ಯಾದಗಿರಿ ಆದರ್ಶ ವಿದ್ಯಾಲಯದಲ್ಲಿ ಮಕ್ಕಳ ಹಕ್ಕುಗಳ ಕುರಿತು ಜಾಗೃತಿ

Posted by

–

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ನಗರದ ಹೊರವಲಯದಲ್ಲಿರುವ ಆದರ್ಶ ವಿದ್ಯಾಲಯ ಪ್ರೌಢಶಾಲೆಯಲ್ಲಿ ಮಕ್ಕಳ ಹಕ್ಕುಗಳು ಹಾಗೂ ಮಕ್ಕಳ ರಕ್ಷಣೆಗೆ ಸಂಬಂಧಿಸಿದ ವಿವಿಧ ಕಾನೂನುಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆ, ಬಾಲ ನ್ಯಾಯ ಕಾಯ್ದೆ, ಬಾಲಕಾರ್ಮಿಕ ನಿರ್ಮೂಲನೆ ಸೇರಿದಂತೆ ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಕಾನೂನುಗಳ ಕುರಿತು ಮಾಹಿತಿ ನೀಡಲಾಯಿತು. ವಿಶೇಷ ದತ್ತು ಕೇಂದ್ರ, ಮಕ್ಕಳ ಸಹಾಯವಾಣಿ 1098 ಹಾಗೂ ಸರ್ಕಾರದಿಂದ ಮಕ್ಕಳಿಗೆ ದೊರೆಯುವ ವಿವಿಧ ಸೌಲಭ್ಯಗಳ ಬಗ್ಗೆಯೂ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮರಿಯಪ್ಪ ಮಾತನಾಡಿ, ಪೋಕ್ಸೋ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲ ನ್ಯಾಯ ಕಾಯ್ದೆ ಹಾಗೂ ಬಾಲಕಾರ್ಮಿಕ ನಿರ್ಮೂಲನೆ ಸೇರಿದಂತೆ ಮಕ್ಕಳ ರಕ್ಷಣೆಗೆ ಇರುವ ಕಾನೂನುಗಳ ಕುರಿತು ವಿವರಿಸಿದರು. ಮಕ್ಕಳು ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಂಡು, ಯಾವುದೇ ಸಮಸ್ಯೆ ಎದುರಾದಲ್ಲಿ ಸೂಕ್ತ ನೆರವು ಪಡೆಯಬೇಕು ಎಂದು ತಿಳಿಸಿದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕ್ಷೇತ್ರ ಕಾರ್ಯಕರ್ತ ಪರ್ವತರೆಡ್ಡಿ ಅವರು ಮಕ್ಕಳ ಹಕ್ಕುಗಳ ಕುರಿತು ಮಾಹಿತಿ ನೀಡಿದರು. ಘಟಕದ ಕಾರ್ಯಕರ್ತೆ ಕುಮಾರಿ ರಾಜೇಶ್ವರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರೌಢಶಾಲೆಯ ಪ್ರಭಾರಿ ಮುಖ್ಯಗುರು ಬಾಪುಗೌಡ ಮಾತನಾಡಿ, ಮಕ್ಕಳ ಸುರಕ್ಷತೆ ಹಾಗೂ ಹಕ್ಕುಗಳಿಗೆ ಸಂಬಂಧಿಸಿದ ಕಾನೂನುಗಳ ಬಗ್ಗೆ ವಿದ್ಯಾರ್ಥಿಗಳು ಅರಿವು ಹೊಂದಿರಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಹಾಯಕ ಶಿಕ್ಷಕರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *

↑
Suddi Belaku