
ಸುದ್ದಿ ಬೆಳಕು ವಾರ್ತೆ
ಗುರುಮಠಕಲ್ : ತಾಲೂಕಿನ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಗುರುವಾರ ಬೆಳಗ್ಗೆ ವಿದ್ಯುತ್ ವ್ಯತ್ಯಯ ಉಂಟಾದ ಪರಿಣಾಮ 10ನೇ ತರಗತಿ ವಿದ್ಯಾರ್ಥಿಗಳ ಎಸ್1 ಪರೀಕ್ಷೆ ನಡೆಸಲು ತೀವ್ರ ತೊಂದರೆ ಎದುರಾಯಿತು. ನಿಗದಿತ ಸಮಯಕ್ಕೆ ಪ್ರಶ್ನೆಪತ್ರಿಕೆ ಡೌನ್ಲೋಡ್ ಆಗದೆ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗಳಲ್ಲಿ ಕೆಲಕಾಲ ಕಾಯುವಂತಾಯಿತು.
10ನೇ ತರಗತಿ ವಿದ್ಯಾರ್ಥಿಗಳಿಗೆ ಎಸ್1 ಪರೀಕ್ಷೆ ನಡೆಯುತ್ತಿದ್ದು, ಗುರುವಾರ ವಿಜ್ಞಾನ ವಿಷಯದ ಪರೀಕ್ಷೆ ನಿಗದಿಯಾಗಿತ್ತು. ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಶಿಕ್ಷಣ ಇಲಾಖೆ ನಿಗದಿಪಡಿಸಿದ ಸಮಯದಲ್ಲಿ ಆನ್ಲೈನ್ ಮೂಲಕ ಡೌನ್ಲೋಡ್ ಮಾಡಬೇಕಾಗಿತ್ತು. ಬೆಳಗ್ಗೆ 9.15ರ ವೇಳೆಗೆ ಪ್ರಶ್ನೆಪತ್ರಿಕೆ ಡೌನ್ಲೋಡ್ ಮಾಡಬೇಕಿದ್ದ ಸಂದರ್ಭದಲ್ಲಿ ತಾಲೂಕಿನ ಹಲವು ಗ್ರಾಮಗಳ ಶಾಲೆಗಳಲ್ಲಿ ವಿದ್ಯುತ್ ಸಂಪರ್ಕ ಇರಲಿಲ್ಲ.
ಪರೀಕ್ಷೆ ಆರಂಭಿಸುವ ಸಮಯ ಸಮೀಪಿಸುತ್ತಿದ್ದರೂ ವಿದ್ಯುತ್ ಇಲ್ಲದ ಕಾರಣ ಆನ್ಲೈನ್ ಮೂಲಕ ಪ್ರಶ್ನೆಪತ್ರಿಕೆ ಪಡೆಯಲು ಸಾಧ್ಯವಾಗಲಿಲ್ಲ. ಇದರಿಂದ ಪರೀಕ್ಷೆಗೆ ಸಿದ್ಧರಾಗಿ ಶಾಲೆಗೆ ಆಗಮಿಸಿದ್ದ ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಗಾಗಿ ಕಾಯುತ್ತಾ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಯಿತು. ಪರೀಕ್ಷೆ ಯಾವಾಗ ಆರಂಭವಾಗಲಿದೆ ಎಂಬ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಆತಂಕಕ್ಕೆ ಒಳಗಾದರು.
ಪ್ರಶ್ನೆಪತ್ರಿಕೆಗಾಗಿ ಶಿಕ್ಷಕರ ಪರದಾಟ
ವಿದ್ಯುತ್ ಸಮಸ್ಯೆ ಮುಂದುವರಿದ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಲು ಪರ್ಯಾಯ ವ್ಯವಸ್ಥೆ ಕಲ್ಪಿಸುವ ಅನಿವಾರ್ಯತೆ ಶಿಕ್ಷಕರಿಗೆ ಎದುರಾಯಿತು. ಕೆಲ ಶಾಲೆಗಳ ಶಿಕ್ಷಕರು ಪ್ರಶ್ನೆಪತ್ರಿಕೆ ಪಡೆಯಲು ಯಾದಗಿರಿ ಹಾಗೂ ನಾರಾಯಣಪೇಟೆ ಕಡೆಗೆ ತೆರಳಿದರು. ಅಲ್ಲಿ ಪ್ರಶ್ನೆಪತ್ರಿಕೆಗಳ ಝೆರಾಕ್ಸ್ ಪ್ರತಿಗಳನ್ನು ಪಡೆದುಕೊಂಡು ಶಾಲೆಗಳಿಗೆ ಮರಳಿದರು.
ಪ್ರಶ್ನೆಪತ್ರಿಕೆಗಳ ಪ್ರತಿಗಳನ್ನು ಪಡೆದು ತರುವ ಪ್ರಕ್ರಿಯೆ, ವಿದ್ಯಾರ್ಥಿಗಳಿಗೆ ವಿತರಿಸಲು ಅಗತ್ಯ ಸಿದ್ಧತೆ ಸೇರಿದಂತೆ ಹಲವು ಕಾರಣಗಳಿಂದ ಪರೀಕ್ಷೆ ನಿಗದಿತ ಸಮಯಕ್ಕೆ ಆರಂಭವಾಗಲಿಲ್ಲ. ಕೊನೆಗೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಪರೀಕ್ಷೆ ಆರಂಭಿಸಲಾಯಿತು. ಬೆಳಗ್ಗೆಯಿಂದಲೇ ಪರೀಕ್ಷೆಗಾಗಿ ಸಿದ್ಧರಾಗಿದ್ದ ವಿದ್ಯಾರ್ಥಿಗಳು ಹಲವು ಗಂಟೆಗಳ ಕಾಲ ಕಾಯಬೇಕಾಯಿತು.
