ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನ ಆರೋಪ: ಅಜ್ಜನ ವಿರುದ್ಧ ಪೋಕ್ಸೋ ಪ್ರಕರಣ

Posted by

–

ಸುದ್ದಿ ಬೆಳಕು ವಾರ್ತೆ

ಯಾದಗಿರಿ: ಅಪ್ರಾಪ್ತ ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಆರೋಪದಡಿ 75 ವರ್ಷದ ಅಜ್ಜನ ವಿರುದ್ಧ ಪೋಕ್ಸೋ ಸೇರಿದಂತೆ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಾಗಿರುವ ಘಟನೆ ಯಾದಗಿರಿ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

ಸೆ.23ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಆರೋಪ ಕೇಳಿಬಂದಿದ್ದು, ಈ ವೇಳೆ ಚೂರಿ ತೋರಿಸಿ ಬೆದರಿಕೆ ಹಾಕಿದ್ದಲ್ಲದೆ, ಬಟ್ಟೆ ಬಿಚ್ಚಿಸಿ ಬಾಯಿಗೆ ಬಟ್ಟೆ ತುರುಕಿ ಹತ್ಯೆಗೆ ಯತ್ನಿಸಿದ ಆರೋಪವೂ ಕೇಳಿಬಂದಿದೆ.

ಘಟನೆ ಗಮನಿಸಿದ ವ್ಯಕ್ತಿಯೊಬ್ಬರು ಕೂಡಲೇ 112ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ತೆರಳಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಬಾಲಕಿಯ ತಾಯಿ ಬೆಂಗಳೂರಿಗೆ ತೆರಳಿದ್ದ ಸಂದರ್ಭದಲ್ಲಿ ಬಾಲಕಿಯನ್ನು ಅಜ್ಜ-ಅಜ್ಜಿಯ ಮನೆಯಲ್ಲಿ ಬಿಟ್ಟು ಹೋಗಿದ್ದರು ಎನ್ನಲಾಗಿದೆ. ಇದೇ ಸಂದರ್ಭ ಘಟನೆ ನಡೆದಿದೆ ಎಂದು ದೂರಲಾಗಿದೆ. ಘಟನೆಯ ಬಳಿಕ ಬಾಲಕಿಯ ಹೊಟ್ಟೆ ಭಾಗದಲ್ಲಿ ಗಾಯವಾಗಿರುವುದು ಪತ್ತೆಯಾಗಿದೆ.

ವಿಷಯ ತಿಳಿದ ಬಳಿಕ ಬಾಲಕಿಯನ್ನು ಚಿಕಿತ್ಸೆ ಹಾಗೂ ರಕ್ಷಣೆಯ ದೃಷ್ಟಿಯಿಂದ ಬಾಲಮಂದಿರಕ್ಕೆ ರವಾನಿಸಲಾಗಿದೆ.

ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್‌ 115(2), 109(1) ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

↑
Suddi Belaku