ಜಿಲ್ಲೆಯಲ್ಲಿ ಹೋಮಿಯೋಪತಿ ಚಟುವಟಿಕೆಗಳ ವಿಸ್ತಾರಕ್ಕೆ ಕ್ರಮ : ಶಾಸಕ ತುನ್ನೂರ

Posted by

–

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ನಮ್ಮ ದೇಶದಲ್ಲಿರುವ ಹಲವಾರು ವೈಧ್ಯಕೀಯ ಚಿಕಿತ್ಸಾ ಪದ್ದತಿಗಳಲ್ಲಿ ಒಂದಾದ ಹೋಮಿಯೋಪತಿ ಚಿಕಿತ್ಸೆ ಬಗ್ಗೆ ಜನರಲ್ಲಿ ವಿಶ್ವಾಸ ಹೆಚ್ಚಾಗಿ ಕಂಡು ಬರುತ್ತಿದೆ, ಬರುವ ದಿನಗಳಲ್ಲಿ ಚಟುವಟಿಕೆಗಳ ವಿಸ್ತಾರಕ್ಕೆ ಅಗತ್ಯ ಸಹಾಯ-ಸಹಕಾರ ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಹೇಳಿದರು.

ನಗರದ ಆಯುಷ್ ಜಿಲ್ಲಾಸ್ಪತ್ರೆಯ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ, ಜಿಲ್ಲಾ ಆಯುಷ್ ಇಲಾಖೆಯಿಂದ ಹಮ್ಮಿಕೊಂಡಿದ್ದ ವಿಶ್ವ ಹೋಮಿಯೋಪತಿ ದಿನಾಚರಣೆ ಮತ್ತು ವೈದ್ಯರಿಗೆ ರಾಜ್ಯಮಟ್ಟದ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ನಗರದ ಲುಂಬಿನಿ ಉದ್ಯಾನವನ ಎದುರುಗಡೆ ೪ ಎಕರೆ ಹಾಗೂ ಮನಗನಾಳ ಗ್ರಾಮದ ಹತ್ತಿರ ೯ ಎಕರೆ ಸರ್ಕಾರಿ ಜಮೀನು ಗುರುತಿಸಲಾಗಿದೆ, ಬರುವ ದಿನಗಳಲ್ಲಿ ೫೦ ಬೆಡ್‌ಗಳ ಆಯುಷ್ ಜಿಲ್ಲಾಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಗಮನ ಹರಿಸಲಾಗುವುದು ಎಂದು ತಿಳಿಸಿದರು.

ಜನರು ನಿಮ್ಮ ಆಸ್ಪತ್ರೆಗಳಿಗೆ ಕಡಿಮೆ ಖರ್ಚಿನಲ್ಲಿ ಹಾಗೂ ತಮ್ಮ ರೋಗಗಳಿಗೆ ಪರಿಣಾಮಕಾರಿಯಾದ ಚಿಕಿತ್ಸೆ ಸಿಗುತ್ತದೆ ಎಂಬ ಆಶಾಭಾವನೆಯೊಂದಿಗೆ ಬರುತ್ತಾರೆ, ವೈಧ್ಯರು ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ನೀಡಿ, ಎಲ್ಲರ ವಿಶ್ವಾಸ ಗಳಿಸಿ ಎಂದು ಸಲಹೆ ನೀಡಿದರು, ಹೋಮಿಯೋಪತಿ ಚಿಕಿತ್ಸೆ ಹಾಗೂ ಔಷಧಿಗಳ ಸೇವನೆಯಿಂದ ಜನರ ಶರೀರದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ, ನಿಧಾನವಾಗಿ ರೋಗ ನಿರ್ಮೂಲನೆಯಾಗುತ್ತದೆ, ಕಾರಣ ಎಲ್ಲರಿಗೂ ಸ್ವಲ್ಪ ತಾಳ್ಮೆ ಬೇಕಾಗಿದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಹೋಮಿಯೋಪತಿ ಉಪನಿರ್ದೇಶಕರಾದ ಡಾ. ಪ್ರಸನ್ನ ಹೆಚ್.ಎಸ್ ಮಾತನಾಡಿ, ಈ ಜಿಲ್ಲೆಯಲ್ಲಿ ೧೦ ಹೋಮಿಯೋಪತಿ ಚಿಕಿತ್ಸಾಲಯಗಳು ಕಾರ್ಯ ನಿರ್ವಹಿಸುತ್ತಿವೆ, ಆರೋಗ್ಯ ಕ್ಷೇತ್ರದಲ್ಲಿ ಈ ಭಾಗದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ಸಾಧಿಸುವ ದೃಷ್ಟಿಯಿಂದ ಇಲ್ಲಿನ ವೈಧ್ಯರಿಗೆ ಅಗತ್ಯ ವೈಧ್ಯಕೀಯ ಹೆಚ್ಚಿನ ಮಾಹಿತಿ ಸಿಗಲೀ ಎಂಬ ದೃಷ್ಟಿಯಿಂದ ರಾಜ್ಯಮಟ್ಟದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ, ಅದರ ಲಾಭ ಎಲ್ಲರೂ ಪಡೆದು, ಉತ್ತಮ ಸೇವೆ ಸಲ್ಲಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಜಿಲ್ಲೆಯ ಆಸ್ಪತ್ರೆಗಳಿಗೆ ಸೂಕ್ತ ವೈಧ್ಯಕೀಯ ಔಷಧಿಗಳ ಪೂರೈಕೆಗೆ ನಾವೂ ಕ್ರಮ ಕೈಗೊಂಡಿದ್ದೇವೆ, ಇನ್ನೂ ಹೆಚ್ಚು ಜನರಿಗೆ ಸೇವೆ ಸಲ್ಲಿಸುವ ಚಿಂತನೆಯಿAದ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ, ಅವುಗಳನ್ನು ಪ್ರಾಮಾಣಿಕವಾಗಿ ಅನುಷ್ಟಾನಗೊಳಿಸಲು ಯತ್ನಿಸುತ್ತಿದ್ದೇವೆ ಎಂದು ತಿಳಿಸಿದರು.

