ಶಿಕ್ಷಣದ ಜತೆಗೆ ಆರೋಗ್ಯ ಕ್ಷೇತ್ರಕ್ಕೂ ಮಠದ ಕೊಡುಗೆ: ಆಯುರ್ವೇದ ಕಾಲೇಜಿಗೆ ಅಡಿಗಲ್ಲು

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ: ಅಬ್ಬೆ ತುಮಕೂರು ವಿಶ್ವಾರಾಧ್ಯ ಮಠದ ಶೈಕ್ಷಣಿಕ ಪ್ರಾಂಗಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಆಯುರ್ವೇದ ಮೆಡಿಕಲ್ ಕಾಲೇಜಿಗೆ ‘ಶರಣ ಸಕ್ಕರೆಪ್ಪಗೌಡ ಗುರು ವಿಶ್ವಾರಾಧ್ಯ ಆಯುರ್ವೇದ ಕಾಲೇಜು ಎಂದು ಹೆಸರಿಡಲಾಗಿದೆ ಎಂದು ಅಬ್ಬೆ ತುಮಕೂರು ವಿಶ್ವಾರಾಧ್ಯ ಮಠದ ಗಂಗಾಧರ ಸ್ವಾಮಿಗಳು ತಿಳಿಸಿದರು.

ಅಬ್ಬೆತುಮಕೂರಿನ ವಿಶ್ವಾರಾಧ್ಯರ ಮಠದ ಪಾದಗಟ್ಟಿ ಸಮೀಪದ ಬಯಲು ಜಾಗದಲ್ಲಿ ಭಾನುವಾರ ಶರಣ ಸಕ್ರರೆಪ್ಪಗೌಡ ಗುರು ವಿಶ್ವಾರಾಧ್ಯ ಆಯುರ್ವೇದ ಕಾಲೇಜು ಕಟ್ಟಡದ ಅಡಿಗಲ್ಲು ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ವಿಶ್ವಾರಾಧ್ಯರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ಮಹಾತ್ಮರಲ್ಲ. ಜಾತಿ, ಮತ, ಪಂಥಗಳ ಭೇದವಿಲ್ಲದೆ ಮನುಕುಲದ ಒಳಿತಿಗಾಗಿ ಬದುಕಿದ ಮಹಾನ್ ಅನುಭಾವಿಗಳು. ಅವರ ಜೀವನ, ತತ್ವ ಮತ್ತು ಆದರ್ಶಗಳು ಸಮಾಜಕ್ಕೆ ಸದಾ ಮಾರ್ಗದರ್ಶನ ನೀಡುತ್ತಿವೆ ಎಂದರು.

ವಿಶ್ವಾರಾಧ್ಯರು ತಮ್ಮ ಆಧ್ಯಾತ್ಮಿಕ ಸಾಧನೆಯ ಮೂಲಕ ಅಪಾರ ಶಕ್ತಿಯನ್ನು ಗಳಿಸಿದ್ದರೂ, ಯಾವುದೇ ವೈಯಕ್ತಿಕ ಆಸೆ ಹೊಂದದೆ ಜನರ ಸೇವೆಗೆ ತಮ್ಮ ಜೀವನ ಅರ್ಪಿಸಿದ್ದರು. ಕ್ಷೇತ್ರಕ್ಕೆ ಬರುವ ಭಕ್ತರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುವ ದೈವಿಕ ಶಕ್ತಿಯಾಗಿ ಅವರು ಭಕ್ತರ ಮನಸ್ಸಿನಲ್ಲಿ ನೆಲೆಸಿದ್ದಾರೆ ಎಂದು ಹೇಳಿದರು.

ಸಾಮರಸ್ಯ ಸಾರುವ ಪುಣ್ಯಕ್ಷೇತ್ರ
ಅಬ್ಬೆ ತುಮಕೂರು ಕ್ಷೇತ್ರವು ಎಲ್ಲ ಸಮಾಜದ ಜನರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಸಾಮರಸ್ಯದ ಸಂಕೇತವಾಗಿದೆ. ಇಲ್ಲಿ ದೊಡ್ಡವರು, ಸಣ್ಣವರು ಎಂಬ ಭೇದವಿಲ್ಲದೆ ಎಲ್ಲರೂ ವಿಶ್ವಾರಾಧ್ಯರ ಭಕ್ತರಾಗಿ ಒಂದಾಗಿದ್ದಾರೆ. ಇದೇ ಕ್ಷೇತ್ರದ ವಿಶೇಷತೆ ಎಂದು ಗಂಗಾಧರ ಶ್ರೀ ಹೇಳಿದರು.

ಮಠವು ಧಾರ್ಮಿಕ ಚಟುವಟಿಕೆಗಳ ಜತೆಗೆ ಶಿಕ್ಷಣ ಕ್ಷೇತ್ರದಲ್ಲಿಯೂ ಮಹತ್ವದ ಹೆಜ್ಜೆ ಇಡುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಬಿಎಡ್, ಬಿ.ಫಾರ್ಮಸಿ, ಬಿಎಸ್ಸಿ ನರ್ಸಿಂಗ್ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲಾಗಿದೆ. ಇದೀಗ ಆಯುರ್ವೇದ ಕಾಲೇಜು ಸ್ಥಾಪನೆಯ ಮೂಲಕ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೂ ಕೊಡುಗೆ ನೀಡಲಾಗುತ್ತಿದೆ ಎಂದರು.

