ಯಾದಗಿರಿಯಲ್ಲಿ ಕಾಂಗ್ರೆಸ್‌ಗೆ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಸೇರ್ಪಡೆ: 300ಕ್ಕೂ ಹೆಚ್ಚು ಮಂದಿ ಭಾಗಿ

Posted by

–

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಕಾಂಗ್ರೆಸ್ ಪಕ್ಷದ ಸಿದ್ದಾಂತ ಹಾಗೂ ರಾಜ್ಯ ಸರ್ಕಾರದ‌ ಜನಪರ ಯೋಜನಗಳಿಗೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರ ಆಕರ್ಷಣೆ, ಸುಮಾರು 300 ಕ್ಕೂ ಹೆಚ್ಚು ಕಾರ್ಯಕರ್ತರ ಸೇರ್ಪಡೆ- ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು.
ಕಾಂಗ್ರೆಸ್ ಪಕ್ಷದ ಸಿದ್ದಾಂತ ಹಾಗೂ ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಮೆಚ್ಚಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಇದರಿಂದ ಪಕ್ಷ ತಳಮಟ್ಟದಿಂದ ಬಲಿಷ್ಠಗೊಳ್ಳಲು ಅನುಕೂಲವಾಗಲಿದೆ ಎಂದು ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.
ನಗರದ ಶಾಸಕರ ಕಚೇರಿಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡ ನಂತರ ಮಾತನಾಡುತ್ತಾ ಹೇಳಿದರು‌.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಚುನಾವಣಾ ಪೂರ್ವ ಘೋಷಿಸಿದಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಬಡವರ ದೀನ ದಲಿತರ ಬದುಕಿಗೆ ಬೆಳಕಾದರು ಎಂದರು.
“ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆರಿಗೆ ಪ್ರತಿತಿಂಗಳು ರೂ 2,000 ಸಹಾಯ ಧನ, ಗೃಹಜ್ಯೋತಿ ಯೋಜನೆಯಡಿ ಮನೆಗಳಿಗೆ ಉಚಿತ ವಿದ್ಯುತ್ ಸರಬರಾಜು, ಯುವ‌ನಿಧಿ ಯೋಜನೆಯಡಿ ನಿರುದ್ಯೋಗಿ ಯುವಕರಿಗೆ ಪ್ರತಿತಿಂಗಳು ನಿರುದ್ಯೋಗಿ ಭತ್ಯೆ ಹಾಗೂ ಪ್ರಮುಖವಾಗಿ ಅನ್ನ ಭಾಗ್ಯ ಯೋಜನೆಯಡಿ ಉಚಿತ ಅಕ್ಕಿ ವಿತರಣೆಯಂತ ಜನಪರ ಯೋಜನೆಗಳು ಕರ್ನಾಟಕದ ಎಲ್ಲಾ ವರ್ಗದ ಜನರಿಗೆ ತಲುಪಿವೆ. ಈ ಎಲ್ಲ ಯೋಜನೆಗಳು ಪ್ರಸ್ತುತ ಸಿಎಂ ಡಿ.ಕೆ.ಶಿವಕುಮಾರ ಅವರ ಅವಧಿಯಲ್ಲಿಯೂ ಕೂಡಾ ಮುಂದುವರೆದು ದೇಶವ್ಯಾಪಿ ಪ್ರಶಂಸೆಗೆ ಕಾರಣವಾಗಿವೆ ಎಂದು ಸರ್ಕಾರದ ಯೋಜನೆಗಳ ಬಗ್ಗೆ ಕೊಂಡಾಡಿದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಜನರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದ್ದು ಯುವಕರು ಉದ್ಯೋಗಕ್ಕಾಗಿ ಪರದಾಡುವಂತಾಗಿದೆ. ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದ್ದು ಜನಸಾಮಾನ್ಯರು ತೀವ್ರ ಸಂಕಟ ಅನುಭವಿಸುತ್ತಿದ್ದಾರೆ. ಮೋದಿ ಸರ್ಕಾರದ ಈ ಅವಧಿಯಲ್ಲಿ ವಿದ್ಯಾರ್ಥಿಗಳು, ರೈತರು ಬೀದಿಗಿಳಿದು ಹೋರಾಟ ಮಾಡಬೇಕಾದರ ಅನಿವಾರ್ಯತೆ ಸೃಷ್ಠಿಯಾಗಿದೆ. ಜನಸಾಮಾನ್ಯರು ಬಿಜೆಪಿ ಸರ್ಕಾರದ ದುರಾಡಳಿತದಿಂದ ಬೇಸತ್ತಿದ್ದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರಲು ಉತ್ಸುಕರಾಗಿದ್ದು ಗ್ರಾಮೀಣ ಹಾಗೂ ನಗರ ಭಾಗದ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಪಕ್ಷವನ್ನು ಸೇರುವ ಮೂಲಕ ಬಲವರ್ಧನೆಗೆ ಮುಂದಾಗಿರುವುದು ಸಂತಸ ವಿಚಾರವಾಗಿದೆ ಎಂದರು.
ರಾಜ್ಯ ತೀವ್ರ ಪರಿಸ್ಥಿತಿ ಎದುರಿಸುತ್ತಿರುವ ಸನ್ನಿವೇಶವನ್ನು ಪ್ರಸ್ತಾಪಿಸಿದ ಶಾಸಕರು ಕೇಂದ್ರ ಸರ್ಕಾರದ ಅಸಹಕಾರವನ್ನು ಟೀಕಿಸಿದರು. ” ರಾಜ್ಯದಲ್ಲಿ ತೀವ್ರ ಬರಗಾಲವಿದೆ. ಕೇಂದ್ರ ಸರ್ಕಾರ ನೆರವಿಗೆ ಧಾವಿಸುವ ಬದಲು ಕಾಲಹರಣ ಮಾಡುತ್ತಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಸರ್ವಪಕ್ಷಗಳ ನಿಯೋಗವನ್ನು ದೆಹಲಿಗೆ ಕೊಂಡೊಯ್ದು ಕೇಂದ್ರಕ್ಕೆ ಮನವರಿಕೆ ಮಾಡಿ ಅನುದಾನ ಬಿಡುಗಡೆ ಆಗ್ರಹಿಸುವ ಕುರಿತಂತೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಮನವಿ ಮಾಡಿದ್ದರು. ಈ ಮೊದಲು ಒಪ್ಪಿಗೆ ಸೂಚಿಸಿದ್ದ ನಾಯಕರು ಈಗ ಆ ಬಗ್ಗೆ ಚಕಾರವೆತ್ತುತ್ತಿಲ್ಲ. ರಾಜ್ಯದ ಜನರ ಹಾಗೂ ರೈತರ ಪರವಾಗಿ ಅವರಿಗಿರುವ ನಿಷ್ಕಾಳಜಿಯನ್ನು ಇದು ಎತ್ತಿತೋರಿಸುತ್ತಿದೆ” ಎಂದು ಹರಿಹಾಯ್ದರು.
ಯಾದಗಿರಿ ನಗರಸಭೆಯ ವಾರ್ಡ್ ನಂಬರ್ 27 ಹಾಗೂ ವಡಗೇರಾ ತಾಲೂಕಿನ ಕಂಠಿ ತಾಂಡಾ ಸೇರಿದಂತೆ ಬೇರೆ ಬೇರೆ ಗ್ರಾಮಗಳ ಮಹಿಳೆಯರು ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಇಂದು ಕಾಂಗ್ರೆಸ್ ಸೇರಿದರು. ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ಶಾಸಕರು ಪಕ್ಷ ಬಲವರ್ಧನೆಗೆ ಶಕ್ತಿ ಮೀರಿ ಪ್ರಯತ್ನಿಸಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರೆಡ್ಡಿ ಮಾಲಿಪಾಟೀಲ್ ಅನಪೂರ ಅವರಿಗೆಲ್ಲ ಪಕ್ಷದ ಧ್ವಜ ಹಸ್ತಾಂತರಿಸುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.
ಸೇರ್ಪಡೆಯಾದ ಪ್ರಮುಖರು ನಗರದ ವಾರ್ಡ ನಂ 27ರ ಮಹ್ಮದ್ ಖಲೀಲ್, ಅಜಾನ್, ಮಹ್ಮದ್ ಇಸ್ಲಾಮಿಲ್, ಶೇಖ್ ಚಾಂದ್, ಬೀರನಕಲ್ ತಾಂಡಾದ ಗ್ರಾಪಂ ಮಾಜಿ ಸದಸ್ಯ ಆಲಪ್ಪ, ತಿಪ್ಪಣ್ಣ, ಕಿಸಾನ ರಾಠೋಡ್, ರಾಜಪ್ಪ ರಾಠೋಡ್, ಕೃಷ್ಣ ರಾಠೋಡ್, ಶಾಂಶಪ್ಪ ಪೂಜಾರಿ, ಕಂಠಿ ತಾಂಡಾದ ಗ್ರಾಪಂ ಮಾಜಿ ಸದಸ್ಯ ಪಂಪಣ್ಣ. ಲಕ್ಷ್ಮಣ ಚವ್ಹಾಣ, ಮಣಿಕಂಠ ಚವ್ಹಾಣ, ಕಮಲಾ ನಾಯಕ ತಾಂಡಾದ ಹರಿಲಾಲ್ ಚವ್ಹಾಣ, ಬಸವರಾಜ ಚವ್ಹಾಣ ಸೇರಿದಂತೆಯೇ ಇತರರಿದ್ದರು.

You Might Also Like

Leave a Reply

Your email address will not be published. Required fields are marked *

↑
Suddi Belaku