ಭಾರತದ ಮೊದಲ ಕ್ವಾಂಟಮ್ ಸಿಟಿ ಹೆಸರಘಟ್ಟದಲ್ಲಿ ನಿರ್ಮಾಣ : ಡಿ ಕೆ ಶಿವಕುಮಾರ್ ಘೋಷಣೆ

Posted by

ಸುದ್ದಿ ಬೆಳಕು ವಾರ್ತೆ

ಬೆಂಗಳೂರು : “ಕರ್ನಾಟಕ ಕ್ವಾಂಟಮ್ ಮಿಷನ್ ಬೆಂಬಲದೊಂದಿಗೆ ಬೆಂಗಳೂರು ಈಗಾಗಲೇ ನವೋದ್ಯಮ ಮತ್ತು ಜಾಗತಿಕ ತಂತ್ರಜ್ಞಾನ ಕಂಪನಿಗಳ ಬೆಳವಣಿಗೆಗೆ ಪೂರಕ ಪರಿಸರ ವ್ಯವಸ್ಥೆಯನ್ನು ಹೊಂದಿದ್ದು, ಹೆಸರಘಟ್ಟದಲ್ಲಿ ಭಾರತದ ಮೊದಲ ‘ಕ್ವಾಂಟಮ್ ಸಿಟಿ’ ನಿರ್ಮಾಣ ಮಾಡಲಾಗುತ್ತಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ಬೆಂಗಳೂರಿನ ಸೈನ್ಸ್ ಗ್ಯಾಲರಿಯಲ್ಲಿ ಶುಕ್ರವಾರ ನಡೆದ ‘ಕ್ವಾಂಟಮ್’ ಪ್ರದರ್ಶನ ಉದ್ಘಾಟಿಸಿ ಶಿವಕುಮಾರ್ ಅವರು ಮಾತನಾಡಿದರು.

“ಕ್ವಾಂಟಮ್ ಸಿಟಿಯು ಸಂಶೋಧನಾ ಪ್ರಯೋಗಾಲಯಗಳ ಪರಿಸರ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸಲಿದೆ. ಈ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರಗಳು, ವಿಶ್ವವಿದ್ಯಾಲಯಗಳು, ವಿಜ್ಞಾನಿಗಳು, ಹೂಡಿಕೆದಾರರು, ನವೋದ್ಯಮ ಮತ್ತು ಸ್ಥಾಪಿತ ಉದ್ಯಮಗಳ ನಡುವಿನ ನಿರಂತರ ಸಹಕಾರ ಅಗತ್ಯ” ಎಂದು ಅಭಿಪ್ರಾಯಪಟ್ಟರು.

“ಬೆಂಗಳೂರಿನಲ್ಲಿ 1,000ಕ್ಕೂ ಹೆಚ್ಚು ಅಮೆರಿಕನ್ ಕಂಪನಿಗಳು, 80 ಸಾವಿರ ಅಮೆರಿಕನ್ ನಾಗರಿಕರು, 10 ಸಾವಿರಕ್ಕೂ ಹೆಚ್ಚು ಸ್ಟಾರ್ಟ್ಅಪ್ಗಳು ಹಾಗೂ 10 ಲಕ್ಷಕ್ಕೂ ಹೆಚ್ಚು ತಂತ್ರಜ್ಞಾನ ಉದ್ಯೋಗಿಗಳಿದ್ದಾರೆ” ಎಂದು ವಿವರಿಸಿದರು.

“‘ಲೋಕಲ್ ಎಕಾನಮಿ ಆಕ್ಸಿಲರೇಟರ್ ಪ್ರೋಗ್ರಾಂ’ (LEAP) ಅಡಿಯಲ್ಲಿ, ಸರ್ಕಾರವು ಧಾರವಾಡದ IIITಯಲ್ಲಿ ‘ಕ್ವಾಂಟಮ್ ಕೃತಕ ಬುದ್ಧಿಮತ್ತೆ ಮತ್ತು ಕಂಪ್ಯೂಟಿಂಗ್ ಶ್ರೇಷ್ಠತಾ ಕೇಂದ್ರ’ವನ್ನು ಸ್ಥಾಪಿಸಿದೆ. ಬೆಂಗಳೂರಿನ ಹೊರಗೆ ಸ್ಥಾಪನೆಯಾದ ಇಂತಹ ಮೊದಲ ಕೇಂದ್ರವಿದು. ಕ್ವಾಂಟಮ್ ವಿಜ್ಞಾನವು ಕಂಪ್ಯೂಟಿಂಗ್, ಸಂವಹನ, ಆರೋಗ್ಯ ಮತ್ತು ಆಧುನಿಕ ಉತ್ಪಾದನಾ ಕ್ಷೇತ್ರಗಳ ಭವಿಷ್ಯದಲ್ಲಿ ಮಹತ್ವದ ಪಾತ್ರ ವಹಿಸಲಿದೆ” ಎಂದು ಹೇಳಿದರು.

