ನೀತಿ ಆಯೋಗಕ್ಕೆ ಸಿಎಂ ಡಿಕೆಶಿ ಮನವಿ: ಕೇಂದ್ರದ ಬಾಕಿ ಅನುದಾನ ಬಿಡುಗಡೆಗೆ ಪಟ್ಟು

Posted by

–

ಸುದ್ದಿ ಬೆಳಕು ವಾರ್ತೆ

ಬೆಂಗಳೂರು : “ಕೇಂದ್ರ ಸರ್ಕಾರವು ಈ ಹಿಂದಿನ ಆಯವ್ಯಯಗಳಲ್ಲಿ (ಬಜೆಟ್) ಕರ್ನಾಟಕಕ್ಕೆ ಘೋಷಿಸಿದ್ದ ವಿಶೇಷ ಅನುದಾನ ಸೇರಿದಂತೆ ರಾಜ್ಯಕ್ಕೆ ಸಂವಿಧಾನಬದ್ಧವಾಗಿ ಸಲ್ಲಬೇಕಾದ ನ್ಯಾಯಯುತ ತೆರಿಗೆ ಹಾಗೂ ಅನುದಾನ ಹಂಚಿಕೆಯ ಪಾಲನ್ನು ಬಿಡುಗಡೆ ಮಾಡಲು ತ್ವರಿತ ಕ್ರಮ ಕೈಗೊಳ್ಳಬೇಕು,” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೀತಿ ಆಯೋಗವನ್ನು ಬಲವಾಗಿ ಒತ್ತಾಯಿಸಿದ್ದಾರೆ.

ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಬುಧವಾರ ನೀತಿ ಆಯೋಗದ ಉಪಾಧ್ಯಕ್ಷರಾದ ಡಾ. ಅಶೋಕ್ ಕುಮಾರ್ ಲಾಹಿರಿ ಅವರೊಂದಿಗೆ ಸುದೀರ್ಘ ಹಾಗೂ ಮಹತ್ವದ ಉನ್ನತ ಮಟ್ಟದ ಸಮಾಲೋಚನಾ ಸಭೆ ನಡೆಸಿದ ಮುಖ್ಯಮಂತ್ರಿಗಳು, ರಾಜ್ಯದ ಆರ್ಥಿಕ ಪರಿಸ್ಥಿತಿ, ಒಕ್ಕೂಟ ವ್ಯವಸ್ಥೆಯ ಸವಾಲುಗಳು ಹಾಗೂ ನೂತನ ಅಭಿವೃದ್ಧಿ ಯೋಜನೆಗಳ ಕುರಿತು ಸಮಗ್ರ ಬೇಡಿಕೆಗಳನ್ನು ಮುಂದಿಟ್ಟರು.

ಸಭೆಯ ಬಳಿಕ ವಿವರ ನೀಡಿದ ಮುಖ್ಯಮಂತ್ರಿಗಳು, “ದೇಶದ ಒಟ್ಟಾರೆ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯತೆಯಿಂದ ಕೆಲಸ ಮಾಡಬೇಕಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಪ್ರತಿಯೊಂದು ರಾಜ್ಯವೂ ಆರ್ಥಿಕವಾಗಿ ಸಬಲವಾದಾಗ ಮಾತ್ರ ಭಾರತದ ಸರ್ವಾಂಗೀಣ ಪ್ರಗತಿ ಸಾಧ್ಯ. ಬಹಳ ದಿನಗಳ ನಂತರ ನೀತಿ ಆಯೋಗದೊಂದಿಗೆ ಪ್ರತ್ಯೇಕವಾಗಿ ರಾಜ್ಯದ ಸಮಸ್ಯೆಗಳನ್ನು ಮುಖಾಮುಖಿ ಚರ್ಚಿಸುವ ಅವಕಾಶ ಸಿಕ್ಕಿದ್ದು, ರಾಜ್ಯದ ನಿರಂತರ ಪ್ರಗತಿಗೆ ಆಯೋಗವು ಬೆನ್ನೆಲುಬಾಗಿ ನಿಲ್ಲಬೇಕು,” ಎಂದು ಹೇಳಿದರು.

ಜನಸಂಖ್ಯೆ ಮಾನದಂಡ: ದಕ್ಷಿಣದ ರಾಜ್ಯಗಳಿಗೆ ಶಿಕ್ಷೆ ಬೇಡ:

