ಯಾದಗಿರಿ ಬರ ಘೋಷಣೆಗೆ ಆಗ್ರಹ: ಜಿಲ್ಲಾ ಉಸ್ತುವಾರಿ ಸಚಿವರಿಗೆ ಕರವೇ ಮುತ್ತಿಗೆ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಜಿಲ್ಲೆಯ ಉಳಿದ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸದೆ ಜಿಲ್ಲಾ ಕೆಡಿಪಿ ಸಭೆ ನಡೆಸಲು ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಜಿಲ್ಲಾ ಘಟಕದ ವತಿಯಿಂದ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯ ಬಳಿಕ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ, ಜಿಲ್ಲೆಯಲ್ಲಿ ಬರದ ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದರೂ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸದೆ ಕೆಡಿಪಿ ಸಭೆ ನಡೆಸಲು ಮುಂದಾಗಿರುವ ಸರ್ಕಾರದ ಧೋರಣೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಜಿಲ್ಲೆಯ ಉಳಿದ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಎರಡನೇ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಜನರಿಗೆ ಸ್ಪಷ್ಟ ಭರವಸೆ ನೀಡಿದ್ದರು. ಆದರೆ ಹಲವು ದಿನಗಳು ಕಳೆದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಜನರಿಗೆ ಭರವಸೆ ನೀಡಿ ಬಳಿಕ ಅದನ್ನು ಮರೆತುಬಿಡುವುದು ಜವಾಬ್ದಾರಿಯುತ ಆಡಳಿತದ ಲಕ್ಷಣವಲ್ಲ ಎಂದು ಅವರು ಕಿಡಿಕಾರಿದರು.

ಬರದ ತೀವ್ರ ಹೊಡೆತಕ್ಕೆ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಕೃಷಿ ಚಟುವಟಿಕೆಗಳು ಹಿನ್ನಡೆ ಕಂಡಿವೆ. ಹಲವು ಗ್ರಾಮಗಳಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಸಮಸ್ಯೆ ಸೇರಿದಂತೆ ಗ್ರಾಮೀಣ ಜನರ ಜೀವನೋಪಾಯದ ಮೇಲೂ ಬರದ ಪರಿಣಾಮ ಬೀರುತ್ತಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸದೆ ಕೇವಲ ಕೆಡಿಪಿ ಸಭೆ ನಡೆಸುವುದು ಯಾದಗಿರಿ ಜಿಲ್ಲೆಯ ಜನರ ನೋವಿನೊಂದಿಗೆ ಚೆಲ್ಲಾಟವಾಡಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಈ ಹಿಂದೆ ನೀಡಿದ ಭರವಸೆಯನ್ನು ತಕ್ಷಣ ಈಡೇರಿಸಿ, ಬರಪೀಡಿತವಾಗಿರುವ ಜಿಲ್ಲೆಯ ಉಳಿದ ತಾಲೂಕುಗಳನ್ನು ಸರ್ಕಾರದ ನಿಯಮಾನುಸಾರ ಬರಪೀಡಿತ ಎಂದು ಘೋಷಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಬರ ಘೋಷಣೆ ಮಾಡದೆ ಕೆಡಿಪಿ ಸಭೆ ನಡೆಸುವ ಸರ್ಕಾರದ ನಿರ್ಧಾರವನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಕರವೇ ಮುಖಂಡರು ಒತ್ತಾಯಿಸಿದರು.

ರೈತರ ನೋವನ್ನು ಕಡೆಗಣಿಸಿ ಬರಪೀಡಿತ ಘೋಷಣೆಯನ್ನು ಮತ್ತಷ್ಟು ವಿಳಂಬ ಮಾಡಿದರೆ ಕರವೇ ಹೋರಾಟವನ್ನು ತೀವ್ರಗೊಳಿಸಲಿದೆ. ಬರ ಘೋಷಣೆ, ರೈತರಿಗೆ ದೊರೆಯಬೇಕಾದ ಪರಿಹಾರ ಹಾಗೂ ಅಗತ್ಯ ಬರ ಪರಿಹಾರ ಕ್ರಮಗಳನ್ನು ಕೈಗೊಳ್ಳುವವರೆಗೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿಭಟನಾಕಾರರೊಂದಿಗೆ ಮಾತನಾಡಿ, ಸೆಪ್ಟೆಂಬರ್ 16ರೊಳಗಾಗಿ ಮೂರನೇ ಪಟ್ಟಿಯಲ್ಲಿ ಜಿಲ್ಲೆಯ ಉಳಿದ ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಿ, ರೈತರಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಮಲ್ಲು ಮಾಳಿಕೇರಿ, ನಿಂಗಪ್ಪ ಗುಡುಗುಡಿ, ವಿಶ್ವರಾಜ್ ಪಾಟೀಲ್, ಅಶೋಕ ನಾಯಕ, ಬಸವರಾಜ ಜಗನ್ನಾಥ್, ರಾಜು ಪಗಲಾಪೂರ, ಸೈದಪ್ಪ ಗೌಡಗೇರಾ, ಸಿದ್ದು ಸಾಹುಕಾರ್, ಶರಣು ತಿಂಥಣಿ, ವಿರುಪಾಕ್ಷ ಸ್ವಾಮಿ, ನಾಗು ತಾಂಡೂರಕರ್, ಭೀಮರಾಯ ಗೌಡಗೇರಾ, ವೆಂಕಟರೆಡ್ಡಿ ಕೌಳೂರು, ಮೋನೇಶ ಮಾದ್ವರ, ದೇವಸಿಂಗ್ ಠಾಕೋರ್, ಮಹೇಶ ಠಾಣಗುಂದಿ, ಹುಲಗಪ್ಪ ಚಟ್ನಳ್ಳಿ, ಗಂಗಣ್ಣ ಪೂಜಾರಿ, ರವಿ ಜಮ್ಮಾರ, ಮಲ್ಲು ಬಿಳ್ಹಾರ, ಮರೆಪ್ಪ ಕಡ್ಡಿ, ಕಾಶಿನಾಥ ನಾನೆಕ, ನಾಗಪ್ಪ ಪಿಲ್ಲಿ, ದೇವಪ್ಪ ನಾಯಕ, ಅಂಬ್ರೇಶ ನಾಟೇಕರ್, ತಿಮ್ಮಣ್ಣ ಕಟ್ಟಿಮನಿ, ವಿಶ್ವ ಯಾದಗಿರಿ, ರವಿ ಗಡ್ಡೆಸೂಗುರು, ರಮೇಶ ಡಿ. ನಾಯಕ ಸೇರಿದಂತೆ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.

You Might Also Like

Leave a Reply

Your email address will not be published. Required fields are marked *

Suddi Belaku