
ಸುದ್ದಿ ಬೆಳಕು ವಾರ್ತೆ
ಯಾದಗಿರಿ : “1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು ದೇಶಕ್ಕೆ ಮುಕ್ತಿ ದೊರೆಯುವವರೆಗೂ ನಡೆದ ದೀರ್ಘ ಹೋರಾಟಗಳು, ಬ್ರಿಟಿಷರ ದಬ್ಬಾಳಿಕೆ-ಹಿಂಸೆಗಳ ನಡುವೆ ನಮ್ಮ ಪೂರ್ವಿಕರು ಮತ್ತು ಮಹಾನ್ ದೇಶಭಕ್ತರು ನೀಡಿದ ರಕ್ತ ಬಲಿದಾನದ ಸಾರ್ಥಕ ಸಂಕೇತವೇ ಇಂದಿನ ಸ್ವಾತಂತ್ರ್ಯ ದಿನ,” ಎಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಬಿ.ಎನ್. ವಿಶ್ವನಾಥ್ ನಾಯಕ್ ಅಭಿಪ್ರಾಯಪಟ್ಟರು.
ಭಾರತದ ೮೦ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಗರದ ಸರ್ಕಾರಿ ಪದವಿ ಕಾಲೇಜು ರಸ್ತೆಯಲ್ಲಿರುವ ಜಯ ಕರ್ನಾಟಕ ಜಿಲ್ಲಾ ಕಚೇರಿಯಲ್ಲಿ ಶನಿವಾರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಇದೇ ವೇಳೆ ಮಹಾತ್ಮಾ ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್, ಭಾರತಾಂಬೆ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಲಾಯಿತು.
“ಇಂದಿನ ಯುವ ಪೀಳಿಗೆ ಮೊಬೈಲ್ ಫೋನ್‌ಗಳಲ್ಲಿಯೇ ಹೆಚ್ಚು ಸಮಯ ಕಳೆಯದೆ, ನಮ್ಮ ಪೂರ್ವಿಕರ ಹಾಗೂ ಸ್ವಾತಂತ್ರ್ಯ ಸೇನಾನಿಗಳ ಭವ್ಯ ಇತಿಹಾಸವನ್ನು ಅಧ್ಯಯನ ಮಾಡಬೇಕು. ೧೮೫೭ರ ಹಲಗಲಿ ಬೇಡರ ದಂಗೆಯಿಂದ ಹಿಡಿದು ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ಪ್ರಾಣಾರ್ಪಣೆ ಮಾಡಿದ ಮಹಾನ್ ನಾಯಕರು, ನೇತಾಜಿ ಸುಭಾಷ್ ಚಂದ್ರ ಬೋಸ್ ಹಾಗೂ ಶಾಂತಿಯ ಹರಿಕಾರ ಮಹಾತ್ಮ ಗಾಂಧೀಜಿಯವರ ಜೀವನಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಕೇವಲ ಮೊಬೈಲ್ ಸಂದೇಶಗಳಿಗೆ ಸೀಮಿತವಾಗದೆ, ನೈಜ ದೇಶಭಕ್ತರ ಅನುಯಾಯಿಗಳಾಗಿ ದೇಶ ನಿರ್ಮಾಣಕ್ಕೆ ಕೊಡುಗೆ ನೀಡಬೇಕು,” ಎಂದು ಯುವಜನತೆಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಜಯ ಕರ್ನಾಟಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲುಸ್ವಾಮಿ ಗುಡಿಮಠ, ಮುಖಂಡರಾದ ಶಿವರಾಜ್ ಗುತ್ತೇದಾರ್, ನಾಗರಾಜ್ ರಾಮಸಮುದ್ರ, ನರೇಶ್ ಹೊಸಳ್ಳಿ, ಕೆ.ಬಿ. ಅರುಣ್ ಕುಮಾರ್, ಬಸ್ವಂತ್ ಸಿಂಗ್ ಠಾಕೂರ್, ಈಶಪ್ಪ ಕಪ್ಪನೋರ್, ಅಮೀರ್ ಚೌದ್ರಿ, ದೇವು ಆರ್ಯ, ಸಂದೀಪ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.












Leave a Reply