ರಾಯಚೂರು ಮಹಿಳಾ ಕಾಲೇಜಿನಲ್ಲಿ ಸಂಶೋಧನಾ ನೈತಿಕತೆ ಉಪನ್ಯಾಸ

Posted by

ಸುದ್ದಿ ಬೆಳಕು ವಾರ್ತೆ

ರಾಯಚೂರು  : “ಸಂಶೋಧನಾ ಕ್ಷೇತ್ರದಲ್ಲಿ ಪ್ರಾಮಾಣಿಕತೆ, ಸ್ವಂತಿಕೆ, ಪಾರದರ್ಶಕತೆ ಹಾಗೂ ಜವಾಬ್ದಾರಿ ಅತ್ಯಂತ ಮೂಲಭೂತ ಮೌಲ್ಯಗಳಾಗಿವೆ. ಸೂಕ್ತ ಆಕರ ಉಲ್ಲೇಖವಿಲ್ಲದೆ ಇತರರ ಮಾಹಿತಿಯನ್ನು ಬಳಸುವುದು (ಪ್ಲೆಜಿಯರಿಸಂ) ಹಾಗೂ ಅಂಕಿ-ಅಂಶಗಳನ್ನು ತಿರುಚುವುದು (ಡೇಟಾ ಫಾಲ್ಸಿಫಿಕೇಶನ್) ನೈತಿಕ ಅಪರಾಧವಾಗಿದ್ದು, ಇದು ಸಂಶೋಧನೆಯ ವಿಶ್ವಾಸಾರ್ಹತೆಯನ್ನೇ ಕುಗ್ಗಿಸುತ್ತದೆ,” ಎಂದು ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಘವೇಂದ್ರ ತಿಳಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶದ (ಐಕ್ಯೂಎಸಿ) ಅಡಿಯಲ್ಲಿ ಬುಧವಾರ ಆಯೋಜಿಸಲಾಗಿದ್ದ “ವಿಶೇಷ ಉಪನ್ಯಾಸ ಸರಣಿ” ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ‘ಸಂಶೋಧನೆಯಲ್ಲಿ ನೈತಿಕತೆ: ಸಾಹಿತ್ಯ ಚೌರ್ಯ ಮತ್ತು ಅಂಕಿ-ಅಂಶಗಳ ತಿರುಚುವಿಕೆ’ (Ethics in Research: Plagiarism and Data Falsification) ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಸರಿಯಾದ ಆಕರಗಳು ಮತ್ತು ಗ್ರಂಥಋಣವನ್ನು ದಾಖಲಿಸುವ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸಬೇಕು ಎಂದು ಅವರು ಪ್ರತಿಪಾದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲೆ ಡಾ. ಸುಗುಣ ಬಸವರಾಜ, “ಸಂಶೋಧನೆಯು ಕೇವಲ ಹೊಸ ಜ್ಞಾನ ಸೃಷ್ಟಿಸುವ ಪ್ರಕ್ರಿಯೆಯಲ್ಲ, ಬದಲಿಗೆ ಅದು ಪ್ರಾಮಾಣಿಕತೆ ಮತ್ತು ನೈತಿಕತೆಯ ತಳಹದಿಯ ಮೇಲೆ ನಿಲ್ಲುವ ಬೌದ್ಧಿಕ ಕಾರ್ಯವಾಗಿದೆ. ಇಂತಹ ಮಾರ್ಗದರ್ಶಿ ಉಪನ್ಯಾಸಗಳು ವಿದ್ಯಾರ್ಥಿನಿಯರಲ್ಲಿ ಸಂಶೋಧನಾ ನೈತಿಕತೆಯ ಅರಿವು ಮೂಡಿಸುವುದರ ಜೊತೆಗೆ ಗುಣಮಟ್ಟದ ಅಧ್ಯಯನಕ್ಕೆ ಪ್ರೇರಣೆ ನೀಡಲಿವೆ,” ಎಂದರು.

ಐಕ್ಯೂಎಸಿ ಸಂಚಾಲಕಿ ಹಾಗೂ ಭೌತಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಜ್ಯೋತಿ ಸಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಂಥಪಾಲಕ ಡಾ. ಸುರೇಶ ಪಾಟೀಲ್ ಸಂಪನ್ಮೂಲ ವ್ಯಕ್ತಿ ಡಾ. ರಾಘವೇಂದ್ರ ಅವರನ್ನು ಪರಿಚಯಿಸಿದರು. ವೇದಿಕೆಯಲ್ಲಿ ಐಕ್ಯೂಎಸಿ ಸಹ ಸಂಚಾಲಕ ಹಾಗೂ ಗಣಕವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಶರಣಗೌಡ ಕೆ. ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಸಹ ಪ್ರಾಧ್ಯಾಪಕರಾದ ಡಾ. ಸೈಯಿದಾ ರಷೀದಾ ಪರ್ವೀನ್, ಡಾ. ಸ್ವರೂಪರಾಣಿ, ಡಾ. ಉಮಾದೇವಿ, ಶ್ರೀಮತಿ ಸುಮಿತ್ರಾ ಪ್ಯಾಟಿ, ರಂಗನಾಥ ಬಿಲ್ಲಾರ್, ಸಹಾಯಕ ಪ್ರಾಧ್ಯಾಪಕರಾದ ಡಾ. ಸಂತೋಷಕುಮಾರ, ಡಾ. ಚನ್ನಬಸವ, ಶ್ರೀಮತಿ ಸರಸ್ವತಿ, ಡಾ. ಅಸ್ಮಾ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪ್ರಸನ್ನಕುಮಾರ ಹಾಗೂ ಅತಿಥಿ ಉಪನ್ಯಾಸಕರು ಪಾಲ್ಗೊಂಡಿದ್ದರು.

ವಿದ್ಯಾರ್ಥಿನಿ ಸಂಜನಾ ಪ್ರಾರ್ಥಿಸಿದರು, ಶಿರಿಷಾ ಸ್ವಾಗತಿಸಿದರು, ಸಾನಿಯಾ ನಿರೂಪಿಸಿದರು ಹಾಗೂ ಪವಿತ್ರಾ ವಂದಿಸಿದರು. ನೂರಾರು ವಿದ್ಯಾರ್ಥಿನಿಯರ ಸಕ್ರಿಯ ಪಾಲ್ಗೊಳ್ಳುವಿಕೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

You Might Also Like

Leave a Reply

Your email address will not be published. Required fields are marked *

Suddi Belaku