“ನಮ್ಮ ಯುವಕರು ಈ ಬೆಳವಣಿಗೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ಖಾತರಿಪಡಿಸುವುದು ನಮ್ಮ ಜವಾಬ್ದಾರಿ. ಅದಕ್ಕಾಗಿಯೇ ಇಂತಹ ಸಂಸ್ಥೆ ನಮಗೆ ಮುಖ್ಯವಾಗುತ್ತದೆ” ಎಂದು ಹೇಳಿದರು.

ಕರ್ನಾಟಕ-ಅಮೆರಿಕ ಶೈಕ್ಷಣಿಕ ಮತ್ತು ನಾವೀನ್ಯತಾ ಸಂಬಂಧಕ್ಕೆ ಒತ್ತು

“ಅಮೆರಿಕದ ಪ್ರಮುಖ ಶೈಕ್ಷಣಿಕ ಮತ್ತು ನಾವೀನ್ಯತಾ ಕೇಂದ್ರಗಳೊಂದಿಗೆ ನಾವೀನ್ಯತೆ ಮತ್ತು ಕೌಶಲ್ಯಾಭಿವೃದ್ಧಿ ಕ್ಷೇತ್ರದಲ್ಲಿ ಪಾಲುದಾರಿಕೆ ಬೆಳೆಸಲು ಅಮೆರಿಕದ ರಾಯಭಾರಿಗಳ ನೆರವು ಅಗತ್ಯವಿದೆ. ಅಮೆರಿಕದ ಪ್ರಮುಖ ಪರಿಸರ ವ್ಯವಸ್ಥೆಗಳೊಂದಿಗೆ ಶೈಕ್ಷಣಿಕ, ಕೌಶಲ್ಯ ಮತ್ತು ನಾವೀನ್ಯತಾ ಕಾರಿಡಾರ್ಗಳ ಜಾಲವನ್ನು ಕರ್ನಾಟಕ ಅಭಿವೃದ್ಧಿಪಡಿಸುತ್ತಿದೆ” ಎಂದು ತಿಳಿಸಿದರು.

“ತಂತ್ರಜ್ಞಾನ ಮತ್ತು ನಾವೀನ್ಯತಾ ಕೇಂದ್ರವಾಗಿ ಬೆಂಗಳೂರಿನ ಬೆಳೆಯುತ್ತಿರುವ ಮಹತ್ವ ಹಾಗೂ ಅಮೆರಿಕದ ಕಂಪನಿಗಳು ಮತ್ತು ಸಂಸ್ಥೆಗಳೊಂದಿಗಿನ ಗಾಢ ಬಾಂಧವ್ಯ ಹೊಂದಿದೆ” ಎಂದರು.

ತರಗತಿಗಳಿಂದ ಜಾಗತಿಕ ಮಾರುಕಟ್ಟೆಗೆ ಸಂಪರ್ಕ:

“ನಮ್ಮ ಉದ್ದೇಶ ಸರಳ: ತರಗತಿಗಳನ್ನು ಪ್ರಯೋಗಾಲಯಗಳಿಗೆ, ಪ್ರಯೋಗಾಲಯಗಳನ್ನು ಸ್ಟಾರ್ಟ್ಅಪ್ಗಳಿಗೆ ಮತ್ತು ಸ್ಟಾರ್ಟ್ಅಪ್ಗಳನ್ನು ಜಾಗತಿಕ ಮಾರುಕಟ್ಟೆಗೆ ಜೋಡಿಸುವುದು. ಜಂಟಿ ಸಂಶೋಧನೆ, ಪಠ್ಯಕ್ರಮ ಅಭಿವೃದ್ಧಿ ಮತ್ತು ಉದ್ಯಮಾಧಾರಿತ ಕಲಿಕೆಯ ಮೂಲಕ ರಾಜ್ಯದ ವಿಶ್ವವಿದ್ಯಾಲಯಗಳು ಮತ್ತು ಅಮೆರಿಕದ ಪ್ರಮುಖ ವಿಶ್ವವಿದ್ಯಾಲಯಗಳು ಹಾಗೂ ಸಂಶೋಧನಾ ಸಂಸ್ಥೆಗಳ ನಡುವೆ ಪಾಲುದಾರಿಕೆ ಬೆಳೆಸುವ ಗುರಿ ರಾಜ್ಯಕ್ಕಿದೆ” ಎಂದು ಹೇಳಿದರು.

