ಯಾದಗಿರಿ: ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಗುರುವಾರ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರು ಗಿರಿಜಿಲ್ಲೆಯ ಜಿಲ್ಲೆಯ ಬರ ಪರಿಸ್ಥಿತಿ, ರೈತರ ಬೆಳೆ ನಷ್ಟ, ಉದ್ಯೋಗಕ್ಕಾಗಿ ವಲಸೆ, ಕುಡಿಯುವ ನೀರಿನ ಸಮಸ್ಯೆ, ಭೀಮಾ ನದಿ ನೀರಿನ ಹಂಚಿಕೆ, ಗ್ರಾಮ ಪಂಚಾಯಿತಿಗಳ ಆರ್ಥಿಕ ಸ್ಥಿತಿ,ಆರ್ ಓ ಘಟಕಗಳ ದುಸ್ಥಿತಿ, ಕಡೇಚೂರು ಕೈಗಾರಿಕಾ ಪ್ರದೇಶದ ಮಾಲಿನ್ಯ ಹಾಗೂ ರೈತರಿಗೆ ವಿದ್ಯುತ್ ಪೂರೈಕೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳನ್ನು ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದರು.
ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ರೈತರು ಮತ್ತು ಬಡವರ ಬದುಕು ಸಂಕಷ್ಟಕ್ಕೆ ಸಿಲುಕಿದೆ ಎಂದು ಹೇಳಿದರು. ವಿಶೇಷವಾಗಿ ಯಾದಗಿರಿ ಜಿಲ್ಲೆ ಮತ್ತು ಗುರುಮಿಟ್ಕಲ್ ಮತಕ್ಷೇತ್ರದ ಪರಿಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಗುರುಮಿಟ್ಕಲ್ ಕ್ಷೇತ್ರದಲ್ಲಿ ಒಂದು, ಎರಡು ಮತ್ತು ಮೂರು ಎಕರೆ ಜಮೀನು ಹೊಂದಿರುವ ಸಣ್ಣ ರೈತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಐದು ಅಥವಾ ಹತ್ತು ಎಕರೆ ಜಮೀನು ಹೊಂದಿರುವ ರೈತರು ಗ್ರಾಮಗಳಲ್ಲಿ ವಿರಳವಾಗಿದ್ದಾರೆ ಎಂದು ಕಂದಕೂರ ಹೇಳಿದರು.
ಈಗಾಗಲೇ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸಣ್ಣ ರೈತರಿಗೆ ಬರ ಮತ್ತಷ್ಟು ಹೊಡೆತ ನೀಡಿದೆ. ಮಳೆ ಕೈಕೊಟ್ಟರೆ ಕೃಷಿಯಿಂದ ಆದಾಯವಿಲ್ಲ, ಸ್ಥಳೀಯವಾಗಿ ಕೆಲಸವೂ ಸಿಗದಿದ್ದರೆ ಬೆಂಗಳೂರು, ಮುಂಬೈ, ಪುಣೆ, ಹೈದರಾಬಾದ್ ಸೇರಿದಂತೆ ದೂರದ ನಗರಗಳಿಗೆ ದುಡಿಯಲು ತೆರಳಬೇಕಾದ ಅನಿವಾರ್ಯತೆ ಎದುರಾಗುತ್ತದೆ ಎಂದು ಹೇಳಿದರು.
ಮಳೆ ಕೊರತೆಯ ಸಾಧ್ಯತೆ ಇರುವುದರಿಂದ ರೈತರು ಬಿತ್ತನೆಗೆ ಆತುರಪಡಬಾರದು ಎಂದು ಕೃಷಿ ಇಲಾಖೆಯಿಂದ ಸೂಚನೆ ನೀಡಲಾಗಿತ್ತು. ಆದರೂ ಬಡತನ ಮತ್ತು ಕೃಷಿಯ ಮೇಲಿನ ನಂಬಿಕೆಯಿಂದ ರೈತರು ಸಾಲ ಮಾಡಿ ಬೀಜ ಹಾಗೂ ಕೃಷಿ ಪರಿಕರಗಳನ್ನು ಖರೀದಿಸಿ ಬಿತ್ತನೆ ಮಾಡಿದ್ದಾರೆ ಎಂದು ಕಂದಕೂರ ವಿವರಿಸಿದರು.ಶೇ. 93ರಿಂದ 95 ಬಿತ್ತನೆ ನಡೆದಿದೆ ಎಂದು ಉಲ್ಲೇಖಿಸಿದ ಅವರು, ನಂತರ ಮಳೆ ಕೈಕೊಟ್ಟ ಪರಿಣಾಮ ರೈತರ ಹೂಡಿಕೆ ನೀರಿನಲ್ಲಿ ಹೋಮವಾದಂತಾಗಿದೆ ಎಂದರು.ಮಳೆ ಕೊರತೆಯಿಂದ ಹೆಸರು ಮತ್ತು ಉದ್ದು ಬೆಳೆಗಳು ಹಾನಿಗೊಳಗಾಗಿದ್ದು, ತೊಗರಿ ಹಾಗೂ ಹತ್ತಿಗೂ ತೀವ್ರ ಪರಿಣಾಮವಾಗಿದೆ. ಭತ್ತದ ಬೆಳೆ ಕೂಡ ಸಂಕಷ್ಟಕ್ಕೆ ಸಿಲುಕಿದೆ ಎಂದು ಹೇಳಿದರು. ಒಂದು ಎಕರೆ, ಎರಡು ಎಕರೆ ಜಮೀನನ್ನೇ ನಂಬಿಕೊಂಡು ಬದುಕುತ್ತಿರುವ ಕುಟುಂಬಗಳಿಗೆ ಬೆಳೆ ನಷ್ಟವಾದರೆ ಪರ್ಯಾಯ ಆದಾಯದ ಮೂಲವೇ ಇಲ್ಲದಂತಾಗುತ್ತದೆ. ಹೀಗಾಗಿ ಬರವನ್ನು ಕೇವಲ ಮಳೆ ಕೊರತೆಯ ದೃಷ್ಟಿಯಿಂದ ನೋಡದೆ, ಗ್ರಾಮೀಣ ಕುಟುಂಬಗಳ ಬದುಕಿನ ಸಮಸ್ಯೆಯಾಗಿ ಸರ್ಕಾರ ಪರಿಗಣಿಸಬೇಕು ಎಂದು ಅಭಿಪ್ರಾಯಪಟ್ಟರು.