“ಕೇಂದ್ರ ಗೃಹ ಸಚಿವರೊಂದಿಗಿನ ಇತ್ತೀಚಿನ ಸಭೆಯಲ್ಲೂ ನಾನು ಈ ಗಂಭೀರ ವಿಚಾರವನ್ನು ಪ್ರಸ್ತಾಪಿಸಿದ್ದೇನೆ. ದಕ್ಷಿಣ ಭಾರತದ ರಾಜ್ಯಗಳು ರಾಷ್ಟ್ರೀಯ ಜನಸಂಖ್ಯಾ ನಿಯಂತ್ರಣ ನೀತಿಗಳನ್ನು ಅತ್ಯಂತ ಕಟ್ಟುನಿಟ್ಟಾಗಿ ಹಾಗೂ ಯಶಸ್ವಿಯಾಗಿ ಜಾರಿಗೊಳಿಸಿವೆ. ಆದರೆ ಉತ್ತರದ ಹಲವು ರಾಜ್ಯಗಳು ಜನಸಂಖ್ಯೆ ನಿಯಂತ್ರಣದಲ್ಲಿ ಹಿಂದುಳಿದಿವೆ. ಈಗ ಜನಸಂಖ್ಯೆಯನ್ನೇ ಏಕೈಕ ಮಾನದಂಡವನ್ನಾಗಿ ಪರಿಗಣಿಸಿ ಕೇಂದ್ರದ ತೆರಿಗೆ ಹಾಗೂ ಅನುದಾನ ಹಂಚಿಕೆಯನ್ನು ನಿಗದಿಪಡಿಸಿದರೆ, ಶಿಸ್ತು ಪಾಲಿಸಿದ ದಕ್ಷಿಣದ ರಾಜ್ಯಗಳಿಗೆ ಆರ್ಥಿಕವಾಗಿ ಅನ್ಯಾಯವೆಸಗಿ ಶಿಕ್ಷಿಸಿದಂತಾಗುತ್ತದೆ. ಈ ತಾರತಮ್ಯ ನೀತಿಯನ್ನು ಸರಿಪಡಿಸಬೇಕು,” ಎಂದು ಸಿಎಂ ಪ್ರತಿಪಾದಿಸಿದರು.

‘ಎರಡನೇ ಬೆಂಗಳೂರು’ ನಿರ್ಮಾಣಕ್ಕೆ ಒಲವು:

ಸಭೆಯಲ್ಲಿ ಮಾತನಾಡಿದ ನೀತಿ ಆಯೋಗದ ಉಪಾಧ್ಯಕ್ಷ ಡಾ. ಅಶೋಕ್ ಕುಮಾರ್ ಲಾಹಿರಿ ಅವರು, ರಾಜಧಾನಿ ಬೆಂಗಳೂರಿನ ಮೇಲಿನ ಜನಸಂಖ್ಯಾ ಮತ್ತು ಮೂಲಸೌಕರ್ಯದ ಅತಿಯಾದ ಹೊರೆಯನ್ನು ತಗ್ಗಿಸಲು ಕರ್ನಾಟಕದಲ್ಲಿ ‘ಎರಡನೇ ಬೆಂಗಳೂರು’ ನಿರ್ಮಿಸುವ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ನಡೆಸಬೇಕೆಂದು ಸಲಹೆ ನೀಡಿದರು. ಈ ಸಲಹೆಯನ್ನು ಮುಕ್ತವಾಗಿ ಸ್ವಾಗತಿಸಿದ ಮುಖ್ಯಮಂತ್ರಿಗಳು, “ಪ್ರಧಾನ ಮಂತ್ರಿಗಳು ಹಾಗೂ ಜಾಗತಿಕ ಸಮುದಾಯವು ಕರ್ನಾಟಕದ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದೆ. ನೀತಿ ಆಯೋಗದ ಆಶಯದಂತೆ ಅಂತರರಾಷ್ಟ್ರೀಯ ಗುಣಮಟ್ಟದ ಎರಡನೇ ಮಹಾನಗರವನ್ನು ಅಭಿವೃದ್ಧಿಪಡಿಸಲು ಸಮಗ್ರ ಯೋಜನಾ ನೀಲನಕ್ಷೆ ರೂಪಿಸಲಾಗುವುದು. ಇತರ ಮುಂದುವರಿದ ರಾಜ್ಯಗಳ ಯಶೋಗಾಥೆಗಳನ್ನು ಅಧ್ಯಯನ ಮಾಡಿ ಜಾಗತಿಕ ಹೂಡಿಕೆಗೆ ಪೂರಕವಾದ ವಾತಾವರಣ ಸೃಷ್ಟಿಸಲಾಗುವುದು,” ಎಂದು ಭರವಸೆ ನೀಡಿದರು.

ಮಾನವ ಸಂಪನ್ಮೂಲ ಮತ್ತು ಆರ್ಥಿಕ ಮುನ್ನಡೆ:

