ಯಾದಗಿರಿಯಲ್ಲಿ ಮೊಳಕೆಯೊಡೆಯದ ಶೇಂಗಾ ಬೀಜ: ರೈತರ ಪ್ರತಿಭಟನೆ, ತನಿಖೆಗೆ ಆಗ್ರಹ

Posted by

–

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಬಿತ್ತಿದ ಶೇಂಗಾ ಬೀಜ ಮೊಳಕೆಯೊಡೆಯದೇ ಇರುವುದನ್ನು ಖಂಡಿಸಿ ತಾಲ್ಲೂಕಿನ ಹತ್ತಿಕುಣಿ ಭಾಗದ ರೈತರು ನಗರದ ಎಪಿಎಂಸಿ ಕಚೇರಿ ಎದುರು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ನೇತೃತ್ವದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.
ಬಿತ್ತಿದ ಬೀಜ ಬೆಳೆಯದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಆಗಮಿಸಿದ ರೈತರ ಸಮಸ್ಯೆ ಆಲಿಸಿ ತಕ್ಷಣ ಸ್ಥಳಕ್ಕೆ ಭೇಟಿ ಕೊಟ್ಟ ಭೀಮುನಾಯಕ ವಾಸ್ತವ ಪರಿಸ್ಥಿತಿ ಅವಲೋಕಿಸಿದ ನಂತರ ನೇರವಾಗಿ ಎಪಿಎಂಸಿ ಕಚೇರಿಗೆ ರೈತರೊಂದಿಗೆ ಆಗಮಿಸಿ ದೀಢೀರ್ ಪ್ರತಿಭಟನೆ ನಡೆಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೊದಲೇ ಬರದ ಪರಿಸ್ಥಿತಿಯಿಂದ ಕಂಗೆಟ್ಟಿರುವ ರೈತರು ಇದ್ದ ಪಂಪ್ ಸೆಟ್ ಬಳಸಿಕೊಂಡು ಶೇಂಗಾ ಬೆಳೆಯಾದರೂ ಬಿತ್ತಿಕೊಳ್ಳಲೆಂದು ಎಪಿಎಂಸಿ ಆವರಣದಲ್ಲಿ ಬೀಜ ಖರೀದಿಸಿದ್ದಾರೆ. ಬರ ಪರಿಸ್ಥಿತಿ ಇದ್ದುದರಿಂದ ಕೃಷಿ ಇಲಾಖೆಯಿಂದ ಸಬ್ಸಿಡಿ ದರದಲ್ಲಿ ಶೇಂಗಾ ಬೀಜ ಪೂರೈಕೆ ಮಾಡದೇ ಇದ್ದುದರಿಂದ ರೈತರು ಎಪಿಎಂಸಿ ಆವರಣದಲ್ಲಿ ಪೂರೈಕೆ ಮಾಡಿದ ವೈಜ್ಞಾನಿಕವಾಗಿ ಉಪಚಾರ ಮಾಡದ ಬೀಜಗಳನ್ನು ದುಬಾರಿ ದರಕ್ಕೆ ಅಂದರೆ ಕ್ವಿಂಟಾಲ್ ಗೆ ೧೫,೦೦೦ ರೂ. ನಂತೆ ಖರೀದಿಸಿ ಬಿತ್ತನೆ ಮಾಡಿ ಈಗ ಮೊಳಕೆ ಒಡೆಯದೇ ಕಂಗಾಲಾಗಿದ್ದಾರೆ. ಇದಕ್ಕೆ ಪರೋಕ್ಷವಾಗಿ ಸರ್ಕಾರವೂ ಕಾರಣವಾಗಿದ್ದು, ಜೊತೆಗೆ ಅಕ್ರಮವಾಗಿ ಕಳಪೆ ಗುಣಮಟ್ಟದ ನಕಲಿ ಬೀಜ ಮಾರಾಟ ಮಾಡಿದ ಅಂಗಡಿ ಕಾರರು ನೇರ ಹೊಣೆಗಾರರಾಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಕಳಪೆ ಬೀಜ ಮಾರಾಟ ಮಾಡಿದ ಅಂಗಡಿ ಕಾರರಾದ ಎಸ್.ಎಂ. ಪರಡಿ, ಹರ್ಷ ಟ್ರೇಡಿಂಗ್ ಕಂಪೆನಿ, ಉಮರ ಟ್ರೇಡಿಂಗ್ ಕಂ., ರಾಮಸಮುದ್ರ ಟ್ರೇಡಿಂಗ್ ಕಂ., ನಿರ್ಮಲಾ ಟ್ರೇರ‍್ಸ್, ಚಕ್ರಕಟ್ಟಾ ಬಳಿಯ ಚಟ್ನಳ್ಳಿ ಟ್ರೇಡಿಂಗ್ ಕಂ. ಸೇರಿದಂತೆ ಇನ್ನಿತರ ಅಂಗಡಿಗಳವರು ಕಳಪೆ ಬೀಜ ಪೂರೈಸಿ ರೈತರಿಗೆ ವಂಚಿಸಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡಲೇ ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥ ಟ್ರೇಡಿಂಗ್ ಅಂಗಡಿಗಳ ಮೇಲೆ ಕ್ರಮ ಜರುಗಿಸಿ ಅವರ ಲೈಸೆನ್ಸ್ ರದ್ದುಪಡಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಮತ್ತು ರೈತರಿಗೆ ಆಗಿರುವ ನಷ್ಟದ ಮೊತ್ತವನ್ನು ಬೀಜ ಪೂರೈಸಿದ ಟ್ರೇಡಿಂಗ್ ಕಂ. ಗಳಿಂದಲೇ ವಸೂಲಿ ಮಾಡಿ ರೈತರಿಗೆ ಕೊಡಬೇಕು ಎಂದು ಆಗ್ರಹಿಸಿದರು.