ಯಾದಗಿರಿ ರೈಲ್ವೆ ನಿಲ್ದಾಣದಿಂದ ಪ್ರತಿದಿನ ವಲಸೆ
ಯಾದಗಿರಿ ಜಿಲ್ಲೆಯ ಜನರ ವಲಸೆಯ ಪ್ರಮಾಣವನ್ನು ವಿವರಿಸಲು ರೈಲ್ವೆ ನಿಲ್ದಾಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಿಕೊಂಡು ಬಂದಿರುವುದಾಗಿ ಹೇಳಿದ ಕಂದಕೂರ, ಯಾದಗಿರಿ ರೈಲ್ವೆ ನಿಲ್ದಾಣದಿಂದ ಪ್ರತಿದಿನ ಬೆಂಗಳೂರು, ಮುಂಬೈ, ಪುಣೆ, ಹೈದರಾಬಾದ್ ಸೇರಿದಂತೆ ವಿವಿಧ ನಗರಗಳಿಗೆ ನೂರಾರು ಮಂದಿ ಕೂಲಿ ಕೆಲಸಕ್ಕಾಗಿ ತೆರಳುತ್ತಿದ್ದಾರೆ ಎಂದು ತಿಳಿಸಿದರು. ಮುಂಬೈ–ಪುಣೆ ಕಡೆಗೆ ಕೆಲವು ದಿನಗಳಲ್ಲಿ ಸುಮಾರು 600ರಿಂದ 650 ಮಂದಿ, ಬೆಂಗಳೂರಿನತ್ತ ಸುಮಾರು 350ರಿಂದ 400 ಮಂದಿ ತೆರಳುತ್ತಿರುವುದಾಗಿ ಅಂಕಿ-ಅಂಶಗಳನ್ನು ಉಲ್ಲೇಖಿಸಿದರು. ಒಟ್ಟಾರೆ ದಿನನಿತ್ಯ ದೊಡ್ಡ ಸಂಖ್ಯೆಯಲ್ಲಿ ಜಿಲ್ಲೆಯ ಜನರು ಉದ್ಯೋಗ ಅರಸಿ ಹೊರಗೆ ಹೋಗುತ್ತಿದ್ದಾರೆ ಎಂದು ಹೇಳಿದರು.
ತಂದೆ-ತಾಯಿ, ಹೆಂಡತಿ, ಮಕ್ಕಳನ್ನು ಊರಲ್ಲೇ ಬಿಟ್ಟು 10 ಸಾವಿರದಿಂದ 15 ಸಾವಿರ ರೂ. ಆದಾಯಕ್ಕಾಗಿ ದೂರದ ನಗರಗಳಿಗೆ ಹೋಗುವ ಪರಿಸ್ಥಿತಿ ಜಿಲ್ಲೆಯ ಜನರಿಗೆ ಬಂದಿದೆ ಎಂದು ಅವರು ಸದನದ ಗಮನಕ್ಕೆ ತಂದರು.
ದೇಶದ ವಿವಿಧ ಭಾಗಗಳಲ್ಲಿ ಯಾದಗಿರಿಯ ಕಾರ್ಮಿಕರು
ದೇಶದ ಯಾವುದೇ ದೊಡ್ಡ ನಗರಕ್ಕೆ ಹೋದರೂ ಯಾದಗಿರಿ ಜಿಲ್ಲೆ ಹಾಗೂ ಗುರುಮಿಟ್ಕಲ್ ಭಾಗದಿಂದ ಉದ್ಯೋಗಕ್ಕಾಗಿ ಬಂದ ಕಾರ್ಮಿಕರು ಸಿಗುತ್ತಾರೆ. ಇದು ಜಿಲ್ಲೆಯ ಉದ್ಯೋಗ ಮತ್ತು ಆರ್ಥಿಕ ಪರಿಸ್ಥಿತಿಗೆ ಸಾಕ್ಷಿಯಾಗಿದೆ ಎಂದು ಕಂದಕೂರ ಹೇಳಿದರು.