“ರಾಜ್ಯವು ಜಿಡಿಪಿ, ತಲಾದಾಯ, ಆವಿಷ್ಕಾರ ಸೂಚ್ಯಂಕ, ನೇರ ವಿದೇಶಿ ಬಂಡವಾಳ ಹೂಡಿಕೆ (FDI), ಸ್ಟಾರ್ಟ್‌ಅಪ್ ಹಾಗೂ ಐಟಿ ರಫ್ತುಗಳಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ ವಾರ್ಷಿಕ ೧.೬ ಲಕ್ಷ ಎಂಜಿನಿಯರ್‌ಗಳು, ಸುಮಾರು ೧೩ ಸಾವಿರ ವೈದ್ಯರು ಹೊರಬರುತ್ತಿದ್ದು, ೨೬ ಲಕ್ಷಕ್ಕೂ ಅಧಿಕ ಐಟಿ ವೃತ್ತಿಪರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರಿಗೆ ದೇಶದ ಎಲ್ಲೆಡೆಯಿಂದ ವಲಸೆ ಬರುತ್ತಿರುವುದರಿಂದ ಮೂಲಸೌಕರ್ಯಗಳ ಮೇಲೆ ತೀವ್ರ ಒತ್ತಡವಿದೆ. ಇದನ್ನು ಸರಿಪಡಿಸಲು ಸುರಂಗ ಮಾರ್ಗ, ಉಪನಗರ ರೈಲು ಸೇರಿದಂತೆ ಹಲವು ಬೃಹತ್ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅಲ್ಲದೆ, ರಾಜಸ್ಥಾನದ ನಂತರ ದೇಶದಲ್ಲೇ ಅತಿ ಹೆಚ್ಚು ಒಣಭೂಮಿ (Dry Land) ಹೊಂದಿರುವ ರಾಜ್ಯ ಕರ್ನಾಟಕವಾಗಿದ್ದು, ಕೃಷಿ ಕ್ಷೇತ್ರದ ಉನ್ನತಿಗೆ ಕೇಂದ್ರದಿಂದ ವಿಶೇಷ ಆರ್ಥಿಕ ನೆರವಿನ ಅಗತ್ಯವಿದೆ,” ಎಂದರು.

ಗ್ಯಾರಂಟಿ ಕ್ರಾಂತಿ ಹಾಗೂ ಆಡಳಿತ ಸುಧಾರಣೆ:

ಸರ್ಕಾರವು ಸಾಮಾಜಿಕ ಭದ್ರತೆಗಾಗಿ ವಾರ್ಷಿಕ ₹೫೦ ಸಾವಿರ ಕೋಟಿಗೂ ಹೆಚ್ಚು ಅನುದಾನವನ್ನು ೫ ಗ್ಯಾರಂಟಿ ಯೋಜನೆಗಳಿಗೆ ಮತ್ತು ರೈತರ ಉಚಿತ ವಿದ್ಯುತ್ ಸಬ್ಸಿಡಿಗಾಗಿ ₹೨೦ ಸಾವಿರ ಕೋಟಿ ಮೀಸಲಿಟ್ಟಿದೆ. ಆಡಳಿತವನ್ನು ಜನರ ಮನೆಬಾಗಿಲಿಗೆ ತಲುಪಿಸಲು ‘ಪ್ರಜಾಸೇವೆ’ ಎಂಬ ಹೊಸ ಇಲಾಖೆ, ಗ್ಲೋಬಲ್ ಹೂಡಿಕೆದಾರರ ಅನುಕೂಲಕ್ಕಾಗಿ ಪ್ರತ್ಯೇಕ ‘ವಿದೇಶಿ ಬಂಡವಾಳ ಹೂಡಿಕೆ ಇಲಾಖೆ’, ಕರಾವಳಿ ಪ್ರವಾಸೋದ್ಯಮ ನೀತಿ ಹಾಗೂ ಭೂ ದಾಖಲೆಗಳ ಡಿಜಿಟಲೀಕರಣದ ‘ಭೂಮಿ ಗ್ಯಾರಂಟಿ’ ಯೋಜನೆಗಳನ್ನು ಸಮರ್ಥವಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸಿಎಂ ವಿವರಿಸಿದರು.

೨೦೨೫-೨೬ನೇ ಸಾಲಿನಲ್ಲಿ ರಾಜ್ಯದ ಜಿಎಸ್‌ಡಿಪಿ (GSDP) ₹೩೨.೮೧ ಲಕ್ಷ ಕೋಟಿಗೆ ತಲುಪಿದ್ದು, ಶೇ. ೮.೧ ರಷ್ಟು ಆರೋಗ್ಯಕರ ಬೆಳವಣಿಗೆ ದರ ದಾಖಲಿಸಿದೆ. ಇದರಲ್ಲಿ ಸೇವಾ ವಲಯ ಶೇ. ೭೦, ಕೈಗಾರಿಕಾ ವಲಯ ಶೇ. ೧೯ ಹಾಗೂ ಕೃಷಿ ಕ್ಷೇತ್ರ ಶೇ. ೧೧ ರಷ್ಟು ಪಾಲು ಹೊಂದಿದೆ ಎಂದು ಅಧಿಕಾರಿಗಳು ಸಭೆಗೆ ಅಂಕಿ-ಅಂಶಗಳ ಸಮೇತ ವಿವರಣೆ ನೀಡಿದರು.

ಸಭೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಎಲ್.ಕೆ. ಅತೀಕ್, ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ, ಅಭಿವೃದ್ಧಿ ಆಯುಕ್ತೆ ಉಮಾ ಮಹಾದೇವನ್, ಸಿಎಂ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

↑
Suddi Belaku