ವೀರಶೈವ ಲಿಂಗಾಯತ ಧರ್ಮದ ತತ್ವಗಳನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು: ಸಿಎಂ ಡಿ.ಕೆ. ಶಿವಕುಮಾರ್

Posted by

–

ಸುದ್ದಿ ಬೆಳಕು ವಾರ್ತೆ

ಬೆಂಗಳೂರು : ಸಕಲರ ಹಿತವನ್ನು ಸದಾ ಬಯಸಿ ಅಮೂಲ್ಯ ವಿಚಾರಧಾರೆಗಳನ್ನು ನೀಡಿದ ಶ್ರೇಯಸ್ಸು ವೀರಶೈವ ಧರ್ಮಕ್ಕಿದೆ. ಮಾನವ ಧರ್ಮದ ಉತ್ಕೃಷ್ಟ ವಿಚಾರಗಳನ್ನು ವೀರಶೈವ ಧರ್ಮ ಪ್ರತಿಪಾದಿಸುತ್ತಿದ್ದು, ಸಾಮಾಜಿಕ ಬದುಕಿಗೆ ವೀರಶೈವ ಧರ್ಮದ ಪಂಚಪೀಠಗಳು ನೀಡಿರುವ ಸಂಸ್ಕಾರ ಮತ್ತು ಸಂಸ್ಕೃತಿಯ ಕೊಡುಗೆ ಅಪಾರವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ನಗರದ ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಭಾನುವಾರ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ವತಿಯಿಂದ ಆಯೋಜಿಸಿದ್ದ ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲ ಧರ್ಮಗಳಲ್ಲಿ ಅಡಗಿರುವ ಪರಮಸತ್ಯ ಒಂದೇ ಆಗಿದ್ದು, ಪ್ರತಿಯೊಬ್ಬರೂ ಅದನ್ನು ಅರಿಯುವ ಅಗತ್ಯವಿದೆ. ಸ್ವಧರ್ಮ ಪಾಲನೆ ಹಾಗೂ ಪರಧರ್ಮ ಸಹಿಷ್ಣುತೆ ಭಾರತೀಯರ ಆದರ್ಶ ಗುಣಗಳಾಗಿವೆ. ವಿವಿಧ ಧರ್ಮಗಳು ಮತ್ತು ಅವುಗಳ ವಿಚಾರಗಳು ಮಾನವ ಜೀವನದ ವಿಕಾಸಕ್ಕೆ ಪೂರಕವಾಗಿವೆ. ಧರ್ಮದ ಆದರ್ಶಗಳನ್ನು ಪಾಲಿಸುವುದೇ ನಿಜವಾದ ಧರ್ಮ ಎಂದು ಹೇಳಿದರು.

ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಸರ್ವಧರ್ಮಗಳ ಸಾರವನ್ನು ಒಳಗೊಂಡ ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಸದಾಶಯ ವ್ಯಕ್ತಪಡಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಶಿವನ ಆಶೀರ್ವಾದದಿಂದ ಜನಿಸಿದ ನನಗೆ ‘ಶಿವಕುಮಾರ್’ ಎಂದು ನಾಮಕರಣ ಮಾಡಲಾಯಿತು. ಬೆಂಗಳೂರಿನ ಶ್ರೀ ಜಗದ್ಗುರು ರೇಣುಕಾಚಾರ್ಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವ ಅವಕಾಶವೂ ದೊರೆಯಿತು ಎಂದು ಸ್ಮರಿಸಿದರು.

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸಂಚರಿಸಿ ಅನೇಕ ಪೂಜ್ಯರ ಆಶೀರ್ವಾದ ಪಡೆದಿದ್ದೇನೆ. ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ ಪಾದಸ್ಪರ್ಶ ಮಾಡಿದಾಗ ನನಗಾದ ಅನುಭವ ಅವರ್ಣನೀಯವಾಗಿದ್ದು, ಅಂದಿನಿಂದ ಅವರ ಆರಾಧಕನಾಗಿ ಬೆಳೆದಿದ್ದೇನೆ ಎಂದು ಹೇಳಿದರು.