ಸ್ಥಳೀಯವಾಗಿ ಕೃಷಿ ಹಾಗೂ ಉದ್ಯೋಗದ ಅವಕಾಶಗಳು ಬಲವಾಗಿದ್ದರೆ ಜನರು ಕುಟುಂಬಗಳನ್ನು ಬಿಟ್ಟು ನೂರಾರು ಕಿಲೋಮೀಟರ್ ದೂರಕ್ಕೆ ಕೂಲಿ ಕೆಲಸಕ್ಕೆ ತೆರಳಬೇಕಾಗುವುದಿಲ್ಲ ಎಂದು ಅವರು ಪ್ರತಿಪಾದಿಸಿದರು.
e-KYCಗಾಗಿ ಮತ್ತೆ ಊರಿಗೆ ಬರುವ ಸಂಕಷ್ಟ
ಪಡಿತರ ವ್ಯವಸ್ಥೆಯ e-KYC ಪ್ರಕ್ರಿಯೆಯಿಂದ ವಲಸೆ ಕಾರ್ಮಿಕರಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ ಎಂದು ಕಂದಕೂರ ಹೇಳಿದರು.
ಬೆಂಗಳೂರು, ಮುಂಬೈ, ಪುಣೆ ಅಥವಾ ಹೈದರಾಬಾದ್ನಲ್ಲಿ ಕೂಲಿ ಕೆಲಸ ಮಾಡುತ್ತಿರುವವರು e-KYC ಪ್ರಕ್ರಿಯೆಗಾಗಿ ಮತ್ತೆ ಯಾದಗಿರಿಯ ತಮ್ಮ ಊರಿಗೆ ಬರಬೇಕಾಗುತ್ತಿದೆ. ಇದರಿಂದ ಪ್ರಯಾಣ ವೆಚ್ಚದ ಜೊತೆಗೆ ಹಲವು ದಿನಗಳ ಕೂಲಿಯೂ ನಷ್ಟವಾಗುತ್ತಿದೆ ಎಂದು ತಿಳಿಸಿದರು.ಈ ಕುರಿತು ಆಹಾರ ಇಲಾಖೆಯ ಸಚಿವರೊಂದಿಗೆ ಎರಡು ಬಾರಿ ಮಾತನಾಡಿರುವುದಾಗಿ ಹೇಳಿದ ಅವರು, ವಲಸೆ ಕಾರ್ಮಿಕರು ಯಾವ ನಗರದಲ್ಲಿದ್ದಾರೋ ಅಲ್ಲಿಯೇ e-KYC ಪೂರ್ಣಗೊಳಿಸಿಕೊಳ್ಳಲು ವಿಶೇಷ ಆಪ್ ಅಥವಾ ಪರ್ಯಾಯ ತಾಂತ್ರಿಕ ವ್ಯವಸ್ಥೆ ರೂಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಭೀಮಾ ನದಿ ನೀರಿನ ವಿಚಾರ ಪ್ರಸ್ತಾಪ
ರಾಜ್ಯಕ್ಕೆ ಕೃಷ್ಣಾ ಮತ್ತು ಕಾವೇರಿ ನದಿಗಳು ಎಷ್ಟು ಪ್ರಮುಖವೋ, ಕಲ್ಯಾಣ ಕರ್ನಾಟಕದ ಹಲವು ಪ್ರದೇಶಗಳಿಗೆ ಭೀಮಾ ನದಿಯೂ ಅಷ್ಟೇ ಮುಖ್ಯ ಎಂದು ಕಂದಕೂರ ಹೇಳಿದರು.
ಯಾದಗಿರಿ, ಕಲಬುರಗಿ, ವಿಜಯಪುರ ಸೇರಿದಂತೆ ಹಲವು ಭಾಗಗಳು ಕುಡಿಯುವ ನೀರಿಗಾಗಿ ಭೀಮಾ ನದಿಯನ್ನು ಅವಲಂಬಿಸಿವೆ. ಆದರೆ ರಾಜ್ಯಕ್ಕೆ ದೊರೆಯಬೇಕಾದ ನೀರಿನ ಪ್ರಮಾಣ ಸಮರ್ಪಕವಾಗಿ ಸಿಗುತ್ತಿಲ್ಲ ಎಂದು ಅವರು ಹೇಳಿದರು.ಸುಮಾರು 15 ಟಿಎಂಸಿ ನೀರಿನ ವಿಚಾರವನ್ನು ಪ್ರಸ್ತಾಪಿಸಿದ ಕಂದಕೂರ, ಈ ಸಂಬಂಧ ಹಿಂದೆ ಆಯೋಗ ರಚಿಸುವ ಕುರಿತು ಚರ್ಚೆಯಾಗಿದ್ದರೂ ನಿರೀಕ್ಷಿತ ಪ್ರಗತಿ ಆಗಿಲ್ಲ ಎಂದು ಹೇಳಿದರು.ಮಹಾರಾಷ್ಟ್ರದ ಭಾಗದಲ್ಲಿ ಹಲವು ಬ್ರಿಡ್ಜ್ ಕಮ್ ಬ್ಯಾರೇಜ್ಗಳ ಮೂಲಕ ಹೆಚ್ಚಿನ ನೀರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಕಂದಕೂರ ಆರೋಪಿಸಿದರು.
