ವಿಶ್ವನಾಥರೆಡ್ಡಿ ಮುದ್ನಾಳ್ ಜನ್ಮ ಶತಮಾನೋತ್ಸವ: ಸಂಸ್ಮರಣ ಗ್ರಂಥ ಲೋಕಾರ್ಪಣೆಗೆ ಸಿದ್ಧತೆ

Posted by

–

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಕರ್ನಾಟಕ ರಾಜಕಾರಣದಲ್ಲಿ ಅತ್ಯಂತ ಪ್ರಾಮಾಣಿಕ, ಜನಾನುರಾಗಿ ಮತ್ತು ಆದರ್ಶಪ್ರಾಯ ನಾಯಕರಲ್ಲಿ ಒಬ್ಬರಾಗಿದ್ದ ಮಾಜಿ ಸಚಿವ ವಿಶ್ವನಾಥರೆಡ್ಡಿ ಮುದ್ನಾಳ ಅವರ ಜನ್ಮ ಶತಮಾನೋತ್ಸವ ನಿಮಿತ್ತ ಸಂಸ್ಮರಣ ಗ್ರಂಥದ ಲೋಕಾರ್ಪಣೆಯ ಸಿದ್ಧತೆ ನಡೆಯುತ್ತಿದೆ ಎಂದು ಗ್ರಂಥದ ಪ್ರಧಾನ ಸಂಪಾದಕ ಹಾಗೂ ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್ ಹೇಳಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ (ಹಳೆಯ ಹೈದರಾಬಾದ್ ಕರ್ನಾಟಕ) ಭಾಗದಲ್ಲಿ, ವಿಶೇಷವಾಗಿ ಯಾದಗಿರಿ ಜಿಲ್ಲೆಯಲ್ಲಿ ಅವರು ಮಾಡಿರುವ ಜನಪರ ಕೆಲಸಗಳು, ಮತ್ತು ಅವರ ಮೌಲ್ಯಾಧಾರಿತ ರಾಜಕಾರಣ ಇಂದಿಗೂ ಜನಮಾನಸದಲ್ಲಿ ಹಚ್ಚಿಹಸಿರಾಗಿದೆ. ಅವರ ವ್ಯಕ್ತಿತ್ವ ಮತ್ತು ರಾಜಕೀಯ ಜೀವನ ವಿಶಿಷ್ಟ ಮತ್ತು ಅಪರೂಪ. ಅವರು ಸರಳತೆ ಮತ್ತು ಸತ್ಯನಿಷ್ಠೆಯನ್ನು ಹೊಂದಿದ್ದರು. ಅಧಿಕಾರದಲ್ಲಿದ್ದಾಗಲೂ ಮತ್ತು ಇಲ್ಲದಿದ್ದಾಗಲೂ ಅವರು ಎಂದಿಗೂ ತಮ್ಮ ತತ್ವ-ಸಿದ್ಧಾಂತಗಳನ್ನು ಬಿಟ್ಟುಕೊಡಲಿಲ್ಲ. ಭ್ರಷ್ಟಾಚಾರರಹಿತ ಹಾಗೂ ನೈತಿಕತೆಯ ರಾಜಕಾರಣಕ್ಕೆ ಅವರು ಹೆಸರಾಗಿದ್ದರು ಎಂದು ಹೇಳಿದರು.

ಯಾದಗಿರಿ ಕ್ಷೇತ್ರದಲ್ಲಿ ಐದು ಬಾರಿ ಶಾಸಕರಾಗಿ ಗೆಲುವು ಸಾಧಿಸಿರುವ ಮುದ್ನಾಳ ಅವರು, ಈ ಭಾಗದ ನೀರಾವರಿ, ಶಿಕ್ಷಣ, ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ಅವರು ಅಪಾರ ಕೊಡುಗೆ ನೀಡಿದ್ದಾರೆ. ರಾಜ್ಯ ಸರ್ಕಾರದ ಸಚಿವರಾಗಿ ಅವರು ನಿರ್ವಹಿಸಿದ ಜವಾಬ್ದಾರಿಗಳು ಮತ್ತು ತೆಗೆದುಕೊಂಡ ನಿರ್ಧಾರಗಳು ಅವರ ಆಡಳಿತ ದಕ್ಷತೆ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ಅವರ ಕಳಕಳಿಯನ್ನು ತೋರಿಸುತ್ತವೆ. ಅವರ ತತ್ವಗಳು ಮತ್ತು ಸಮಾಜ ಸೇವೆಯ ಪರಂಪರೆಯನ್ನು ಇಂದಿನ ಪೀಳಿಗೆಯ ರಾಜಕಾರಣಿಗಳು ಅಳವಡಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಜನ್ಮಶತಮಾನೋತ್ಸವದ ಹಿನ್ನೆಲೆಯಲ್ಲಿ ಸಂಸ್ಕರಣೆ ಗ್ರಂಥ ಪ್ರಕಟಣೆಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ನಾಡಿನ ಹರ ಗುರು ಚರಮೂರ್ತಿಗಳ ಸಂದೇಶಗಳು, ಇದೂವರೆಗಿನ ಲೇಖನಗಳು ಹಾಗೂ ಅವರ ಗೆಳೆಯರು, ಸಹವರ್ತಿಗಳು, ಹೊಸ ಬರಹಗಾರರಿಂದಲೂ ಲೇಖನಗಳನ್ನು ಆಹ್ವಾನಿಸುತ್ತಿದ್ದೇವೆ. ತಮ್ಮ ಮಾಧ್ಯಮದ ಮೂಲಕ ವಿಶ್ವನಾಥರೆಡ್ಡಿ ಮುತ್ನಾಳ ಅವರ ಸಂಸ್ಕರಣ ಗ್ರಂಥಕ್ಕೆ ಸಹಕಾರ ನೀಡುವಂತೆ ಅವರು ಕೋರಿದರು.