ಗ್ರಾಮೀಣ ವಿದ್ಯಾರ್ಥಿಗಳಿಗೇ ಹೆಚ್ಚು ಸಂಕಷ್ಟ
ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆಯ ಸಂದರ್ಭದಲ್ಲಿ ಇಂತಹ ತಾಂತ್ರಿಕ ಹಾಗೂ ಮೂಲಸೌಕರ್ಯ ಸಮಸ್ಯೆಗಳನ್ನು ಎದುರಿಸುವಂತಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಪರೀಕ್ಷೆಯ ಪ್ರಶ್ನೆಪತ್ರಿಕೆ ಆನ್ಲೈನ್ ಮೂಲಕ ನಿಗದಿತ ಸಮಯಕ್ಕೆ ಡೌನ್ಲೋಡ್ ಮಾಡುವ ವ್ಯವಸ್ಥೆ ಇದ್ದಾಗ, ವಿದ್ಯುತ್ ವ್ಯತ್ಯಯ ಉಂಟಾದರೆ ಪರ್ಯಾಯ ವ್ಯವಸ್ಥೆ ತಕ್ಷಣವೇ ಲಭ್ಯವಾಗುವಂತೆ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕಾಗಿದೆ ಎಂಬ ಒತ್ತಾಯ ಕೇಳಿಬಂದಿದೆ.
ಪರೀಕ್ಷಾ ವೇಳಾಪಟ್ಟಿಯಂತೆ ವಿದ್ಯಾರ್ಥಿಗಳು ಬೆಳಗ್ಗೆಯೇ ಶಾಲೆಗೆ ಆಗಮಿಸಿದ್ದರು. ಆದರೆ ವಿದ್ಯುತ್ ವ್ಯತ್ಯಯದಿಂದ ಪರೀಕ್ಷೆ ಆರಂಭವಾಗದೆ ಕಾಯಬೇಕಾಯಿತು. ಇದರಿಂದ ವಿದ್ಯಾರ್ಥಿಗಳ ಸಮಯ ವ್ಯರ್ಥವಾಗುವುದರ ಜತೆಗೆ ಪರೀಕ್ಷೆಯ ವಾತಾವರಣದಲ್ಲೂ ಗೊಂದಲ ಉಂಟಾಯಿತು.
ಮುಂದಿನ ದಿನಗಳಲ್ಲಿ ಎಸ್ಎಸ್ಎಲ್ಸಿ ಸೇರಿದಂತೆ ಪ್ರಮುಖ ಪರೀಕ್ಷೆಗಳು ನಡೆಯುವ ಸಂದರ್ಭದಲ್ಲಿ ಇಂತಹ ಸಮಸ್ಯೆಗಳು ಎದುರಾಗದಂತೆ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಬೇಕು. ಅಗತ್ಯವಿದ್ದಲ್ಲಿ ಪರ್ಯಾಯ ವಿದ್ಯುತ್ ವ್ಯವಸ್ಥೆ ಹಾಗೂ ಪ್ರಶ್ನೆಪತ್ರಿಕೆ ಲಭ್ಯತೆಯ ಪರ್ಯಾಯ ಮಾರ್ಗಗಳನ್ನು ಮುಂಚಿತವಾಗಿ ಸಿದ್ಧಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
10ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆ ನಡೆಯುವ ಸಂದರ್ಭದಲ್ಲಿ ವಿದ್ಯುತ್ ಇಲ್ಲದ ಕಾರಣ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಅನಗತ್ಯ ತೊಂದರೆ ಉಂಟಾಗಿದೆ. ಪರೀಕ್ಷೆಯಂತಹ ಪ್ರಮುಖ ಸಂದರ್ಭದಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ವಿದ್ಯುತ್ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ಪರೀಕ್ಷೆಗಳಲ್ಲಿ ಇಂತಹ ಸಮಸ್ಯೆಗಳು ಮರುಕಳಿಸದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು.
–ಅನಂತಪ್ಪ ಯದ್ಲಾಪೂರ,
ಮುಖಂಡರು, ಗುರುಮಠಕಲ್
ವಿದ್ಯುತ್ ವ್ಯತ್ಯಯದಿಂದಾಗಿ ಪ್ರಶ್ನೆಪತ್ರಿಕೆ ಡೌನ್ಲೋಡ್ ಮಾಡಲು ತೊಂದರೆಯಾಗಿರುವ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುವುದು. ಪರೀಕ್ಷಾ ವೇಳಾಪಟ್ಟಿಯಂತೆ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತದೆ. ಮುಂದಿನ ಪರೀಕ್ಷೆಗಳಲ್ಲಿ ಇಂತಹ ಸಮಸ್ಯೆ ಮರುಕಳಿಸದಂತೆ ಸಂಬಂಧಪಟ್ಟ ಶಾಲೆಗಳಿಗೆ ಅಗತ್ಯ ಸೂಚನೆ ನೀಡಲಾಗುವುದು.
—ವೀರಪ್ಪ ಕನ್ನಳ್ಳಿ.
ಯಾದಗಿರಿ &ಗುರುಮಠಕಲ್ ಶಿಕ್ಷಣ ಇಲಾಖೆ ಅಧಿಕಾರಿ
Leave a Reply