ಅಲ್ಲಿ ಮಳೆ ಹೆಚ್ಚಾದಾಗ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಕೆಳಭಾಗಕ್ಕೆ ನೀರು ಬಿಡುವುದರಿಂದ ರಾಜ್ಯದ ರೈತರಿಗೆ ಪ್ರವಾಹದ ಸಮಸ್ಯೆ ಎದುರಾಗುತ್ತದೆ. ಆದರೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಅಗತ್ಯವಿರುವಾಗ ಸಮರ್ಪಕ ನೀರು ದೊರೆಯುವುದಿಲ್ಲ ಎಂದು ಹೇಳಿದರು.ಹೀಗಾಗಿ ರಾಜ್ಯದ ಪಾಲಿನ ನೀರನ್ನು ಸಂರಕ್ಷಿಸಿಕೊಳ್ಳಲು ಶಾಶ್ವತ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.
ಮಲ್ಟಿ ವಿಲೇಜ್ ಸ್ಕೀಮ್ ಮತ್ತು ಲಿಫ್ಟ್ ಇರಿಗೇಷನ್ಗೂ ಭೀಮಾ ಆಧಾರ
ಭೀಮಾ ನದಿಯನ್ನು ಕೇವಲ ಕೃಷಿ ನೀರಿನ ಮೂಲವಾಗಿ ನೋಡಲು ಸಾಧ್ಯವಿಲ್ಲ. ಜಿಲ್ಲೆಯ ಹಲವು ಮಲ್ಟಿ ವಿಲೇಜ್ ಕುಡಿಯುವ ನೀರಿನ ಯೋಜನೆಗಳು ಹಾಗೂ ಲಿಫ್ಟ್ ಇರಿಗೇಷನ್ ಯೋಜನೆಗಳು ಕೂಡ ಭೀಮಾ ನದಿಯನ್ನು ಅವಲಂಬಿಸಿವೆ ಎಂದು ಕಂದಕೂರ ಹೇಳಿದರು.
ಹೀಗಾಗಿ ಭೀಮಾ ನದಿಯಲ್ಲಿ ನೀರಿನ ಕೊರತೆ ಉಂಟಾದರೆ ಅದರ ಪರಿಣಾಮ ನೇರವಾಗಿ ಗ್ರಾಮಗಳ ಕುಡಿಯುವ ನೀರು ಹಾಗೂ ಕೃಷಿ ಎರಡರ ಮೇಲೂ ಬೀಳುತ್ತದೆ ಎಂದು ವಿವರಿಸಿದರು.
ಭೀಮಾ ನದಿಯಲ್ಲಿ ರಾಜ್ಯದ ಪಾಲಿನ ನೀರನ್ನು ಉಳಿಸಿಕೊಳ್ಳಲು ಅಗತ್ಯವಿರುವ ಕಡೆ ಬ್ರಿಡ್ಜ್ ಕಮ್ ಬ್ಯಾರೇಜ್ಗಳನ್ನು ನಿರ್ಮಿಸುವುದು ಅಥವಾ ಪರ್ಯಾಯ ಶಾಶ್ವತ ನೀರು ಸಂಗ್ರಹ ಯೋಜನೆ ರೂಪಿಸುವುದು ಅಗತ್ಯ ಎಂದು ಕಂದಕೂರ ಒತ್ತಾಯಿಸಿದರು.
ಈ ವಿಷಯವನ್ನು ಸರ್ಕಾರ ಸಾಮಾನ್ಯ ಸಮಸ್ಯೆಯಂತೆ ನೋಡದೆ ಕಲ್ಯಾಣ ಕರ್ನಾಟಕದ ಕುಡಿಯುವ ನೀರಿನ ಭವಿಷ್ಯದ ಪ್ರಶ್ನೆಯಾಗಿ ಪರಿಗಣಿಸಬೇಕು ಎಂದರು.
ಬತ್ತುತ್ತಿರುವ ಬೋರ್ವೆಲ್ಗಳು
ಬರದ ಪರಿಣಾಮ ಗುರುಮಿಟ್ಕಲ್ ಸೇರಿದಂತೆ ಯಾದಗಿರಿ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಬೋರ್ವೆಲ್ಗಳು ಬತ್ತುತ್ತಿವೆ ಎಂದು ಕಂದಕೂರ ಹೇಳಿದರು.ಕುಡಿಯುವ ನೀರು ಪೂರೈಸುವುದೇ ಸ್ಥಳೀಯ ಆಡಳಿತಕ್ಕೆ ಸವಾಲಾಗಿದೆ. ಈಗಾಗಲೇ ಕೊರೆಯಲಾದ ಬೋರ್ವೆಲ್ಗಳ ವೆಚ್ಚ ಪಾವತಿಸುವುದಕ್ಕೂ ಸಮಸ್ಯೆ ಎದುರಾಗುತ್ತಿದೆ ಎಂದು ಹೇಳಿದರು.
1 ಕೋಟಿ ಅನುದಾನ ಸಾಲದು
ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗೆ ನೀಡಲಾಗಿರುವ 1 ಕೋಟಿ ರೂ.ಅನುದಾನ ಜಿಲ್ಲೆಯ ಅಗತ್ಯಗಳಿಗೆ ಸಾಕಾಗುವುದಿಲ್ಲ ಎಂದು ಕಂದಕೂರ ಹೇಳಿದರು.