ಸುದ್ದಿಗೋಷ್ಠಿಯಲ್ಲಿ ಹಿರಿಯ ಸಾಹಿತಿ ಅಯ್ಯಣ್ಣ ಹುಂಡೇಕಾರ, ಪ್ರಕಾಶ ಅಂಗಡಿ, ಮಹಾದೇವಪ್ಪ ಅಬ್ಬೆತುಮಕೂರು, ಬಸವರಾಜ ಮೋಟ್ನಳ್ಳಿ, ಬಸವಂತರಾಯ ಮಾಲಿಪಾಟೀಲ, ನೂರಂದಪ್ಪ ಲೇವಡಿ, ನಾಗೇಂದ್ರ ಜಾಜಿ. ಇದ್ದರು.


ಡಿಸೆಂಬರ್ ಕೊನೆ ವಾರದಲ್ಲಿ ಅರ್ಥಪೂರ್ಣ ಸಮಾರಂಭ

ವಿಶ್ವನಾಥ ರೆಡ್ಡಿ ಮುದ್ನಾಳ್ ಅವರ ಜನ್ಮ ಶತಮಾನೋತ್ಸವ ಸಮಾರಂಭವು ಡಿಸೆಂಬರ್ ಕೊನೆಯ ವಾರದಲ್ಲಿ ಆಯೋಜಿಸಲಾಗುತ್ತಿದ್ದು, ಮಹಿಪಾಲರೆಡ್ಡಿ ಮುನ್ನೂರ್ ಅವರ ಪ್ರಧಾನ ಸಂಪಾದಕತ್ವ ಹಾಗೂ ವೀರಬಸವಂತ ಬಿ. ಸಂಪಾದಕತ್ವದಲ್ಲಿ ಸಂಸ್ಮರಣ ಗ್ರಂಥ ಲೋಕಾರ್ಪಣೆ ಮಾಡಲಾಗುವುದು ಎಂದು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಹೇಳಿದರು.

ವೃತ್ತಿಯಲ್ಲಿ ಅವರು ಕೃಷಿಕರು ಮತ್ತು ಉದ್ಯಮಿಯಾಗಿದ್ದರು. ಜನಪರ ಆಗಿದ್ದ ಅವರು ಸಮಾಜ ಸೇವಾ ಧುರಂಧರ ಆಗಿದ್ದು, ಅವರ ಬದುಕು ಮತ್ತು ಸಾಧನೆಯನ್ನು ಗ್ರಂಥ ರೂಪದಲ್ಲಿ ದಾಖಲಿಸುವ ಕಾರ್ಯ ಶರಣ ಸಾಹಿತ್ಯ ಪರಿಷತ್ತಿನ ಮೂಲಕ ಮಾಡಲಾಗುತ್ತಿದೆ ಎಂದು ಹೆಮ್ಮೆಯಿದೆ ಎಂದರು.

ಅಭಿಮಾನಿಗಳು ವಿಶ್ವನಾಥರೆಡ್ಡಿ ಮುದ್ನಾಳ ಅವರ ಕುರಿತು ಬರಹಗಳನ್ನು vrmudnal2026@gmail.com ಇದಕ್ಕೆ ಕಳಿಸಿಕೊಡುವಂತೆ ಕೋರಲಾಗಿದ್ದು, 9731666052, 9916382585 ಸಂಪರ್ಕಿಸಬಹುದು.

You Might Also Like

Leave a Reply

Your email address will not be published. Required fields are marked *

↑
Suddi Belaku