
ಮಹಾತ್ಮರನ್ನು ಪ್ರತಿನಿತ್ಯ ಸ್ಮರಣೆ ಮಾಡಬೇಕು: ಸೋಮೇಶ್ವರಾನಂದ
ಸುದ್ದಿ ಬೆಳಕು ವಾರ್ತೆ
ಸೈದಾಪುರ ಏಪ್ರಿಲ್ 20 : ಅನುಭವ ಮಂಟಪ ರಚಿಸಿ ನಾಡಿಗೆ ಹೊಸ ಕಲ್ಪನೆಯನ್ನು ಕೊಟ್ಟ ಮಹಾತ್ಮರನ್ನು ಪ್ರತಿನಿತ್ಯ ಸ್ಮರಣೆ ಮಾಡಬೇಕು. ಬಸವಣ್ಣವನರ ವಿಚಾರಧಾರೆಗಳು ಜಯಂತಿ ಆಚರಣೆಗೆ ಸೀಮಿತವಾಗದೆ ಲಿಂಗದಾರಿಗಳಾಗಿ ದಿನಾ ನಿತ್ಯದಲ್ಲಿ ಪಾಲನೆ ಮಾಡಬೇಕು ಎಂದು ಸಿದ್ಧಚೇತನಾಶ್ರಮದ ಸಿದ್ಧಾರೂಢ ಮಠದ ಸೋಮೇಶ್ವರಾನಂದ ಮಹಾಸ್ವಾಮಿಗಳು ಆರ್ಶೀವಚನ ನೀಡಿದರು.
ಪಟ್ಟಣದಲ್ಲಿ ವಲಯ ವೀರಶೈವ ಸಮಾಜದ ವತಿಯಿಂದ ವಿಶ್ವನಾಥ ಮಂದಿರದಲ್ಲಿ ಹಮ್ಮಿಕೊಂಡ ಬಸವೇಶ್ವರ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಬಸವಣ್ಣನವರು ಆಡಿದ ಮಾತುಗಳು ವಚನಗಳಾದವು. ಸರಳ ರೂಪದ ಅವರ ವಿಚಾರಧಾರೆಗಳು ಪರಮಾತ್ಮನ ಚೈತನ್ಯದೊಂದಿಗೆ ಆತ್ಮ ಕಲ್ಯಾಣವನ್ನು ಕಂಡು ಕೊಳ್ಳುವಂತಿದೆ. ಶರಣರ ಅನುಭವದ ತತ್ವಗಳನ್ನು ನಾವು ಪಾಲಿಸಿಕೊಂಡರೆ ಜನ್ಮ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ಇದಕ್ಕೂ ಮೊದಲು ಬಸವೇಶ್ವರ ಭಾವಚಿತ್ರದ ಮೆರವಣಿಗೆಯನ್ನು ಕಡೇಚೂರ ಸಂಸ್ಥಾನ ಮಠದ ಗುರುಮೂರ್ತಿ ಶಿವಾಚಾರ್ಯರು ಚಾಲನೆ ನೀಡಿದರು, ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರ ಮೂರ್ತಿಗೆ ವಿಶೇಷ ಪೂಜೆಯನ್ನು ನೇರಡಗುಂಬ ಪಶ್ಚಿಮಾದ್ರಿ ಸಂಸ್ಥಾನ ಮಠದ ಪಂಚಮ ಸಿದ್ಧಲಿಂಗ ಮಹಾಸ್ವಾಮಿಗಳು ನೇರವೇರಿಸಿದರು.

ಅದ್ಧೂರಿ ಮೆರವಣಿಗೆ: ಪಟ್ಟಣದ ಗಂಜ್ ಆವರಣದಿಂದ ಪ್ರಾರಂಭಗೊಂಡ ಬಸವಣ್ಣನವರ ಭಾವಚಿತ್ರದ ಅದ್ಧೂರಿ ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ವಾದ್ಯಗಳೊಂದಿಗೆ ಅಂಬಿಗರ ಚೌಡಯ್ಯ ವೃತ್ತದ ಮೂಲಕ ಸಾಗಿ ಹೆಮರೆಡ್ಡಿ ಮಲ್ಲಮ್ಮ, ಮತ್ತು ಕನಕ ವೃತ್ತದ ಮೂಲಕ ಬಸವೇಶ್ವರ ವೃತ್ತದಲ್ಲಿ ಬಸವಣ್ಣನ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ವಿಶ್ವನಾಥ ಮಂದಿರದಲ್ಲಿ ಪೂಜೆಯನ್ನು ನೆರವೇರಿಸಿ ಮೆರವಣಿಗೆ ಸಮಾಪ್ತಿಗೊಳಿಸಲಾಯಿತು. ಮೆರವಣಿಗೆಯಲ್ಲಿ ಹಲಗೆ ವಾದ್ಯ ಮೇಳ, ಡೊಳ್ಳುಕುಣಿತ ಮತ್ತು ಲಂಬಾಣಿ ನೃತ್ಯವು ನೋಡುಗರ ಗಮನ ಸೆಳೆಯಿತು.
ಈ ವೇಳೆ ವೀರಶೈವ ಸಮಾಜದ ಹಿರಿಯ ಮುಖಂಡ ಸಿದ್ಧಣ್ಣಗೌಡ ಕಡೇಚೂರು, ಶಿವಮೂರ್ತಿಸ್ವಾಮಿ ಸೇರಿದಂತೆ ವೀರಶೈವ ಸಮಾಜದ ಹಿರಿಯರು, ಯುವ ಮುಖಂಡರು ಸೇರಿದಂತೆ ವಿವಿಧ ಗ್ರಾಮಗಳ ಬಸವ ಅಭಿಮಾನಿಗಳು ಭಾಗವಹಿಸಿದ್ದರು.










Leave a Reply