗ್ಗೆ ಎಲ್ಲರೂ ಗಮನ ಹರಿಸಬೇಕಾಗಿದೆ. ಬೆಳೆಗಳ ಇಳುವರಿಗಾಗಿ ಬಳಸುವ ರಸಗೊಬ್ಬರಗಳು ನಮ್ಮ ದೇಹಕ್ಕೆ ಸೇರಿ ಆರೋಗ್ಯವಂತ ಬದುಕಿಗೆ ತೊಡಕಾಗಿವೆ.
ಕಾರಣ ತಮ್ಮಲ್ಲಿಗೆ ಬರುವ ರೈತರಿಗೆ ರಸಗೊಬ್ಬರ ಬಳಕೆಯಿಂದ ಆಗುವ ಅಪಾಯಗಳನ್ನು ತಿಳಸಿ ಅಗತ್ಯಕ್ಕೆ ತಕ್ಕಂತೆ ಕೀಟನಾಶಕ ಮತ್ತು ರಸಗೊಬ್ಬರಗಳನ್ನು ನೀಡುವ ಮೂಲಕ ಮುಂಬರುವ ಪೀಳಿಗೆಗೆ ಆರೋಗ್ಯವಂತ ಪರಿಸರ ನೀಡುವಂತೆ ರಸಗೊಬ್ಬರ ವ್ಯಾಪಾರಿಗಳಲ್ಲಿ ಮನವಿ ಮಾಡಿದರು.

“ಅತಿಯಾದ ಪ್ಲಾಸ್ಟಿಕ್ ಬಳಕೆ, ಕಳಪೆ ಆಹಾರ ಪದಾರ್ಥಗಳು ಮತ್ತು ನಿಯಂತ್ರಣವಿಲ್ಲದ ರಸಗೊಬ್ಬರ ಬಳಕೆ ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಅಪಾಯವಾಗಿವೆ. ಕ್ಯಾನ್ಸರ್, ಹೃದಯ ಹಾಗೂ ಕಿಡ್ನಿ ರೋಗಗಳ ಹೆಚ್ಚಳ ನಮ್ಮ ಆಹಾರ ಪದ್ಧತಿ ಮತ್ತು ಉತ್ಪಾದನಾ ವಿಧಾನಗಳ ಬಗ್ಗೆ ಎಚ್ಚರಿಕೆ ನೀಡುತ್ತಿದೆ.
— ಶರಣಗೌಡ ಕಂದಕೂರ
ಗುರುಮಠಕಲ್ ಶಾಸಕ.

Leave a Reply

Your email address will not be published. Required fields are marked *

Suddi Belaku