ಬರದ ತೀವ್ರತೆ ಹೆಚ್ಚಿರುವುದರಿಂದ ಹೊಸ ಬೋರ್ವೆಲ್, ಹಳೆಯ ಬೋರ್ವೆಲ್ ದುರಸ್ತಿ, ಪೈಪ್ಲೈನ್, ಕುಡಿಯುವ ನೀರಿನ ಸಾಗಣೆ ಸೇರಿದಂತೆ ಹಲವು ಕೆಲಸಗಳಿಗೆ ಹೆಚ್ಚುವರಿ ಹಣ ಬೇಕಾಗಿದೆ. ಆದ್ದರಿಂದ ಹೆಚ್ಚಿನ ಅನುದಾನ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಪಂಚಾಯಿತಿಗಳಲ್ಲಿ ಪೈಪ್ ದುರಸ್ತಿಗೂ ಹಣವಿಲ್ಲ
ಗ್ರಾಮ ಪಂಚಾಯಿತಿಗಳ ಆರ್ಥಿಕ ಸ್ಥಿತಿಯನ್ನು ವಿವರಿಸಿದ ಕಂದಕೂರ, ಕೆಲವು ಪಿಡಿಒಗಳು ತಮ್ಮ ಬಳಿ ಬಂದು ಪಂಚಾಯಿತಿಯಲ್ಲಿ ಹಣವಿಲ್ಲ ಎಂದು ಹೇಳುತ್ತಿರುವುದಾಗಿ ಸದನದಲ್ಲಿ ತಿಳಿಸಿದರು.
ಡ್ರೈನ್ ಸ್ವಚ್ಛಗೊಳಿಸಲು, ಪೈಪ್ಲೈನ್ ಒಡೆದರೆ ದುರಸ್ತಿ ಮಾಡಲು ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ನಿರ್ವಹಿಸಲು ಸಹ ಹಣವಿಲ್ಲದ ಸ್ಥಿತಿ ಇದೆ ಎಂದು ಹೇಳಿದರು.
ಪಂಚಾಯಿತಿಗಳಲ್ಲಿ ಹಣವಿಲ್ಲದ ಕಾರಣ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಕಂದಕೂರ ಸದನದಲ್ಲಿ ವಿವರಿಸಿದರು.
10 ಲಕ್ಷ ರೂ.ಇದೆ ಎಂಬ ಮಾಹಿತಿಗೆ ಆಕ್ಷೇಪ
ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 10 ಲಕ್ಷ ರೂ.ಲಭ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದನ್ನು ಉಲ್ಲೇಖಿಸಿದ ಕಂದಕೂರ, ಆ ಮಾಹಿತಿಗೆ ಆಕ್ಷೇಪ ವ್ಯಕ್ತಪಡಿಸಿದರು.
ತಾವು ಯಾದಗಿರಿ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಹಣಕಾಸಿನ ಪಟ್ಟಿಯನ್ನು ಪಡೆದುಕೊಂಡಿದ್ದು, ತಮ್ಮ ಮಾಹಿತಿಯ ಪ್ರಕಾರ ಯಾವುದೇ ಪಂಚಾಯಿತಿಯಲ್ಲಿ 2 ಲಕ್ಷ ರೂ.ಕ್ಕಿಂತ ಹೆಚ್ಚಿನ ಲಭ್ಯ ಹಣವಿಲ್ಲ ಎಂದು ಹೇಳಿದರು.
ಸರ್ಕಾರ ಮತ್ತು ಸಚಿವರಿಗೆ ಅಧಿಕಾರಿಗಳು ತಪ್ಪು ಮಾಹಿತಿ ನೀಡಬಾರದು. ವಾಸ್ತವ ಸ್ಥಿತಿಯನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿದರು
ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಯೊಂದಿಗೆ RO ಘಟಕಗಳ ಸ್ಥಿತಿಯನ್ನೂ ಕಂದಕೂರ ಪ್ರಸ್ತಾಪಿಸಿದರು.
ಯಾದಗಿರಿ ಜಿಲ್ಲೆಯಲ್ಲಿ ಸುಮಾರು 650 RO ಘಟಕಗಳಿದ್ದು, ಅವುಗಳಲ್ಲಿ 450ಕ್ಕೂ ಹೆಚ್ಚು ಘಟಕಗಳು ಸ್ಕ್ರಾಪ್ ಆಗಿವೆ ಅಥವಾ ದುರಸ್ತಿಯ ಅಗತ್ಯದಲ್ಲಿವೆ ಎಂದು ಅವರು ಸದನದಲ್ಲಿ ಹೇಳಿದರು.
ಈ ಘಟಕಗಳ ದುರಸ್ತಿಗೆ ಅನುದಾನ ನೀಡುವಂತೆ ಹಿಂದೆಯೂ ಹಲವು ಬಾರಿ ಮನವಿ ಮಾಡಿದ್ದರೂ ನಿರೀಕ್ಷಿತ ಕ್ರಮವಾಗಿಲ್ಲ ಎಂದು ಆರೋಪಿಸಿದರು.
ನೀರಾವರಿಯಿಂದ ವಂಚಿತ ಗುರುಮಿಟ್ಕಲ್
ಗುರುಮಿಟ್ಕಲ್ ಮತಕ್ಷೇತ್ರವು ನೀರಾವರಿ ಸೌಲಭ್ಯದಿಂದ ಹೆಚ್ಚಿನ ಪ್ರಮಾಣದಲ್ಲಿ ವಂಚಿತವಾಗಿರುವ ಪ್ರದೇಶಗಳಲ್ಲಿ ಒಂದಾಗಿದೆ ಎಂದು ಕಂದಕೂರ ಹೇಳಿದರು.
