ಚಟ್ನಳ್ಳಿ–ಗುಂಡಳ್ಳಿ ಕ್ರಾಸ್ ರಸ್ತೆಯಲ್ಲಿ ಜಾಲಿ ಗಿಡಗಳ ಹಾವಳಿ: ವಾಹನ ಸವಾರರಿಗೆ ತೀವ್ರ ತೊಂದರೆ

Posted by

–

ಸುದ್ದಿ ಬೆಳಕು ವಾರ್ತೆ

ಶಹಾಪುರ : ತಾಲೂಕಿನ ಚಟ್ನಳ್ಳಿ ಗ್ರಾಮದಿಂದ ಗುಂಡಳ್ಳಿ ಕ್ರಾಸ್‌ವರೆಗೆ ತೆರಳುವ ರಸ್ತೆಯ ಎರಡೂ ಬದಿಗಳಲ್ಲಿ ಜಾಲಿ ಹಾಗೂ ಮುಳ್ಳಿನ ಗಿಡಗಳು ಬೆಳೆದು, ರಸ್ತೆ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಗಿಡಗಳು ರಸ್ತೆಯ ಭಾಗಕ್ಕೆ ಚಾಚಿಕೊಂಡಿರುವುದರಿಂದ ಎದುರಿನಿಂದ ಬರುವ ವಾಹನಗಳು ಸರಿಯಾಗಿ ಕಾಣದೆ, ವಾಹನ ಸವಾರರು ಅಪಾಯದ ನಡುವೆ ಸಂಚರಿಸುವಂತಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಚಟ್ನಳ್ಳಿ–ಗುಂಡಳ್ಳಿ ಕ್ರಾಸ್ ರಸ್ತೆ ಸುತ್ತಮುತ್ತಲಿನ ಗ್ರಾಮಗಳಿಗೆ ಪ್ರಮುಖ ಸಂಪರ್ಕ ರಸ್ತೆಯಾಗಿದ್ದು, ಪ್ರತಿನಿತ್ಯ ನೂರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ರೈತರು ತಮ್ಮ ಜಮೀನುಗಳಿಗೆ ತೆರಳಲು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಶಹಾಪುರ ಸೇರಿದಂತೆ ವಿವಿಧ ಸ್ಥಳಗಳಿಗೆ ತೆರಳಲು ಈ ರಸ್ತೆಯನ್ನು ಬಳಸುತ್ತಿದ್ದಾರೆ.

ರಸ್ತೆಯ ಎರಡೂ ಬದಿಗಳಲ್ಲಿ ಗಿಡಗಳು ದಟ್ಟವಾಗಿ ಬೆಳೆದಿರುವುದರಿಂದ ರಸ್ತೆಯ ಅಗಲವೂ ಕಡಿಮೆಯಾಗಿದೆ. ಎರಡು ವಾಹನಗಳು ಏಕಕಾಲದಲ್ಲಿ ಎದುರಾದಾಗ ಸವಾರರು ವಾಹನಗಳನ್ನು ಬದಿಗೆ ಸರಿಸಲು ಪರದಾಡುವಂತಾಗಿದೆ. ಅಲ್ಲದೆ, ತಿರುವುಗಳ ಬಳಿ ಜಾಲಿ ಗಿಡಗಳು ದೃಷ್ಟಿಗೆ ಅಡ್ಡಿಯಾಗುತ್ತಿರುವುದರಿಂದ ಎದುರಿನಿಂದ ಬರುವ ವಾಹನಗಳು ಕಾಣದೆ ಅಪಘಾತ ಸಂಭವಿಸುವ ಆತಂಕವೂ ಎದುರಾಗಿದೆ.

ಈ ರಸ್ತೆಯಲ್ಲಿ ಈ ಹಿಂದೆಯೂ ಅಪಘಾತಗಳು ಸಂಭವಿಸಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ. ಹೀಗಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಬದಿಯ ಪರಿಸ್ಥಿತಿಯನ್ನು ಪರಿಶೀಲಿಸಿ, ಬೆಳೆದಿರುವ ಜಾಲಿ ಹಾಗೂ ಮುಳ್ಳಿನ ಗಿಡಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸಲಿ

ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಯತ್ತ ಕೂಡಲೇ ಗಮನಹರಿಸಿ, ರಸ್ತೆ ಬದಿಯಲ್ಲಿರುವ ಜಾಲಿ ಮತ್ತು ಮುಳ್ಳಿನ ಗಿಡಗಳನ್ನು ತೆರವುಗೊಳಿಸಿ, ಅಗತ್ಯ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಅಪಘಾತಗಳು ಸಂಭವಿಸಿದ ಬಳಿಕ ಕ್ರಮ ಕೈಗೊಳ್ಳುವ ಬದಲು ಮುನ್ನೆಚ್ಚರಿಕೆಯಾಗಿ ರಸ್ತೆ ಸ್ವಚ್ಛಗೊಳಿಸಿ, ವಾಹನ ಸವಾರರು, ರೈತರು ಹಾಗೂ ಸಾರ್ವಜನಿಕರು ಸುರಕ್ಷಿತವಾಗಿ ಸಂಚರಿಸಲು ಅನುಕೂಲ ಕಲ್ಪಿಸಬೇಕು. ಸಂಬಂಧಪಟ್ಟ ಇಲಾಖೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

↑
Suddi Belaku