ಮೈಲಾಪುರ ಹೊನ್ನಕೇರಿಯಲ್ಲಿ ವ್ಯಕ್ತಿ ಮುಳುಗಿ ಸಾವು: ಯಾದಗಿರಿ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ತಾಲ್ಲೂಕಿನ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಮೈಲಾಪುರದ ಮಲ್ಲಯ್ಯನ ದರ್ಶನಕ್ಕೆ ಕುಟುಂಬ ಸಮೇತ ಆಗಮಿಸಿದ್ದ ವ್ಯಕ್ತಿಯೊಬ್ಬರು ಹೊನ್ನಕೇರಿಯಲ್ಲಿ ಸ್ನಾನಕ್ಕೆ ಇಳಿದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.

ತೆಲಂಗಾಣ ರಾಜ್ಯದ ತಾಂಡೂರು ಮೂಲದ ಲಾಲಪ್ಪ ತಂದೆ ಬೂಗಪ್ಪ (45) ಮೃತಪಟ್ಟವರು. ಭಾನುವಾರ ವಿಶೇಷ ದಿನವಾಗಿದ್ದರಿಂದ ಮೈಲಾಪುರ ಮಲ್ಲಯ್ಯನ ದರ್ಶನಕ್ಕೆ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.

ಭಕ್ತರು ಮಲ್ಲಯ್ಯನ ದರ್ಶನ ಪಡೆಯುವ ಮುನ್ನ ಹೊನ್ನಕೇರಿಯಲ್ಲಿ ಪುಣ್ಯಸ್ನಾನ ಮಾಡುವ ಸಂಪ್ರದಾಯವಿದೆ. ಇದೇ ಹಿನ್ನೆಲೆಯಲ್ಲಿ ಬೆಳಗ್ಗೆ ಸುಮಾರು 11 ಗಂಟೆಗೆ ಲಾಲಪ್ಪ ಅವರು ಕುಟುಂಬ ಸಮೇತ ಮೈಲಾಪುರಕ್ಕೆ ಆಗಮಿಸಿ ಹೊನ್ನಕೇರಿಯಲ್ಲಿ ಸ್ನಾನಕ್ಕೆ ಇಳಿದಿದ್ದರು. ಅವರಿಗೆ ಈಜು ಬರುತ್ತಿರಲಿಲ್ಲ ಎನ್ನಲಾಗಿದ್ದು, ಈಜಲು ಪ್ರಯತ್ನಿಸುವ ವೇಳೆ ಕೆರೆಯ ಆಳವಾದ ನೀರಿನಲ್ಲಿ ಸಿಲುಕಿ ಮುಳುಗಿದ್ದಾರೆ.

ಜನಸಂದಣಿಯ ನಡುವೆ ಘಟನೆ ತಕ್ಷಣ ಗಮನಕ್ಕೆ ಬಾರದ ಹಿನ್ನೆಲೆಯಲ್ಲಿ ಕೆಲ ಸಮಯದ ಬಳಿಕ ಕುಟುಂಬಸ್ಥರು ಆತಂಕಗೊಂಡು ಹುಡುಕಾಟ ನಡೆಸಿದ್ದಾರೆ. ವಿಷಯ ತಿಳಿದು ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ವೀರೇಶ್ ಹಾಗೂ ಸಿಬ್ಬಂದಿ ಮೈಲಾಪುರಕ್ಕೆ ತೆರಳಿ, ಸ್ಥಳೀಯ ಈಜುಗಾರ ಯುವಕರ ಸಹಾಯದಿಂದ ಕೆರೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಬಳಿಕ ಲಾಲಪ್ಪ ಅವರ ಮೃತದೇಹವನ್ನು ನೀರಿನಿಂದ ಹೊರತೆಗೆಯಲಾಗಿದೆ.

ಈ ಕುರಿತು ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

You Might Also Like

Leave a Reply

Your email address will not be published. Required fields are marked *

Suddi Belaku