ಬಹುತೇಕ ಪ್ರದೇಶ ಒಣಭೂಮಿಯಾಗಿದ್ದು, ಮಳೆಯನ್ನೇ ನಂಬಿಕೊಂಡು ಕೃಷಿ ನಡೆಯುತ್ತಿದೆ. ಮಳೆ ಕೈಕೊಟ್ಟ ವರ್ಷದಲ್ಲಿ ರೈತರಿಗೆ ಬೇರೆ ಆಯ್ಕೆಯೇ ಉಳಿಯುವುದಿಲ್ಲ ಎಂದು ತಿಳಿಸಿದರು.
ಕಡೇಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದ ಸಮಸ್ಯೆ
ಗುರುಮಿಟ್ಕಲ್ ಕ್ಷೇತ್ರದಲ್ಲಿರುವ ಕಡೇಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದ ಪರಿಸರ ಸಮಸ್ಯೆಯನ್ನು ಕಂದಕೂರ ಗಂಭೀರವಾಗಿ ಪ್ರಸ್ತಾಪಿಸಿದರು.
ಕೈಗಾರಿಕಾ ಪ್ರದೇಶದ ಸುತ್ತಮುತ್ತ ಬೋರ್ವೆಲ್ ಕೊರೆಯಿಸಿದಾಗ ನೀರಿನಲ್ಲಿ ರಾಸಾಯನಿಕ ಅಂಶಗಳು ಕಂಡುಬರುತ್ತಿವೆ ಎಂದು ಅವರು ಆರೋಪಿಸಿದರು.
ಸುಮಾರು 12 ಬೋರ್ವೆಲ್ಗಳ ನೀರಿನಲ್ಲಿ ರಾಸಾಯನಿಕ ಮಾಲಿನ್ಯ ಕಂಡುಬಂದಿದೆ ಎಂದು ತಮ್ಮ ಭಾಷಣದಲ್ಲಿ ಹೇಳಿದ ಅವರು, ಈ ಬಗ್ಗೆ ಸರ್ಕಾರ ತುರ್ತಾಗಿ ವೈಜ್ಞಾನಿಕ ಪರಿಶೀಲನೆ ನಡೆಸಬೇಕೆಂದು ಒತ್ತಾಯಿಸಿದರು.
ರಾಯಚೂರು ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ವರದಿಯನ್ನು ಕಂದಕೂರ ಸದನದಲ್ಲಿ ಉಲ್ಲೇಖಿಸಿದರು.
ಕೈಗಾರಿಕಾ ಪ್ರದೇಶದಿಂದ ಹೊರಸೂಸಲ್ಪಟ್ಟ ಅನಿಲ ಅಥವಾ ಕಣರೂಪದ ಪದಾರ್ಥಗಳು ಹತ್ತಿ ಗಿಡಗಳ ಮೇಲೆ ಬಿದ್ದಿರುವ ಸಾಧ್ಯತೆ ಇದ್ದು, ಶೇಕಡಾ 50ಕ್ಕಿಂತ ಹೆಚ್ಚಿನ ಹತ್ತಿ ಗಿಡಗಳ ಎಲೆಗಳಲ್ಲಿ ಹಳದಿ ಬಣ್ಣ ಹಾಗೂ ಕ್ಲೋರೋಸಿಸ್ ಲಕ್ಷಣಗಳು ಕಂಡುಬಂದಿವೆ ಎಂಬ ಅಂಶವನ್ನು ವರದಿಯಿಂದ ಓದಿ ಹೇಳಿದರು.
ದೊಡ್ಡ ಮರಗಳ ಮೇಲೂ ಇದೇ ರೀತಿಯ ಪರಿಣಾಮ ಕಂಡುಬಂದಿರುವುದಾಗಿ ವರದಿಯಲ್ಲಿ ಉಲ್ಲೇಖವಾಗಿದೆ ಎಂದು ತಿಳಿಸಿದರು.
ಕಡೇಚೂರು ಕೈಗಾರಿಕಾ ಪ್ರದೇಶದ ಸಮಸ್ಯೆ ಕುರಿತು ಮಾತನಾಡುವ ವೇಳೆ, ಕಳೆದ ತಿಂಗಳು ರಾಸಾಯನಿಕ ಕಾರ್ಖಾನೆಯ ಸೋರಿಕೆಗೆ ಸಂಬಂಧಿಸಿದ ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಕಂದಕೂರ ಸದನದಲ್ಲಿ ಉಲ್ಲೇಖಿಸಿದರು.
ಈ ಘಟನೆ ಮತ್ತು ಪರಿಸರ ಮಾಲಿನ್ಯದ ಕುರಿತು ಸಮಗ್ರ ತನಿಖೆ ನಡೆಸಿ ಜನರ ಸುರಕ್ಷತೆಯನ್ನು ಖಚಿತಪಡಿಸಬೇಕು ಎಂದು ಒತ್ತಾಯಿಸಿದರು.
ಕೈಗಾರಿಕಾ ಮಾಲಿನ್ಯದಿಂದ ಸುತ್ತಮುತ್ತಲಿನ ಗ್ರಾಮಗಳ ಜನರ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತಿದೆ ಎಂಬ ಸ್ಥಳೀಯರ ಆತಂಕವನ್ನು ತಾವು ಹಿಂದಿನ ಅಧಿವೇಶನಗಳಿಂದಲೂ ಸರ್ಕಾರದ ಗಮನಕ್ಕೆ ತರುತ್ತಿರುವುದಾಗಿ ಕಂದಕೂರ ಹೇಳಿದರು.