ಬರದಿಂದ ಕಂಗೆಟ್ಟಿರುವ ರೈತರಿಗೆ ಈ ಘಟನೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ದಿಕ್ಕುಕಾಣದಂತಾಗಿರುವ ರೈತರು ಆತ್ಮಹತ್ಯೆ ದಾರಿ ಹಿಡಿಯುವ ಮೊದಲು ಅವರಿಗೆ ಸಾಂತ್ವನ ಹಾಗೂ ನ್ಯಾಯ ಒದಗಿಸಿ ಆತ್ಮಸ್ಥಥೈರ್ಯ ನೀಡÀಬೇಕೆಂದು ಅವರು ಸರ್ಕಾರ ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆಗೆ ಆಗ್ರಹಿಸಿದರು.
ಬರುವ ಸೋಮವಾರದ ಒಳಗೆ ನ್ಯಾಯ ಒದಗಿಸಬೇಕು ಇಲ್ಲವಾದಲ್ಲಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಅವರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದು ನಾಯಕ ಹತ್ತಿಕುಣಿ, ನಿಂಗಪ್ಪ ಗುಡಗುಡಿ, ಭೀಮರಾಯ ರಾಮಸಮುದ್ರ, ಸಿದ್ದಪ್ಪ ಕೊಯಿಲೂರ, ಅಶೋಕ ನಾಯಕ, ಮಲ್ಲಿಕಾರ್ಜುನ ಕನ್ನಡಿ, ಯಲ್ಲಾಲಿಂಗ ಚಾಮನಳ್ಳಿ, ಬಸವರಾಜ ಕವಲ್ದಾರ, ಅಶೋಕ ಮಸ್ಕನಳ್ಳಿ, ಸಾಬು ವರ್ಕನಳ್ಳಿ, ಸಂತ್ರಸ್ತ ರೈತರಾದ ತಾಯಪ್ಪ ದುಗನೂರು, ಮಲ್ಲಿಕಾರ್ಜುನ ಸೋಮಣ್ಣೋರ್, ಹಣಮಂತ ದ್ಯಾರನೋರ, ಸಾಬಣ್ಣ ಗಡ್ಡಿಮನಿ, ದೇವಪ್ಪ ಕವಲ್ದಾರ, ಸಾಬಣ್ಣ ಸಕ್ರೆಪ್ಪನೋರ್, ಬಸವರಾಜ ದೇವರಳ್ಳಿ, ಚಂದಪ್ಪ ತಮ್ಮಣ್ಣೋರ್, ಚಂದ್ರಶೇಖರ ಕ್ಯಾಂಪ್, ಶಿವಾನಂದ, ಮುರುಗೇಂದ್ರ ಸೇರಿ ಅನೇಕ ರೈತರಿದ್ದರು.

You Might Also Like

Leave a Reply

Your email address will not be published. Required fields are marked *

↑
Suddi Belaku