ಆಯುರ್ವೇದ ಕಾಲೇಜು ಸ್ಥಾಪನೆಗೆ ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರು ನೀಡುತ್ತಿರುವ ಸಹಕಾರವನ್ನು ಗಂಗಾಧರ ಸ್ವಾಮಿಗಳು ಶ್ಲಾಘಿಸಿದರು.
ಸರ್ಕಾರಿ ವ್ಯವಸ್ಥೆಯಲ್ಲಿ ಕೆಲಸಗಳು ನಡೆಯಲು ನಿಯಮ-ಕ್ರಮಗಳಿರುತ್ತವೆ. ಆದರೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಹಕಾರ ದೊರೆತಾಗ ಮಾತ್ರ ಉತ್ತಮ ಕಾರ್ಯಗಳು ಸಾಕಾರಗೊಳ್ಳುತ್ತವೆ ಎಂದು ಹೇಳಿದರು.

ಮಠ-ಮಂದಿರಗಳ ಅಭಿವೃದ್ಧಿ ಕೇವಲ ಒಬ್ಬರಿಂದ ಸಾಧ್ಯವಿಲ್ಲ. ಭಕ್ತರು, ಸಮಾಜದ ಮುಖಂಡರು ಹಾಗೂ ಎಲ್ಲರ ಸಹಕಾರದಿಂದ ಮಾತ್ರ ಧಾರ್ಮಿಕ ಮತ್ತು ಶೈಕ್ಷಣಿಕ ಸಂಸ್ಥೆಗಳು ಬೆಳೆಯಲು ಸಾಧ್ಯ. ‘ಇದು ನಮ್ಮ ಸಂಸ್ಥೆ’ ಎಂಬ ಭಾವನೆಯಿಂದ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಕಾಲೇಜು ಕಟ್ಟಡಕ್ಕೆ ಅಡಿಗಲ್ಲು ನೆರವೇರಿಸಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್
ಅಬ್ಬೆ ತುಮಕೂರು ಶ್ರೀ ವಿಶ್ವಾರಾಧ್ಯ ಮಠವು ಈ ಭಾಗದ ಸಾಮಾಜಿಕ ಸಾಮರಸ್ಯದ ಪ್ರತೀಕವಾಗಿದೆ. ಜಾತಿ, ಮತ ಭೇದವಿಲ್ಲದೆ ಎಲ್ಲ ಸಮಾಜದ ಜನರನ್ನು ಒಗ್ಗೂಡಿಸಿಕೊಂಡು ಬಡವರನ್ನು ಅಪ್ಪಿಕೊಂಡು ಕಾರ್ಯನಿರ್ವಹಿಸುತ್ತಿರುವ ಮಠದ ಬಗ್ಗೆ ಜನರಲ್ಲಿ ಅಪಾರ ಭಕ್ತಿ ಇದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.

ಪರಮಪೂಜ್ಯ ಗಂಗಾಧರ ಶಿವಾಚಾರ್ಯ ಸ್ವಾಮೀಜಿಗಳ ಆಶಯದಂತೆ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಆರಂಭವಾಗುತ್ತಿರುವುದು ಈ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ದೊರೆಯಲು ಸಹಕಾರಿಯಾಗಲಿದೆ. ಮಠದ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಕಿರಿಯ ಸ್ವಾಮಿಗಳಾದ ಶಿವಶೇಖರ ವಿಶ್ವಾರಾಧ್ಯ ಸ್ವಾಮಿಗಳು, ಶಾಸಕರಾದ ಚನ್ನಾರೆಡ್ಡಿ ಪಾಟೀಲ್ ತುನ್ನೂರ, ಶರಣಗೌಡ ಕಂದಕೂರ, ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ, ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯ ಮಹೇಶ ರೆಡ್ಡಿ ಮುದ್ನಾಳ ವೇದಿಕೆಯಲ್ಲಿ ಇದ್ದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರೆಡ್ಡಿ ಅನಪುರ, ಜಿಲ್ಲಾ ವಕ್ತಾರ ಶ್ಯಾಮಸನ್ ಮಾಳಿಕೇರಿ, ಸಿದ್ದಲಿಂಗರೆಡ್ಡಿ ಉಳ್ಳೆಸೂಗುರು, ಆರ್. ಮಹಾದೇವಪ್ಪ ಅಬ್ಬೆತುಮಕೂರು, ವಿಶ್ವನಾಥ ಸಿರವಾರ, ಕೃಷ್ಣಾ ದಾಸನಕೇರಿ, ಟಿ.ಎನ್. ಭೀಮುನಾಯಕ, ಮಲ್ಲು ಮಾಳಿಕೇರಿ, ಜಿಲ್ಲಾ ಕಾಂಗ್ರೆಸ್ ಖಜಾಂಚಿ ಚಿದಾನಂದಪ್ಪ ಕಾಳೆಬೆಳಗುಂದಿ, ವಿನಾಯಕ ರಾಖಾ ಸೇರಿದಂತೆ ಇತರರಿದ್ದರು. ಬಸವರಾಜ ಶಾಸ್ತ್ರೀ ಶಹಾಪುರ ನಿರೂಪಿಸಿದರು.
ಆರಂಭದಲ್ಲಿ ಶ್ರೀಗಳು, ಸಚಿವ,ಶಾಸಕರನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಯಿತು.

You Might Also Like

Leave a Reply

Your email address will not be published. Required fields are marked *

Suddi Belaku