ವೀರಶೈವ ಲಿಂಗಾಯತ ಮಠಗಳು ಸಣ್ಣದಾಗಿರಲಿ, ದೊಡ್ಡದಾಗಿರಲಿ, ಅವು ಜನರಿಗೆ ಅನ್ನದಾಸೋಹ ಮತ್ತು ಅಕ್ಷರದಾಸೋಹ ನೀಡುತ್ತಿರುವುದನ್ನು ಯಾರೂ ಮರೆಯಬಾರದು. ವೀರಶೈವ ಧರ್ಮವು ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಮೂಡಿಸಿದ್ದು, ಸರ್ವರಿಗೂ ಸಮಬಾಳು, ಸಮಪಾಲು ಎಂಬ ಸಂದೇಶವನ್ನು ಸಾರಿದೆ. ಧರ್ಮಗಳು ಹಲವಾರಾದರೂ ತತ್ವ ಒಂದೇ, ನಾಮಗಳು ಹಲವಾರಾದರೂ ದೇವರು ಒಬ್ಬನೇ ಎಂಬ ವಿಚಾರವನ್ನು ಅರಿತು ಬದುಕಬೇಕು ಎಂದರು.

ಪಂಚಪೀಠಗಳು ರಾಷ್ಟ್ರೀಯ ಗುರುಪೀಠಗಳಾಗಿವೆ. ಸಮಾಜದಲ್ಲಿ ಶಾಂತಿ, ಸಾಮರಸ್ಯ ಮತ್ತು ಸೌಹಾರ್ದತೆ ಬೆಳೆಸುವ ನಿಟ್ಟಿನಲ್ಲಿ ಅವು ಸದಾ ಶ್ರಮಿಸುತ್ತಿವೆ. ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಪಂಚಪೀಠಗಳ ಮಾರ್ಗದರ್ಶನ ಹಾಗೂ ಆಶೀರ್ವಾದ ಸದಾ ಇರಲಿ ಎಂದು ಆಶಿಸಿದರು.

ಬೆಂಗಳೂರಿಗೆ ಆಗಮಿಸುವ ಸ್ವಾಮೀಜಿಗಳಿಗೆ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಲಾಗಿದೆ. ಇದಕ್ಕಾಗಿ ಜಾಗ ನೀಡಲು ಸಿದ್ಧನಿದ್ದು, ಜಾಗ ನಮ್ಮದು, ಕಟ್ಟಡ ನಿಮ್ಮದು. ಎಲ್ಲರ ಸಹಕಾರದಿಂದ ಕಟ್ಟಡ ನಿರ್ಮಾಣವಾಗಲಿ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ವೀರಶೈವ ಧರ್ಮದ ತತ್ವಗಳನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು

ಸಮ್ಮೇಳನದ ಸಾನ್ನಿಧ್ಯ ವಹಿಸಿದ್ದ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಆಶೀರ್ವಚನ ನೀಡಿ, ವೀರಶೈವ ಧರ್ಮವು ಶಿವಾದ್ವೈತ ಸಿದ್ಧಾಂತದ ತಳಹದಿಯ ಮೇಲೆ ನೆಲೆಗೊಂಡಿದೆ. ಭಕ್ತಿ, ಜ್ಞಾನ, ಆಚಾರ, ವಿಚಾರ ಹಾಗೂ ದಾಸೋಹಗಳನ್ನು ಜೀವನ ಮಾರ್ಗವಾಗಿ ಪ್ರತಿಪಾದಿಸಿದೆ. ಇಂದಿನ ಧರ್ಮ ಸಂರಕ್ಷಣಾ ಸಮ್ಮೇಳನವು ಶ್ರೀ ಜಗದ್ಗುರು ರೇಣುಕಾದಿ ಪಂಚಾಚಾರ್ಯರು ಬೋಧಿಸಿದ ತತ್ವಾದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಪವಿತ್ರ ಸಂಕಲ್ಪವಾಗಿದೆ. ಆಚಾರ್ಯರು ಹಾಗೂ ಶರಣರು ನೀಡಿದ ಆದರ್ಶ ಮತ್ತು ಆಧ್ಯಾತ್ಮಿಕ ಚಿಂತನೆಗಳನ್ನು ಮರೆಯಬಾರದು ಎಂದರು.

ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು ಆಶೀರ್ವಚನ ನೀಡಿ, ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ. ಒಂದು ಸೈದ್ಧಾಂತಿಕ ಪದವಾಗಿದ್ದರೆ, ಮತ್ತೊಂದು ಸಾಮಾಜಿಕವಾಗಿ ರೂಢಿಗೆ ಬಂದಿರುವ ಪದವಾಗಿದೆ. ಇವೆರಡರ ನಡುವೆ ದ್ವಂದ್ವ ಸೃಷ್ಟಿಸದೆ ಸದ್ಭಾವನೆಯಿಂದ ಬದುಕಿ ಶ್ರೇಯಸ್ಸು ಕಾಣಬೇಕು ಎಂದರು.

