
ಸುದ್ದಿ ಬೆಳಕು ವಾರ್ತೆ
ಹುಣಸಗಿ (ಯಾದಗಿರಿ): “ಗ್ರಾಮೀಣ ಭಾಗದ ಕೂಲಿಕಾರರಿಗೆ ಆರ್ಥಿಕ ಭದ್ರತೆ ಒದಗಿಸಲು ರೂಪಿಸಲಾಗಿರುವ ‘ವಿಬಿ-ಜಿ-ರಾಮ್-ಜಿ’ (VB-G-RAM-G) ಯೋಜನೆಯಡಿ ಕೆಲಸ ಪಡೆಯಲು ಪ್ರತಿಯೊಬ್ಬ ಕೂಲಿಕಾರರು ನಮೂನೆ-೧ ರಲ್ಲಿ ಅರ್ಜಿ ಸಲ್ಲಿಸಿ ಕಡ್ಡಾಯವಾಗಿ ಜಾಬ್ ಕಾರ್ಡ್ ಪಡೆದುಕೊಳ್ಳಬೇಕು,” ಎಂದು ಬೈಚಬಾಳ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹಣಮಂತಪ್ಪ ಹೆಗ್ಗುರು ತಿಳಿಸಿದರು.
ತಾಲ್ಲೂಕಿನ ಬೈಚಬಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡಲಗಿ ಗ್ರಾಮದ ಹನುಮಾನ್ ದೇವಸ್ಥಾನದ ಆವರಣದಲ್ಲಿ ಬುಧವಾರ (ಆ. ೧೯) ಐಇಸಿ (IEC) ಚಟುವಟಿಕೆಯಡಿ ಆಯೋಜಿಸಲಾಗಿದ್ದ ಜಾಬ್ ಕಾರ್ಡ್ ಮೇಳ, ಮನೆ ಮನೆ ಭೇಟಿ ಹಾಗೂ ಕೆಲಸದ ಬೇಡಿಕೆ ಸ್ವೀಕಾರ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
“ರಾಜ್ಯದಲ್ಲಿ ಅನುಷ್ಠಾನಗೊಂಡಿರುವ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಅಜೀವಿಕ ಮಿಷನ್ ಯೋಜನೆಯಡಿ ಕೆಲಸ ನಿರ್ವಹಿಸಲು ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಒದಗಿಸಿ ನೂತನ ಜಾಬ್ ಕಾರ್ಡ್ ಪಡೆದುಕೊಳ್ಳಬೇಕು. ಈ ಹಿಂದೆ ಒಂದು ಕುಟುಂಬಕ್ಕೆ ವಾರ್ಷಿಕ ೧೦೦ ದಿನಗಳ ಕೆಲಸ ನೀಡಲಾಗುತ್ತಿತ್ತು, ಇದೀಗ ಅದನ್ನು ೧೨೫ ದಿನಗಳಿಗೆ ಹೆಚ್ಚಿಸಲಾಗಿದೆ. ಅಲ್ಲದೆ ದಿನಗೂಲಿಯನ್ನು ₹೩೭೦ ರಿಂದ ₹೩೮೨ಕ್ಕೆ ಏರಿಕೆ ಮಾಡಲಾಗಿದೆ. ಆದ್ದರಿಂದ ಕೂಲಿಕಾರರು ಆಗಸ್ಟ್ ೧೫ ರಿಂದ ಸೆಪ್ಟೆಂಬರ್ ೧೫ ರವರೆಗೆ ನಡೆಯುವ ಈ ವಿಶೇಷ ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕು,” ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಸಿಬ್ಬಂದಿಗಳಿಗೆ ಸೂಚನೆ ನೀಡಿದ ಅವರು, “ಮನೆ ಮನೆಗೆ ಭೇಟಿ ನೀಡಿ ಜಾಬ್ ಕಾರ್ಡ್ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸುವುದರ ಜೊತೆಗೆ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಬೇಡಿಕೆ ಪಡೆದು ಮಾನವ ದಿನಗಳನ್ನು ಸೃಜಿಸುವ ಮೂಲಕ ನಿಗದಿತ ಗುರಿ ತಲುಪಬೇಕು,” ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಐಇಸಿ ಸಂಯೋಜಕ ಮಲ್ಲಿಕಾರ್ಜುನ, ಬಿಎಫ್‌ಟಿ ಗೋವಿಂದಪ್ಪ, ಡಿಇಒ ಹಾಗೂ ಜಿಕೆಎಂ ಪಾರ್ವತಿ, ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಕೂಲಿಕಾರರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.












Leave a Reply