ಶಾಸಕ ತುನ್ನೂರ ಅವರು ಹೋಮಿಯೋಪತಿ ಕ್ಯಾಲೆಂಡರ್ ಹಾಗೂ ಕೈಪಿಡಿ ಪುಸ್ತಕ ಬಿಡುಗಡೆ ಮಾಡಿದರು, ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಎಸ್‌ಡಿಎಂ ಧಾರವಾಡ ವೈಧ್ಯಕೀಯ ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ. ಸತೀಶ ಜಿ.ಪಾಟೀಲ್ ಮಾತನಾಡಿ, ತಮ್ಮ ವೈಧ್ಯಕೀಯ ಸೇವಾ ಅವಧಿಯಲ್ಲಿ ಕೈಗೊಂಡ ಸಂಶೋಧನೆಗಳು ಹಾಗೂ ಚಿಕಿತ್ಸಾ ಪದ್ದತಿಗಳನ್ನು ವಿವರಿಸಿದರು.

ಅಧ್ಯಕ್ಷತೆಯನ್ನು ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ. ವಂದನಾ ಜೆ. ಗಾಳಿಯವರು ವಹಿಸಿ, ಮಾತನಾಡಿದರು.
ವೇದಿಕೆ ಮೇಲೆ ಹಿರಿಯ ವೈಧ್ಯಾಧಿಕಾರಿಗಳಾದ ಡಾ. ಅಶ್ವಥ ನಾರಾಯಣ, ಡಾ. ಪ್ರಮೋದ್ ಕುಲಕರ್ಣಿ ಉಪಸ್ಥಿತರಿದ್ದರು.
ಡಾ. ಪ್ರಕಾಶ ರಾಜಾಪೂರ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಕೈಗೊಂಡ ಹೋಮಿಯೋಪತಿ ಚಟುವಟಿಕೆಗಳನ್ನು ವಿವರಿಸಿದರು.
ಡಾ. ಮೀರಾ ಜೋಷಿ ಸ್ವಾಗತಿಸಿದರು, ಡಾ. ಸಂಗಮೇಶ ಕೆಂಭಾವಿ ನಿರೂಪಿಸಿ, ವಂದಿಸಿದರು.
ಕಾರ್ಯಾಗಾರದಲ್ಲಿ ರಾಜ್ಯದ ಎಲ್ಲಾ ಭಾಗಗಳಿಂದ ಆಗಮಿಸಿದ ಹೋಮಿಯೋಪತಿ ವೈಧ್ಯರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

↑
Suddi Belaku