
ಸುದ್ದಿ ಬೆಳಕು ವಾರ್ತೆ
ಯಾದಗಿರಿ, ಏಪ್ರಿಲ್ 20 : ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಗಜ್ಯೋತಿ ಶ್ರೀ ಬಸವಣ್ಣನವರ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಬಸವಣ್ಣನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಮುಖಂಡರು ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪ ಗೌಡ ವಿಭೂತಿಹಳ್ಳಿ, ಸಮಾನತೆ, ಜಾತಿ ನಿರ್ಮೂಲನೆ, ಕಾಯಕ ತತ್ವ ಹಾಗೂ ಸಮಾಜ ಸುಧಾರಣೆಗೆ ಬಸವಣ್ಣನವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು. 12ನೇ ಶತಮಾನದಲ್ಲಿಯೇ ಜಾತಿ ಭೇದ ನಿವಾರಣೆಗಾಗಿ ಬಸವಣ್ಣರು ಹೋರಾಡಿದ್ದು, ಇಂದಿಗೂ ಸಮಾಜದಲ್ಲಿ ಜಾತಿ ವ್ಯವಸ್ಥೆ ಉಳಿದಿರುವುದು ವಿಷಾದನೀಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಸಮಾಜದಲ್ಲಿ ಎಲ್ಲರೂ ಒಂದೇ ಎಂಬ ಭಾವನೆ ಬೆಳೆಯಬೇಕು. ಗಂಡು-ಹೆಣ್ಣು ತಾರತಮ್ಯವನ್ನು ತೊಡೆದು ಹಾಕಿ ಮಹಿಳೆಯರಿಗೂ ಸಮಾನ ಸ್ಥಾನಮಾನ ನೀಡಬೇಕು ಎಂಬ ಬಸವಣ್ಣನವರ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದು, ಮಹಿಳೆಯರು ಸಮಾಜದ ಮುಖ್ಯಧಾರೆಗೆ ಬರಲು ಪ್ರೇರಣೆ ನೀಡುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಯಾದಗಿರಿ ವಿಧಾನಸಭಾ ಕ್ಷೇತ್ರದ ಹಿರಿಯ ಮುಖಂಡರಾದ ರಾಚನಗೌಡ ಮುದ್ನಾಳ, ಡಾ. ಶರಣಭೂಪಾಲ್ ರೆಡ್ಡಿ ನಾಯ್ಕಲ್, ದೇವಿಂದ್ರನಾಥ್ ನಾದ್, ಭೀಮನಗೌಡ ಖ್ಯಾತನಾಳ, ರಾಜ್ಯ ಬಿಜೆಪಿ ಮಾಜಿ ಉಪಾಧ್ಯಕ್ಷೆ ನಾಗರತ್ನ ಕುಪ್ಪಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪರಶುರಾಮ ಕುರುಕುಂದ, ಜಿಲ್ಲಾ ವಕ್ತಾರ ಹಣಮಂತ ಇಟಗಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಧರ್ ಸಾಹುಕಾರ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸುನಿತಾ ಚವಾಣ್, ರಾಜ್ಯ ಕಾರ್ಯಕಾರಿಣಿ ಸದಸ್ಯೆ ವೀಣಾ ಮೋದಿ, ಜಿಲ್ಲಾ ಉಪಾಧ್ಯಕ್ಷರು ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.










Leave a Reply