ಶ್ರೀಶೈಲ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಜಗದ್ಗುರುಗಳು ಮಾತನಾಡಿ, ವೀರಶೈವ ಧರ್ಮದ ಮೂಲ ಬೇರುಗಳನ್ನು ಶಿವಾಗಮಗಳಲ್ಲಿ ಕಾಣಬಹುದು. ಇದರ ಇತಿಹಾಸ ಮತ್ತು ಪರಂಪರೆ ಅತ್ಯಂತ ಪ್ರಾಚೀನವಾದುದು. ಧರ್ಮ, ಸಂಸ್ಕೃತಿ ಹಾಗೂ ಆದರ್ಶಗಳನ್ನು ಬೆಳೆಸುವ ಮಹತ್ಕಾರ್ಯವನ್ನು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಮಾಡುತ್ತಿರುವುದು ಸಂತಸ ತಂದಿದೆ ಎಂದರು.

ಶ್ರೀ ಕಾಶಿ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಜಗದ್ಗುರುಗಳು ಆಶೀರ್ವಚನ ನೀಡಿ, ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಸಿದ್ಧಾಂತ ಶಿಖಾಮಣಿಯಲ್ಲಿ ಜೀವ ಶಿವನಾಗುವ, ನರ ಹರನಾಗುವ ಹಾಗೂ ಭವಿ ಭಕ್ತನಾಗುವ ಸಾಧನಾ ಮಾರ್ಗವನ್ನು ಬೋಧಿಸಲಾಗಿದೆ. ಎಲ್ಲ ಶಿವಾಗಮಗಳ ಸಾರವನ್ನು ಸಿದ್ಧಾಂತ ಶಿಖಾಮಣಿ ಧರ್ಮಗ್ರಂಥದಲ್ಲಿ ಕಾಣಬಹುದು. ಇದೇ ಮಾರ್ಗದಲ್ಲಿ 12ನೇ ಶತಮಾನದ ಶರಣರು ನಡೆದು ಉನ್ನತಿಯನ್ನು ಕಂಡರು ಎಂದರು.

ಆಚಾರ್ಯರು, ಶರಣರು ಧರ್ಮದ ಎರಡು ಕಣ್ಣು: ಈಶ್ವರ ಖಂಡ್ರೆ

ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಸಚಿವ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ಜಾತಿ, ಮತ, ಪಂಥಗಳ ಗಡಿಗಳನ್ನು ಮೀರಿ ಎಲ್ಲ ಸಮುದಾಯಗಳ ಅಭ್ಯುದಯಕ್ಕೆ ಶ್ರಮಿಸಿದ ಧರ್ಮ ವೀರಶೈವ ಲಿಂಗಾಯತ ಧರ್ಮವಾಗಿದೆ. ಆಚಾರ್ಯರು ಮತ್ತು ಶರಣರ ವಿಚಾರಗಳನ್ನು ಸಮೀಕರಿಸಿ ಉತ್ತಮ ಸಮಾಜ ಕಟ್ಟಬೇಕೆಂಬ ಸಂಕಲ್ಪ ನಮ್ಮದು. ಆಚಾರ್ಯರು ಮತ್ತು ಶರಣರು ವೀರಶೈವ ಲಿಂಗಾಯತ ಧರ್ಮದ ಎರಡು ಕಣ್ಣುಗಳಿದ್ದಂತೆ ಎಂದರು.

ಸಣ್ಣ ಕೈಗಾರಿಕಾ ಸಚಿವ ವಿಜಯಾನಂದ ಕಾಶಪ್ಪನವರ್ ವೀರಶೈವ ಲಿಂಗಾಯತ ಧರ್ಮದ ವಿಶಾಲ ಮನೋಭಾವನೆಗಳನ್ನು ಪ್ರತಿಪಾದಿಸಿದರು. ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ವಿಭೂತಿಪುರ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಅಧ್ಯಕ್ಷರಾದ ಸಿಂದಗಿ ಸಾರಂಗಮಠದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿದರು.

ಸಮ್ಮೇಳನದಲ್ಲಿ ಸಂಸ್ಥೆಯ ಗೌರವಾಧ್ಯಕ್ಷರಾದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು, ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 500 ಮಠಾಧೀಶರು ಪಾಲ್ಗೊಂಡಿದ್ದರು.

ಶಿವಗಂಗಾ ಕ್ಷೇತ್ರದ ಡಾ. ಮಲಯಶಾಂತಮುನಿ ಶಿವಾಚಾರ್ಯ ಸ್ವಾಮಿಗಳು ಸ್ವಾಗತಿಸಿದರು. ಹರಪನಹಳ್ಳಿ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳು ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

↑
Suddi Belaku