“ಇಂತಹ ಸಹಭಾಗಿತ್ವಗಳು ಯುವಕರಿಗೆ ಜಾಗತಿಕ ಮಟ್ಟದ ಕೌಶಲ್ಯ ಪಡೆಯಲು ನೆರವಾಗುವುದರ ಜೊತೆಗೆ ಕರ್ನಾಟಕದ ನಾವೀನ್ಯತಾ ಪರಿಸರ ವ್ಯವಸ್ಥೆಯೊಂದಿಗೆ ಅವರ ಸಂಪರ್ಕವನ್ನೂ ಉಳಿಸಿಕೊಳ್ಳುತ್ತದೆ ಎಂದು ಅವರು ಸೇರಿಸಿದರು. ಸಿಲಿಕಾನ್ ವ್ಯಾಲಿ, ಬಾಸ್ಟನ್, ಆಸ್ಟಿನ್ ಮತ್ತು ಪಿಟ್ಸ್ಬರ್ಗ್ನಂತಹ ಪ್ರಮುಖ ಅಮೆರಿಕದ ನಾವೀನ್ಯತಾ ಕೇಂದ್ರಗಳಲ್ಲಿನ ಶ್ರೇಷ್ಠತಾ ಕೇಂದ್ರಗಳು, ಇನ್ಕ್ಯುಬೇಟರ್ಗಳು, ಆಕ್ಸಿಲರೇಟರ್ಗಳು ಮತ್ತು ಸಂಶೋಧನಾ ಪಾರ್ಕ್ಗಳೊಂದಿಗೂ ಕರ್ನಾಟಕ ಪಾಲುದಾರಿಕೆ ಬಯಸಲಿದೆ” ಎಂದು ಅವರು ತಿಳಿಸಿದರು.

“ಈ ಸಹಭಾಗಿತ್ವಗಳು ಕರ್ನಾಟಕದ ಸ್ಟಾರ್ಟ್ಅಪ್ಗಳಿಗೆ ವಿಶ್ವದರ್ಜೆಯ ಮಾರ್ಗದರ್ಶನ, ಆಧುನಿಕ ಸಂಶೋಧನಾ ಸೌಲಭ್ಯಗಳು, ಬಂಡವಾಳ ಜಾಲ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಪ್ರವೇಶ ಒದಗಿಸಲಿವೆ. ಇದೇ ವೇಳೆ, ಅಮೆರಿಕದ ನಾವೀನ್ಯಕಾರರಿಗೂ ಕರ್ನಾಟಕದ ಅಸಾಧಾರಣ ಪ್ರತಿಭಾ ಸಂಪತ್ತು, ಉತ್ಪಾದನಾ ಸಾಮರ್ಥ್ಯ ಮತ್ತು ಚೈತನ್ಯಶೀಲ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯನ್ನು ಬಳಸಿಕೊಳ್ಳಲು ಅವಕಾಶ ಸಿಗಲಿದೆ,” ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಭಾರತದಲ್ಲಿರುವ ಅಮೆರಿಕ ರಾಯಭಾರಿ ಸರ್ಜಿಯೋ ಗೋರ್, ಗೃಹ, ಐಟಿ & ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಸಾರಿಗೆ ಸಚಿವ ಬೈರತಿ ಸುರೇಶ್, ಕಿರಣ್ ಮಜುಂದಾರ್-ಷಾ, ಸೈನ್ಸ್ ಗ್ಯಾಲರಿ ಸಂಸ್ಥಾಪಕ ನಿರ್ದೇಶಕಿ ಡಾ. ಜಾಹ್ನವಿ ಫಾಲ್ಕಿ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Suddi Belaku