ಗರ್ಭಿಣಿಯರು, ಮಕ್ಕಳು ಹಾಗೂ ಸ್ಥಳೀಯ ನಿವಾಸಿಗಳ ಆರೋಗ್ಯ ಮತ್ತು ಕುಡಿಯುವ ನೀರಿನ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಹಾಗೂ ಪರಿಸರ ಇಲಾಖೆಗಳ ಮೂಲಕ ವೈಜ್ಞಾನಿಕ ಪರಿಶೀಲನೆ ನಡೆಸಬೇಕು ಎಂಬುದು ಅವರ ಒತ್ತಾಯವಾಗಿತ್ತು.
2023ರಲ್ಲಿ ಶಾಸಕನಾಗಿ ಆಯ್ಕೆಯಾದ ನಂತರದಿಂದ ಬಹುತೇಕ ಪ್ರತಿಯೊಂದು ಅಧಿವೇಶನದಲ್ಲೂ ಕಡೇಚೂರು ಕೈಗಾರಿಕಾ ಪ್ರದೇಶದ ಮಾಲಿನ್ಯದ ಸಮಸ್ಯೆಯನ್ನು ಪ್ರಸ್ತಾಪಿಸುತ್ತಿದ್ದೇನೆ ಎಂದು ಕಂದಕೂರ ಹೇಳಿದರು.
ಮುಖ್ಯಮಂತ್ರಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು, ಮುಖ್ಯ ಕಾರ್ಯದರ್ಶಿ, ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳ ಗಮನಕ್ಕೂ ವಿಷಯ ತಂದಿರುವುದಾಗಿ ಹೇಳಿದರು. ಆದರೂ ಸಮರ್ಪಕ ಕ್ರಮವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರಿಗೆ ಏಳು ಗಂಟೆ ತ್ರಿಫೇಸ್ ವಿದ್ಯುತ್ ಬೇಕು
ಕೃಷಿ ಪಂಪ್ಸೆಟ್ಗಳಿಗೆ ರೈತರಿಗೆ ಏಳು ಗಂಟೆ ತ್ರಿಫೇಸ್ ವಿದ್ಯುತ್ ನೀಡಬೇಕು ಎಂದು ಕಂದಕೂರ ಇಂಧನ ಇಲಾಖೆಯನ್ನು ಒತ್ತಾಯಿಸಿದರು.
ತಮ್ಮ ಕ್ಷೇತ್ರದ ವಿದ್ಯುತ್ ಸಮಸ್ಯೆ ಕುರಿತು ಇಂಧನ ಸಚಿವರು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಹಲವು ಬಾರಿ ಸಂಪರ್ಕಿಸಿರುವುದಾಗಿ ತಿಳಿಸಿದರು.ಏಳು ಗಂಟೆ ವಿದ್ಯುತ್ ನೀಡಲಾಗುತ್ತಿದೆ ಎಂದು ಹೇಳಿದರೂ ಆ ಅವಧಿಯಲ್ಲಿ ನಿರಂತರ ಪೂರೈಕೆ ಇರುವುದಿಲ್ಲ. ಪದೇ ಪದೇ ವಿದ್ಯುತ್ ಕಡಿತವಾಗುವುದರಿಂದ ರೈತರಿಗೆ ಸಮರ್ಪಕವಾಗಿ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಕಂದಕೂರ ಹೇಳಿದರು.
ಕಂಬ, ತಂತಿ, ಟ್ರಾನ್ಸ್ಫಾರ್ಮರ್ ಹಾಗೂ ಸಿಬ್ಬಂದಿ ಕೊರತೆಯಂತಹ ಮೂಲಸೌಕರ್ಯ ಸಮಸ್ಯೆಗಳನ್ನೂ ಸರ್ಕಾರ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಟ್ರಾನ್ಸ್ಫಾರ್ಮರ್ ಸುಟ್ಟರೆ ಅದನ್ನು ದುರಸ್ತಿ ಮಾಡಿ ರೈತರಿಗೆ ಮರಳಿ ನೀಡಲು 20ರಿಂದ 25 ದಿನಗಳವರೆಗೆ ಸಮಯ ತೆಗೆದುಕೊಳ್ಳುತ್ತಿದೆ ಎಂದು ಕಂದಕೂರ ಆರೋಪಿಸಿದರು.
ಟ್ರಾನ್ಸ್ಫಾರ್ಮರ್ ಪಡೆಯಲು ರೈತರಿಂದ ಹಣ ಕೇಳಿದ ಪ್ರಕರಣಗಳಲ್ಲಿ ಇಬ್ಬರು ಅಧಿಕಾರಿಗಳ ವಿರುದ್ಧ ಅಮಾನತು ಕ್ರಮ ಕೈಗೊಳ್ಳಿಸಿರುವುದಾಗಿಯೂ ಅವರು ಸದನದಲ್ಲಿ ಹೇಳಿದರು.ಟ್ರಾನ್ಸ್ಫಾರ್ಮರ್ಗಳು ಪದೇ ಪದೇ ಸುಡುತ್ತಿರುವ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದಾಗ, ದುರಸ್ತಿ ಕಾರ್ಯಕ್ಕೆ ಸರ್ಕಾರದಿಂದ ಸಮರ್ಪಕ ಹಣ ಬಿಡುಗಡೆಯಾಗದಿರುವುದು ಸಮಸ್ಯೆಗೆ ಕಾರಣ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಕಂದಕೂರ ಹೇಳಿದರು.
ಸರಿಯಾದ ದುರಸ್ತಿ ಆಗದೆ ಮತ್ತೆ ಮತ್ತೆ ಟ್ರಾನ್ಸ್ಫಾರ್ಮರ್ ಸುಡುವುದರಿಂದ ಅಂತಿಮವಾಗಿ ರೈತರೇ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಬರದ ತೀವ್ರತೆಯ ವರ್ಗೀಕರಣದ ವಿಚಾರ
ಯಾದಗಿರಿ ಜಿಲ್ಲೆಯ ಬರ ಪರಿಸ್ಥಿತಿಯ ಕುರಿತು ಮಾತನಾಡಿದ ಕಂದಕೂರ, ಜಿಲ್ಲೆಯ ತಾಲೂಕುಗಳ ಬರದ ತೀವ್ರತೆಯನ್ನು ನೆಲಮಟ್ಟದ ವಾಸ್ತವ ಸ್ಥಿತಿಗೆ ಅನುಗುಣವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಕೆಲವೆಡೆ ಆರಂಭಿಕವಾಗಿ ಮಧ್ಯಮ ಮಟ್ಟದ ಬರ ಎಂದು ಪರಿಗಣಿಸಲಾಗಿದ್ದರೂ, ಗ್ರೌಂಡ್ ಟ್ರೂಥಿಂಗ್ ವೇಳೆ ಪರಿಸ್ಥಿತಿ ಗಂಭೀರವಾಗಿದೆ ಎಂಬ ಅಂಶಗಳು ಹೊರಬಂದಿವೆ ಎಂದು ಅವರು ಭಾಷಣದಲ್ಲಿ ಉಲ್ಲೇಖಿಸಿದರು.ಜನರ ಬದುಕು ಕಟ್ಟಲು ನಮ್ಮನ್ನು ಕಳುಹಿಸಿದ್ದಾರೆ
ರಾಜಕೀಯಆರೋಪ-ಪ್ರತ್ಯಾರೋಪಗಳಿಗಿಂತ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಮುಖ್ಯ ಎಂದು ಕಂದಕೂರ ಹೇಳಿದರು.
ಬರದಿಂದ ಬೆಳೆ ಕಳೆದುಕೊಂಡ ರೈತರಿಗೆ ನೆರವು, ಗ್ರಾಮಗಳಿಗೆ ಕುಡಿಯುವ ನೀರು, ಭೀಮಾ ನದಿಯ ನೀರಿನ ಸಂರಕ್ಷಣೆ, ಗ್ರಾಮ ಪಂಚಾಯಿತಿಗಳಿಗೆ ಅಗತ್ಯ ಅನುದಾನ, ಕೆಟ್ಟು ನಿಂತ ಆರ್ ಒ ಘಟಕಗಳ ದುರಸ್ತಿ, ಕಡೇಚೂರು ಕೈಗಾರಿಕಾ ಪ್ರದೇಶದ ಮಾಲಿನ್ಯದ ಸಮಗ್ರ ಪರಿಶೀಲನೆ ಹಾಗೂ ರೈತರಿಗೆ ನಿರಂತರ ಏಳು ಗಂಟೆ ತ್ರಿಫೇಸ್ ವಿದ್ಯುತ್ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಸಿಎಂ ಡಿಕೆಶಿ ಮಾತಿಗೆ ಚಾಟಿ ಬೀಸಿದ ಶಾಸಕ ಕಂದಕೂರ
ಕಲಬುರಗಿ ಕಡೆಯ ಒಬ್ಬ ಲೀಡರ್ ಗಾಂಧಿಗೆ ಅಪ್ಪಿಕೊಂಡಿದ್ದಾರೆ ಎಂಬ
ಸಿಎಂ ಡಿ.ಕೆ.ಶಿವಕುಮಾರ ಮಾತಿಗೆ ಕಡಕ್ ಆಗಿಯೇ ಚಾಟಿ ಬೀಸಿದ ಶಾಸಕ ಕಂದಕೂರ, ಹಾಲಿ ಎಐಸಿಸಿ ಅಧ್ಯಕ್ಷರು ಗೆದ್ದು ಬಂದಿರುವ ಯಾದಗಿರಿ ಜಿಲ್ಲೆಯ ಗುರುಮಠಕಲ್ ಕ್ಷೇತ್ರದ ಶಾಸಕನು ನಾನು. ದೇಶದ 140 ಕೋಟಿ ಜನರು ಗಾಂಧಿಜೀ ಅವರನ್ನು ಅಪ್ಪಿಕೊಳ್ಳುತ್ತಾರೆ. ನಾನು ಅಪ್ಪಿಕೊಂಡು ಪ್ರತಿಮೆ ಎದುರು ಧರಣಿ ಮಾಡಿದ್ದರಿಂದಲ್ಲೇ ಯಾದಗಿರಿ ಜಿಲ್ಲೆಯ ಉಳಿದ ಐದು ತಾಲೂಕುಗಳು ಬರದ ಪಟ್ಟಿಗೆ ಸೇರಿದ್ದಿರಿ ಎಂಬುವುದು ಮರೆಯಬೇಡಿ ಎಂದು ಕುಟುಕಿದರು.
Leave a Reply